ನ್ಯೂ ಸಯ್ಯಾಜಿರಾವ್ ರಸ್ತೆಯ 2ನೇ ಕ್ರಾಸ್‍ನ   ರಾಜಕಾಲುವೆ ದುಃಸ್ಥಿತಿ; ನಿವಾಸಿಗಳಲ್ಲಿ ಭೀತಿ
ಮೈಸೂರು

ನ್ಯೂ ಸಯ್ಯಾಜಿರಾವ್ ರಸ್ತೆಯ 2ನೇ ಕ್ರಾಸ್‍ನ  ರಾಜಕಾಲುವೆ ದುಃಸ್ಥಿತಿ; ನಿವಾಸಿಗಳಲ್ಲಿ ಭೀತಿ

June 2, 2020

ಮೈಸೂರು, ಜೂ.1(ಪಿಎಂ)- ಬೆಳೆದು ನಿಂತ ಗಿಡಗಂಟಿ… ಕೊಳಚೆ ನೀರಿನ ದುರ್ವಾಸನೆ… ಸೊಳ್ಳೆ, ಕ್ರಿಮಿ-ಕೀಟಗಳ ತಾಣ… ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳ ರಾಶಿ… ಈ ಸ್ಥಳದಲ್ಲಿ ಮೂಗು ಮುಚ್ಚಿ ನಡೆಯದಿದ್ದರೆ ಮೂರ್ಚೆ ಹೋಗುವುದು ಗ್ಯಾರಂಟಿ…

ಇಂತಹ ಅನೈರ್ಮಲ್ಯ ತಾಣ ಮೈಸೂ ರಿನ ಹೃದಯ ಭಾಗದಲ್ಲೇ, ಅರಮನೆಗೆ ಅನತಿ ದೂರದಲ್ಲೇ ಇದ್ದರೂ ಮೈಸೂರು ಮಹಾನಗರ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ವಾರ್ಡ್ ನಂ.51ರ ವ್ಯಾಪ್ತಿಯ ನ್ಯೂ ಸಯ್ಯಾಜಿರಾವ್ ರಸ್ತೆಯ 2ನೇ ಕ್ರಾಸ್‍ನಲ್ಲಿ ಹಾದು ಹೋಗಿರುವ ರಾಜಕಾಲುವೆ (ಮಳೆ ನೀರು ಚರಂಡಿ) ಭಾಗದಲ್ಲಿ ಈ ಸ್ಥಿತಿ ಇದೆ. ಮಳೆಗಾಲ ಆರಂಭವಾಗಿದೆ. ಇಲ್ಲಿನ ತಗ್ಗು ಪ್ರದೇಶಗಳಿಗೆ ಚರಂಡಿ ನೀರು ನುಗ್ಗುವ ಸ್ಥಿತಿ ಇದೆ. ನಿವಾಸಿಗಳು ಆತಂಕದಲ್ಲಿದ್ದಾರೆ.

ಮೈಸೂರಿನಲ್ಲಿ 70 ಕಿ.ಮೀ. ಉದ್ದದ ರಾಜ ಕಾಲುವೆ ಇದ್ದು, ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸ್ವಚ್ಛತಾ ಕಾರ್ಯ ನಡೆ ದಿದೆ. ಆದರೆ ನ್ಯೂ ಸಯ್ಯಾಜಿರಾವ್ ರಸ್ತೆಯ ರಾಜಕಾಲುವೆ ಪ್ರದೇಶ ಮಾತ್ರ ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳ ರಾಶಿ ಯಿಂದ ಕೂಡಿದ್ದು, ಇಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಮೂಗು ಹಿಡಿದು ಸಾಗುವಂತೆ ಆಗಿದೆ. ಸ್ಥಳೀಯರಂತೂ ನಿತ್ಯ ನರಕಯಾತನೆ ಅನುಭವಿಸುವಂತಾಗಿದ್ದು, ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೂಳು ತುಂಬಿದ ಕಾರಣ ಹಾಗೂ ತಡೆ ಗೋಡೆಗಳು ಮುರಿದು ಬಿದ್ದಿರುವ ಹಿನ್ನೆಲೆ ಯಲ್ಲಿ ಭಾರೀ ಮಳೆಯಾದಲ್ಲಿ ನೀರು ಅಕ್ಕ ಪಕ್ಕದ ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ. ಮಳೆಗಾಲಕ್ಕೂ ಮುನ್ನವೇ ಹೂಳು ತೆಗೆದು ಸ್ವಚ್ಛತೆ ಕಾರ್ಯ ನಡೆಸಬೇಕು. ಆದರೆ ಅದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ. ಸಮಸ್ಯೆ ಎದುರಾದಾಗ ಕಾರ್ಯ ಪ್ರವೃತ್ತರಾಗುವುದನ್ನು ಪಾಲಿಕೆ ಇನ್ನಾದರೂ ಬಿಡಬೇಕು ಎಂಬುದು ನಿವಾಸಿಗಳ ಆಗ್ರಹ.

ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯ ಸೇರಿದಂತೆ ಅನೇಕ ರೋಗ ಹರ ಡಲು ಹೇಳಿ ಮಾಡಿಸಿದಂತಹ ವಾತಾ ವರಣ ಇಲ್ಲಿದೆ. ಕೊರೊನಾ ಸೋಂಕಿನ ಹಾವಳಿಯ ಈ ಸಂದರ್ಭದಲ್ಲಿ ಮತ್ತಷ್ಟು ಅನಾಹುತಕ್ಕೆ ಎಡೆಯಾಗಲಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Translate »