ಮೈಸೂರು, ಸೆ.19(ಎಂಟಿವೈ)- ಮೈಸೂರಿನ ಲಕ್ಷ್ಮೀಪುರಂನ ಜೆಎಲ್‍ಬಿ ರಸ್ತೆಯಲ್ಲಿ ರುವ ವೇದಾಂತ ಹೆಮ್ಮಿಗೆ ವೃತ್ತದಲ್ಲಿ ತ್ರಿಕೋನಾಕಾರದ 2 ಖಾಲಿ ಸ್ಥಳಗಳನ್ನು ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಸಂತಸ ಐವಿಎಫ್ ಸಂಸ್ಥೆ ಕಿರು ಉದ್ಯಾನವಾಗಿ ಅಭಿವೃದ್ಧಿಪಡಿಸಿದ್ದು, ಮೇಯರ್ ತಸ್ನೀಂ ಮತ್ತು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಶನಿವಾರ ಬಾದಾಮಿ ಗಿಡ ನೆಡುವ ಮೂಲಕ ಸಾರ್ವಜನಿಕರ ಬಳಕೆಗೆ ಸಮರ್ಪಿಸಿದರು. ಎಸ್‍ಡಿಎಂ ಕಾಲೇಜು ಬಳಿ ತ್ರಿಕೋನಾಕಾರದ ಖಾಲಿ ಜಾಗಗಳನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸಲು ಸಂತಸ ಐವಿಎಫ್ ಸಂಸ್ಥೆ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಮೈಸೂರು ಮಹಾನಗರ ಪಾಲಿಕೆಯೂ ಸಹಯೋಗ ನೀಡಿತ್ತು.
ಐವಿಎಫ್ ಸಂಸ್ಥೆ ನಿರ್ದೇಶಕಿ ಡಾ.ಸೌಮ್ಯ ದಿನೇಶ್ ಮಾತನಾಡಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ಸಲಹೆ ಮೇರೆಗೆ ಈ ಸ್ಥಳವನ್ನು ಸುಂದರ ಉದ್ಯಾನವಾಗಿ ಅಭಿವೃದ್ಧಿಪಡಿಸಿದೆ. ಆಸಕ್ತ ಖಾಸಗಿ ಸಂಸ್ಥೆಗಳು ಮೈಸೂರನ್ನು ಸುಂದರ ಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್, ಸದಸ್ಯೆ ಸೌಮ್ಯ, ಡಾ.ಪುಷ್ಪಲತಾ ಮತ್ತಿತರÀರಿದ್ದರು.