ಭಾರೀ ಜಲಸ್ಫೋಟದಿಂದ 2ನೇ ಮೊಣ್ಣಂಗೇರಿ  ಭೌಗೋಳಿಕ ಲಕ್ಷಣವೇ ಬದಲು
ಕೊಡಗು

ಭಾರೀ ಜಲಸ್ಫೋಟದಿಂದ 2ನೇ ಮೊಣ್ಣಂಗೇರಿ ಭೌಗೋಳಿಕ ಲಕ್ಷಣವೇ ಬದಲು

August 9, 2022

ಮಡಿಕೇರಿ, ಆ.8- ಅತಿಯಾದ ಮಳೆ ಸುರಿದು ಭಾರೀ ಜಲಸ್ಫೋಟದಿಂದ ಭೂ ಕುಸಿತವಾಗಿದ್ದ ಮದೆನಾಡು ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮದ ಭೌಗೋಳಿಕ ಲಕ್ಷಣಗಳೇ ಬದಲಾಗಿ ಹೋಗಿದೆ. 2018ರ ಪ್ರಾಕೃತಿಕ ವಿಕೋಪಕ್ಕೂ ಮುನ್ನ ಮೊಣ್ಣಂಗೇರಿ ಗ್ರಾಮದ ರಾಮಕೊಲ್ಲಿ ಎಂಬ ಪುಟ್ಟ ಊರು ರಾಮರಾಜ್ಯದಂತಿತ್ತು. ವಿಕೋಪದ ಬಳಿಕ ಗ್ರಾಮದ ಭೌಗೋಳಿಕ ಚಿತ್ರಣವೇ ಮರೆಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ರೆಡ್‍ಕ್ರಾಸ್ ಆಶ್ರಯ:ಇದೀಗ 2ನೇ ಮೊಣ್ಣಂ ಗೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಭಾರೀ ಮಳೆ ಸುರಿಯುತ್ತಿರುವ ಕಾರಣ ಗ್ರಾಮ ದಲ್ಲಿದ್ದ 25ಕ್ಕೂ ಹೆಚ್ಚು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಗ್ರಾಮದಲ್ಲಿ ಗಾಢ ಮೌನ ಆವರಿಸಿದೆ. ಎಲ್ಲಾ ಕುಟುಂಬಸ್ಥರಿಗೆ ಮಡಿಕೇರಿ ರೆಡ್‍ಕ್ರಾಸ್ ಕಟ್ಟಡದಲ್ಲಿ ಮಾನವೀಯ ಆಶ್ರಯ ನೀಡಲಾಗಿದೆ. ಮಕ್ಕಳು, ಮಹಿಳೆಯರು, ಪುರುಷರ ಸಹಿತ ವಯೋ ವೃದ್ದರೂ ಇಲ್ಲಿ ಆಶ್ರಯ ಪಡೆದಿ ದ್ದಾರೆ. ವೈದ್ಯರು, ಶುಶ್ರೂಷಕಿಯರು, ಪೊಲೀಸ್ ಸಿಬ್ಬಂದಿಗಳನ್ನು ಇಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿದೆ. ಜಾನುವಾರುಗಳು, ಸಾಕು ಪ್ರಾಣಿಗಳು ಮಾತ್ರವೇ ಈ ಗ್ರಾಮದಲ್ಲಿ ಉಳಿದುಕೊಂಡಿವೆ. ಭಾರೀ ಪ್ರಮಾಣ ದಲ್ಲಿ ಕೃಷಿ ಫಸಲು ನಾಶವಾಗಿದ್ದು, ಭೂ ಕುಸಿತದಿಂದ ಅಡಿಕೆ, ಕಾಫಿ, ಭತ್ತದ ಗದ್ದೆಗಳು ಕೊಚ್ಚಿ ಹೋಗಿವೆ.

ಹೊಸ ಮನೆಗೆ ಹಾನಿ: 2ನೇ ಮೊಣ್ಣಂಗೇರಿ ಗ್ರಾಮ ನಿವಾಸಿ ಬಾಲಕೃಷ್ಣ ಎಂಬವರು ಹೊಸ ಮನೆ ಕಟ್ಟಿದ್ದು, ಕೆಲ ದಿನಗಳ ಹಿಂದಷ್ಟೇ ಗೃಹ ಪ್ರವೇಶ ಮಾಡಿದ್ದರು. ಈ ಹಿಂದೆ ಸಂಭವಿಸಿದ ಜಲಸ್ಫೋಟಕ್ಕೆ ಬಂಡೆಯೊಂದು ಉರುಳಿ ಬಿದ್ದು, ಮನೆಗೆ ಹಾನಿಯಾಗಿದೆ. ಶಬ್ದ ಕೇಳಿ ಬಂದ ತಕ್ಷಣವೇ ಮನೆಯಿಂದ ಹೊರಗೆ ಓಡಿ ಬಂದು ಮಾದಪ್ಪ ಎಂಬವರ ಮನೆಯಲ್ಲಿ ಆಶ್ರಯ ಪಡೆದಿದ್ದೆವು ಎಂದು ಬಾಲಕೃಷ್ಣ ಅವರು ನೋವು ತೋಡಿಕೊಂಡಿದ್ದಾರೆ.

2013ರ ಭೂ ಕುಸಿತ:2ನೇ ಮೊಣ್ಣಂಗೇರಿ ಸರಕಾರಿ ಶಾಲೆಯ ಪಕ್ಕದಲ್ಲಿ 2013ರಲ್ಲಿ ಮೊದಲ ಬಿರುಕು ಕಾಣಿಸಿಕೊಂಡಿತ್ತು. ಆ ಸಾಲಿನ ಮಳೆಗಾಲ ದಲ್ಲಿ ಭೂಮಿ ಒಳಗಿನಿಂದ ನೀರು ಹರಿದು ಹೋಗುವ ಶಬ್ದ ಕೇಳಿ ಬಂದಿತ್ತು. ಸ್ಥಳ ಪರಿಶೀಲನೆಗೆ ಬಂದಿದ್ದ ವಿಜ್ಞಾನಿಗಳು ಇದು ಜಲ ಹರಿಯುವ ಶಬ್ದ, ಯಾವುದೇ ಆತಂಕ ಇಲ್ಲ ಎಂದಿದ್ದರು. ಆದರೆ 2018ರಲ್ಲಿ ಈ ಭಾಗದಲ್ಲಿ ಭಾರೀ ಭೂಕುಸಿದು ಅಪಾರ ಹಾನಿ ಯಾಗಿತ್ತು. ಇಂದಿಗೂ ಇದೇ ಪರಿಸ್ಥಿತಿ ಗ್ರಾಮ ದಲ್ಲಿದೆ ಎಂದು ಅಲ್ಲಿನ ನಿವಾಸಿ ಇಂದಿರಾ ವಿವರಿಸಿ ದರು. 3 ಎಕರೆ ಪ್ರದೇಶದಲ್ಲಿ ವರ್ಷದ ಊಟಕ್ಕಾಗಿ ಭತ್ತ, ವರಮಾನಕ್ಕಾಗಿ ಅಡಿಕೆ, ಕಾಫಿ ಬೆಳೆಯುತ್ತಿ ದ್ದೆವು. ಆದರೆ ದಿನ ಕಳೆದಂತೆ ಅಂತರ್ ಜಲದ ಮಟ್ಟವೂ ಕುಸಿತವಾಗಿ ಇದೀಗ ವಾರ್ಷಿಕ 1 ಭತ್ತ ಬೆಳೆ ಬೆಳೆಯುತ್ತಿದ್ದೇವೆ. ಅಡಿಕೆ, ಕಾಫಿ ಎಲ್ಲವೂ ನಾಶವಾಗಿದೆ ಎಂದು ಇಂದಿರಾ ಅಳಲು ತೋಡಿಕೊಂಡಿ ದ್ದಾರೆ. ಪ್ರತಿ ಮಳೆಗಾಲವೂ ಭಯದಲ್ಲೇ ಬದುಕು ತ್ತೇವೆ. ಹಾಗೆಂದು ಬದುಕು ಕಟ್ಟಿಕೊಂಡ ಊರನ್ನು ಶಾಶ್ವತವಾಗಿ ತೊರೆಯಲು ಸಾಧ್ಯವೇ ಎಂದು ಪ್ರಶ್ನಿಸುವ ಇಂದಿರಾ, ಮಳೆ ಕಡಿಮೆಯಾದ ಬಳಿಕ ಮತ್ತೆ ಗ್ರಾಮಕ್ಕೆ ತೆರಳುತ್ತೇವೆ ಎಂದು ನಗು ಬೀರಿದರು.

ಅಂದು ಲಕ್ಷಾಧೀಶ್ವರರು-ಇಂದು ಕೂಲಿಕಾರರು: 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಅತೀ ಸಣ್ಣ ಹಿಡುವಳಿದಾರರಾಗಿ ಬದುಕು ಕಟ್ಟಿಕೊಂಡಿದ್ದವರು. ಅಡಿಕೆ, ಕಾಫಿ, ಭತ್ತ ಬೆಳೆಗಳನ್ನು ಬೆಳೆಯುವ ಹಾಗೂ ಜೊತೆಯಲ್ಲಿಯೇ ಕಾರ್ಮಿಕರಾಗಿ ದುರಿಯುವ ಮೂಲಕ ಸ್ವಾವಲಂಭಿ ಜೀವನ ಸಾಗಿಸುತ್ತಿದ್ದರು. ಕೃಷಿಯಲ್ಲಿಯೇ ಖುಷಿ ಯಾಗಿ ಬದುಕು ಕಟ್ಟಿಕೊಂಡ ಇಲ್ಲಿನ ಜನರ ಬದುಕನ್ನು 2018ರ ಪ್ರಾಕೃತಿಕ ವಿಕೋಪ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿದೆ. ವಾರ್ಷಿಕವಾಗಿ ಲಕ್ಷ ರೂ.ಗಳ ಆದಾಯ ಪಡೆಯುತ್ತಿದ್ದವರು ಇದೀಗ ಜೀವನ ನಿರ್ವಹಣೆಗಾಗಿ ತೋಟಗಳಿಗೆ ಕೂಲಿ ಕೆಲಸಕ್ಕೆ ತೆರಳುವ ಸ್ಥಿತಿಗೆ ತಲುಪಿದ್ದಾರೆ.

ರಸ್ತೆಯೇ ಮಾಯ:ಕೆಲ ದಿನಗಳ ಹಿಂದೆ ಸಂಭವಿ ಸಿದ ಜಲಸ್ಫೋಟದಿಂದ ಈ ರಾಮಕೊಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದ್ದು, ಗ್ರಾಮದ ಒಳಗಿನ ರಸ್ತೆಗಳಿಗೂ ಭಾರೀ ಹಾನಿಯಾಗಿದೆ. ಜೋಡುಪಾಲ, ಮದೆನಾಡು, ಚೇರಂಬಾಣೆ ಕಡೆಗಳಿಗೆ ಇಲ್ಲಿನ ಜನರು ತೋಟ ಕಾರ್ಮಿಕರಾಗಿ ದುಡಿಯಲು ತೆರಳುತ್ತಾರೆ. ಜೀಪಿನಲ್ಲಿ ಆ ಊರುಗಳಿಗೆ ತೆರಳಿ ಸಂಜೆ ಮರಳುತ್ತಾರೆ. ಆದರೆ ರಸ್ತೆ ಸಂಪರ್ಕ ಕಡಿತವಾಗಿ ರುವ ಕಾರಣ ಜನರು ಕೂಲಿ ಕೆಲಸಕ್ಕೂ ತೆರಳಲಾಗದ ಸ್ಥಿಯಲ್ಲಿದ್ದಾರೆ ಎಂದು ಅಲ್ಲಿನ ನಿವಾಸಿಗಳಾದ ಈರಪ್ಪ ಗೌಡ, ಜಿ.ಜಿ.ಹೊನ್ನಮ್ಮ, ಕೆ.ಸಿ. ತಿಮ್ಮಪ್ಪ, ಡಯಾನ ಅವರುಗಳು ಅಳಲು ತೋಡಿಕೊಂಡಿದ್ದಾರೆ.

ಆತಂಕದಲ್ಲಿ ಶಾಲೆ: 2ನೇ ಮೊಣ್ಣಂಗೇರಿ, ರಾಮಕೊಲ್ಲಿ ಸುತ್ತಮುತ್ತಲಿನ ಹತ್ತಾರು ಮಕ್ಕಳು ಜೋಡುಪಾಲ ಸರಕಾರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದರು. ಈ ಶಾಲೆಯಲ್ಲಿದ್ದ ಒಟ್ಟು ಮಕ್ಕಳ ಸಂಖ್ಯೆ 31. ಪ್ರಾಕೃತಿಕ ವಿಕೋಪದ ಬಳಿಕ ಹಲವು ಕುಟುಂಬಗಳು ಗೋಳಿಕಟ್ಟೆ, ಸಂಪಾಜೆ, ಸುಳ್ಯ, ಮಂಗಳೂರು ಮತ್ತಿತ್ತರ ಕಡೆಗಳಿಗೆ ತೆರಳಿ ಆಶ್ರಯ ಪಡೆದಿದೆ. ಹೀಗಾಗಿ ಮಕ್ಕಳ ಸಂಖ್ಯೆಯೂ ಕ್ಷೀಣಿಸಿದೆ. ಮಾತ್ರವಲ್ಲದೇ ಜೋಡು ಪಾಲ ಸರಕಾರಿ ಶಾಲೆಯ ಮೇಲೆ ಭೂ ಕುಸಿದು ಕಟ್ಟಡಕ್ಕೆ ಹಾನಿಯಾಗಿದ್ದು, ಸದಕ್ಕೆ ಶಾಲೆ ಬಂದ್ ಆಗಿದೆ ಎಂದು ಅಲ್ಲಿನ ಶಿಕ್ಷಕಿಯರಾದ ದಮಯಂತಿ ಹಾಗೂ ಕವಿತಾ ಅವರು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ದುಃಖದಿಂದಲೇ ಮಾಹಿತಿ ನೀಡಿದರು.

Translate »