ಮೈಸೂರು,ಅ.28-ನಾಡಹಬ್ಬ ಮೈಸೂರು ದಸರಾದ ವಿಜಯದಶಮಿ ದಿನದಂದು (ಅಕ್ಟೋ ಬರ್ 26) ಮೈಸೂರು ಮೃಗಾಲಯಕ್ಕೆ 7,264 ವೀಕ್ಷಕರು ಭೇಟಿ ನೀಡಿದ್ದು, 7,33,950 ರೂ. ಆದಾಯ ಸಂಗ್ರಹವಾಗಿದೆ ಎಂದು ಮೈಸೂರು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.
ಕಳೆದ 2017ರಲ್ಲಿ ಮೃಗಾಲಯಕ್ಕೆ ಆಯುಧ ಪೂಜೆಯಂದು 15,449 ಮಂದಿ ಭೇಟಿ ನೀಡಿದ್ದು, ಆದಾಯವು 9.61 ಲಕ್ಷ ಹಾಗೂ ವಿಜಯ ದಶಮಿಯಂದು 31,722 ಮಂದಿ ವೀಕ್ಷಿಸಿದ್ದು, 18.81 ಕೋಟಿ ಆದಾಯ ಹರಿದು ಬಂದಿತ್ತು. ದಸರಾದ 10 ದಿನಗಳ ಅವಧಿಯಲ್ಲಿ 1.23 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, ಒಟ್ಟು 69.17 ಲಕ್ಷ ರೂ. ಆದಾಯಗಳಿಸಿತ್ತು. 2018ರಲ್ಲಿ ಆಯುಧ ಪೂಜೆಯಂದು 22,398 ಮಂದಿ ಪ್ರವಾಸಿ ಗರು ಭೇಟಿ ನೀಡಿದ್ದು, 17.74 ಲಕ್ಷ ರೂ. ಆದಾಯ ಬಂದಿದ್ದರೆ, ವಿಜಯದಶಮಿಯಂದು 32,301 ಮಂದಿ ಪ್ರವಾಸಿಗರು ಭೇಟಿ ನೀಡಿ 25.40 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ದಸರಾ 10 ದಿನಗಳ ಕಾಲ ಒಟ್ಟು 1.53 ಲಕ್ಷ ಮಂದಿ ವೀಕ್ಷಿಸಿದ್ದು, 105.64 ಲಕ್ಷ ರೂ. ಆದಾಯವಾಗಿತ್ತು.
2019ರಲ್ಲಿ ಆಯುಧ ಪೂಜೆಯಂದು 30,273 ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಆದಾಯವು 29.77 ಲಕ್ಷ ರೂ. ಸಂಗ್ರಹವಾಗಿದ್ದರೆ, ವಿಜಯದಶಮಿಯಂದು 28,386 ಮಂದಿ ಪ್ರವಾಸಿಗರ ಭೇಟಿಯಿಂದ 28.28 ಲಕ್ಷ ಸಂಗ್ರಹವಾಗಿತ್ತು. ದಸರಾ 10 ದಿನಗಳಂದು 1.65 ಲಕ್ಷ ಮಂದಿ ಭೇಟಿ ಕೊಟ್ಟಿದ್ದು, ಒಟ್ಟು 159.76 ಲಕ್ಷ ರೂ. ಆದಾಯ ಹರಿದುಬಂದಿತ್ತು.
ಈ ವರ್ಷ ಕೋವಿಡ್-19 ಹಿನ್ನೆಲೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಆಯುಧ ಪೂಜೆಯಂದು 3,534 ಮಂದಿ ಭೇಟಿ ನೀಡಿದ್ದು, ಆದಾಯವು 3.05 ಲಕ್ಷ ರೂ. ಹಾಗೂ ವಿಜಯದಶಮಿಯಂದು 7,264 ಮಂದಿ ಭೇಟಿ ನೀಡಿದ್ದು, ಆದಾಯವು7.33 ಲಕ್ಷದಷ್ಟು ಹಣ ಸಂಗ್ರಹವಾಗಿದೆ. ಅಲ್ಲದೆ ನವರಾತ್ರಿಯಂದು ಮೃಗಾಲಯಕ್ಕೆ ಒಟ್ಟು 20 ಲಕ್ಷ ಮಂದಿ ಭೇಟಿ ನೀಡಿದ್ದು, ಒಟ್ಟು 19.56 ಲಕ್ಷರೂ. ಸಂಗ್ರಹವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.