ಮೈಸೂರಿಗೂ ವ್ಯಾಪಿಸಿದ ಡ್ರಗ್ಸ್ ದಂಧೆ
ಮೈಸೂರು

ಮೈಸೂರಿಗೂ ವ್ಯಾಪಿಸಿದ ಡ್ರಗ್ಸ್ ದಂಧೆ

August 9, 2022

ಮೈಸೂರು, ಆ.8- ಡ್ರಗ್ಸ್ ದಂಧೆ ಸಾಂಸ್ಕøತಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ. ಆನ್‍ಲೈನ್ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರಿಗೆ ಎಂಡಿಎಂಎ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ವಿದ್ಯಾರ್ಥಿ ಸೇರಿ ಮೂವರನ್ನು ಇನ್ಸ್‍ಪೆಕ್ಟರ್ ಮಲ್ಲೇಶ್ ನೇತೃತ್ವದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಬೆಂಗಳೂರಿನ ಪೆಡ್ಲರ್‍ವೊಬ್ಬ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರ ಅಂತಿಮ ಬಿಬಿಎಂ ವಿದ್ಯಾರ್ಥಿ ಅದ್ನಾನ್ ಅಹಮ್ಮದ್ ಅಲಿ ಯಾಸ್ ಅದ್ನಾನ್ (21), ಎನ್‍ಆರ್ ಮೊಹಲ್ಲಾ ಎಜಿ ಬ್ಲಾಕ್‍ನ ಮೊಹಮ್ಮದ್ ತಬ್ರೇಜ್ ಅಲಿಯಾಸ್ ತಬ್ರೇಜ್ (30), ಮಂಡಿಮೊಹಲ್ಲಾದ ಷರೀದ್ ಪಾಷ ಅಲಿಯಾಸ್ ಷರೀದ್ (25) ಬಂಧಿತರಾ ಗಿದ್ದು, ಇವರಿಗೆ ಬೆಂಗಳೂರಿನ ಎಜಾಜ್ ಎಂಬಾತ ಮಾದಕ ವಸ್ತು ಪೂರೈಕೆ ಮಾಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ವಿವರ: ಮಂಡಿಮೊಹಲ್ಲಾದ ಪುಲಿಕೇಶಿ ರಸ್ತೆ, 4ನೇ ಮೇನ್‍ನಲ್ಲಿರುವ ಕರ್ನಾಟಕ ಆಟೋ ಕುಷನ್ ವಕ್ರ್ಸ್ ಮತ್ತು ಎಸ್‍ಎಪಿ ಆಟೋ ಟಿಂಕರಿಂಗ್ ವಕ್ರ್ಸ್ ಬಳಿ ಪಲ್ಸರ್ ಬೈಕ್ (ಕೆಎ09 ಇಯು 4680)ನಲ್ಲಿ ಬಂದಿರುವ ವ್ಯಕ್ತಿಗಳು ಮಾದಕ ವಸ್ತುಗಳ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಎಎಸ್‍ಐ ಆರ್.ರಾಜು, ಸಿಬ್ಬಂದಿಗಳಾದ ಎಸ್.ರವಿಕುಮಾರ್, ಡಿ.ಶ್ರೀನಿವಾಸ ಪ್ರಸಾದ್, ಅನಿಲ್, ಸುಬಾನಲ್ಲಾ ಬಾಲ್ದಾರ್, ವಿ.ರಘು ಅವರೊಂದಿಗೆ ದಾಳಿ ನಡೆಸಿದ್ದಾರೆ.

ಎಂಡಿಎಂಎ ಮಾದಕ ವಸ್ತುಗಳ ವ್ಯವಹಾರ ನಡೆಯುತ್ತಿದೆ ಎಂಬ ಮಾಹಿತಿ ಇದ್ದುದ್ದರಿಂದ ಅಲ್ಲಿಗೆ ಲಗ್ಗೆಯಿಟ್ಟ ಪೊಲೀಸರು ವ್ಯವಸ್ಥಿತವಾಗಿ ಸದರಿ ಪ್ರದೇಶದ ಎಲ್ಲಾ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿ, ದಾಳಿಗೆ ಮುಂದಾದರು. ಈ ವೇಳೆ ಅಲ್ಲಿದ್ದ ಮೂವರೂ ಪೊಲೀಸರನ್ನು ಕಂಡು ಓಡಲು ಯತ್ನಿಸಿದಾಗ ಬೆನ್ನತ್ತಿ ಹಿಡಿದಿದ್ದಾರೆ.

ಈ ಮೂವರ ಬಳಿ 1.04 ಗ್ರಾಂ, 1 ಗ್ರಾಂ ಮತ್ತು 2.58 ಗ್ರಾಂ ಸೇರಿ ಒಟ್ಟು 4.62 ಗ್ರಾಂ ಎಂಡಿಎಂಎ ಮಾದಕ ವಸ್ತು ಚಿಕ್ಕ ಚಿಕ್ಕ ಪ್ಯಾಕ್ ಗಳಲ್ಲಿ ದೊರೆತಿದೆ. ಅಲ್ಲದೆ, 43,500 ರೂ. ನಗದು ಕೂಡ ಇವರ ಬಳಿ ಇತ್ತು. ಈ ವ್ಯಕ್ತಿಗಳು ಗ್ರಾಹಕ ರಾಗಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಪರ್ಕಿಸಲು ಬಳಸುತ್ತಿದ್ದ ಒಂದು ಐಫೋನ್ ಸೇರಿದಂತೆ ಮೂರು ಫೋನ್‍ಗಳನ್ನು ಪೊಲೀಸರು ವಶಪಡಿಸಿಕೊಂಡರು. ಈ ಮಾದಕ ವಸ್ತುವನ್ನು ಇವರುಗಳು ಬೆಂಗಳೂರಿನ ಎಜಾಜ್ ಅಲಿಯಾಸ್ ಅಲೆಗ್ಸಾಂಡರ್ ಎಂಬಾತನಿಂದ ಖರೀದಿಸಿ ತಂದಿದ್ದರು ಎಂಬ ವಿಷಯವನ್ನು ಬಂಧಿತ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಮಾದಕ ವಸ್ತು ಮಾರಾಟಗಾರರು ಮೈಸೂರಿನ ಪ್ರತಿಷ್ಠಿತ ಕಾಲೇಜುಗಳ ಹಲವಾರು ವಿದ್ಯಾರ್ಥಿಗಳ ಸಂಪರ್ಕವನ್ನು ಹೊಂದಿದ್ದು, ಮೈಸೂರಿಗೆ ಮಾದಕ ವಸ್ತು ಬರುತ್ತಿದ್ದಂತೆಯೇ ಅವರನ್ನು ಆನ್‍ಲೈನ್ ಮೂಲಕ ಸಂಪರ್ಕಿಸುತ್ತಿದ್ದರು. ಈ ವ್ಯಕ್ತಿಗಳು ತಮ್ಮ ಗ್ರಾಹಕರಾದ ವಿದ್ಯಾರ್ಥಿಗಳು ಮತ್ತು ಏಜೆಂಟರ ಜೊತೆ ವೀಡಿಯೋ ಕಾಲ್‍ನಲ್ಲೇ ಮಾತನಾಡಿ, ನಿರ್ದಿಷ್ಟ ಸ್ಥಳದಲ್ಲಿ ಮಾದಕ ವಸ್ತು ಪೂರೈಸುತ್ತಿದ್ದರು. ಮಾದಕ ವಸ್ತು ಪೂರೈಕೆಗಾಗಿ ಒಂದೇ ಸ್ಥಳವನ್ನು ನಿಗದಿಪಡಿಸಿಕೊಳ್ಳದೆ ಪ್ರತಿ ಬಾರಿಯೂ ಬೇರೆ ಬೇರೆ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಸಣ್ಣ ಸಣ್ಣ ಪ್ಯಾಕೆಟ್‍ಗಳಲ್ಲಿ ಎಂಡಿಎಂಎ ಮಾದಕ ವಸ್ತುವನ್ನು 5 ರಿಂದ 6 ಸಾವಿರ ರೂ.ಗಳಿಗೆ ಮಾರುತ್ತಿದ್ದರು. ಹೆಚ್ಚಾಗಿ ಶ್ರೀಮಂತ ವಿದ್ಯಾರ್ಥಿಗಳೇ ಇವರ ಗ್ರಾಹಕರಾಗಿದ್ದರು ಎಂದು ತಿಳಿದುಬಂದಿದೆ. ಇದೀಗ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಈ ಮಾದಕ ವಸ್ತು ಜಾಲದಲ್ಲಿ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Translate »