ಗಂಡಾನೆಗೆ 3.50 ಲಕ್ಷ, ಹೆಣ್ಣಾನೆಗೆ 2.50 ಲಕ್ಷ,  ಮಾವುತ, ಕಾವಾಡಿಗಳಿಗೆ ತಲಾ ಲಕ್ಷ ರೂ.ವಿಮಾ ಸುರಕ್ಷೆ
ಮೈಸೂರು

ಗಂಡಾನೆಗೆ 3.50 ಲಕ್ಷ, ಹೆಣ್ಣಾನೆಗೆ 2.50 ಲಕ್ಷ, ಮಾವುತ, ಕಾವಾಡಿಗಳಿಗೆ ತಲಾ ಲಕ್ಷ ರೂ.ವಿಮಾ ಸುರಕ್ಷೆ

September 15, 2021

ಮೈಸೂರು, ಸೆ.14(ಎಂಟಿವೈ)- ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ಗಜಪಡೆ, ಅವುಗಳ ಮಾವುತರು, ಕಾವಾಡಿಗಳು ಮಾತ್ರವಲ್ಲದೆ, ಸಾರ್ವಜನಿಕ ಆಸ್ತಿ ಹಾನಿಗೂ ಅ.24ರವರೆಗೂ ಚಾಲ್ತಿಯಲ್ಲಿ ರುವಂತೆ 30 ಲಕ್ಷ ರೂ. ಮೊತ್ತದ ವಿಮೆ ಮಾಡಿಸ ಲಾಗಿದೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ.

ಅರಣ್ಯ ಭವನದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಮೈಸೂರು ಜಿಲ್ಲಾಡಳಿತದ ವತಿಯಿಂದ ದಸರಾ ಆನೆಗಳಿಗೆ ವಿಮೆ ಮಾಡಿಸಲಾಗಿದೆ. ಗಜಪಯಣಕ್ಕೆ ಚಾಲನೆ ದೊರೆತ ದಿನದಿಂದ(ಸೆ.13) ಚಾಲ್ತಿಗೆ ಬರುವಂತೆ ವಿಮೆ ಮಾಡಿಸ ಲಾಗಿದೆ. ಅಂಬಾರಿ ಆನೆ ಅಭಿಮನ್ಯು, ಪಟ್ಟದ ಆನೆ ವಿಕ್ರಮ, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ (ಗಂಡಾನೆ)ನಿಗೆ ತಲಾ 3.50 ಲಕ್ಷ ರೂ. ಹಾಗೂ ಕಾವೇರಿ, ಚೈತ್ರ ಹಾಗೂ ಲಕ್ಷ್ಮಿ (ಹೆಣ್ಣಾನೆ)ಗೆ ತಲಾ 2.50 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಲಾಗಿದೆ. 8 ಆನೆಗಳ ಮಾವುತರು, ಕಾವಾಡಿಗಳಿಗೂ (16 ಮಂದಿಗೆ) ತಲಾ 1 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಿದ್ದರೆ, ಆನೆ ಗಳಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ನಷ್ಟ ಭರಿಸುವ ನಿಟ್ಟಿನಲ್ಲಿ 30 ಲಕ್ಷ ರೂ. ಮೊತ್ತದ ಥರ್ಡ್ ಪಾರ್ಟಿ ವಿಮೆ ಮಾಡಿಸಲಾಗಿದೆ. ಈ ಎಲ್ಲಾ ವಿಮೆಯ ಅವಧಿ ಅ.24ರವರೆಗೂ ಚಾಲ್ತಿಯಲ್ಲಿರುತ್ತದೆ. ಆನೆಗಳು, ಮಾವುತರು, ಕಾವಾಡಿಗಳ ಹಿತಕಾಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

50 ಸಿಬ್ಬಂದಿ ಬಳಕೆ: ಕೊರೊನಾ ಆತಂಕದಿಂದಾಗಿ ದಸರಾ ಮಹೋತ್ಸವವನ್ನು ಸರಳ, ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಜಪಡೆಯೊಂದಿಗೆ ಬಂದಿರುವ ಮಾವುತ, ಕಾವಾಡಿ, ವಿಶೇಷ ಮಾವುತರು ಸೇರಿದಂತೆ 50 ಮಂದಿಯನ್ನಷ್ಟೇ ಆನೆಗಳ ಪಾಲನೆಗೆ ಬಳಸಿಕೊಳ್ಳಲಾಗುತ್ತಿದೆ. 8 ಆನೆಗಳಿಂದ 16 ಮಂದಿ ಮಾವುತರು, ಕಾವಾಡಿಗಳಿದ್ದರೆ, ಅವುಗಳಿಗೆ ಪೌಷ್ಟಿಕ ಆಹಾರ ತಯಾರಿಕೆಗೆ 6 ಮಂದಿ, ಸ್ವಚ್ಛತೆಗೆ 6 ಮಂದಿ, ವಿಶೇಷ ಆರೈಕೆ ಹಾಗೂ ವಿಶೇಷ ಸಂದರ್ಭದ ಬಳಕೆ ಸೇರಿ 50 ಮಂದಿಯನ್ನಷ್ಟೇ ಬಳಸಿ ಕೊಳ್ಳಲಾಗು ತ್ತಿದೆ. ಈಗ ಆನೆಗಳೊಂದಿಗೆ 38 ಮಂದಿ ಬಂದಿದ್ದಾರೆ. ಜಂಬೂಸವಾರಿ ದಿನ ಅಂಬಾರಿ ಕಟ್ಟಲು 10 ಮಂದಿ ಯನ್ನಷ್ಟೇ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಸೆ.19ರೊಳಗೆ ತಾಲೀಮು ಆರಂಭ: ಸೆ.16ರಂದು ಗಜಪಡೆ ಅರಮನೆ ಅಂಗಳ ಪ್ರವೇಶಿಸಲಿವೆ. ಎರಡು ದಿನ ವಿಶ್ರಾಂತಿ ಬಳಿಕ ಸೆ.18 ಅಥವಾ 19ರಿಂದ ಅರ ಮನೆ ಆವರಣದಲ್ಲೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ವಿಶೇಷ ಆಹಾರ: ಅರಮನೆ ಆವರಣದಲ್ಲಿ ದಸರಾ ಆನೆಗಳು, ಅವುಗಳ ಮಾವುತರು, ಕಾವಾಡಿಗಳಿಗೆ ಶೆಡ್ ನಿರ್ಮಿಸಲಾಗಿದೆ. ಅಲ್ಲದೆ, ನಾಳೆಯಿಂದಲೇ ಪೌಷ್ಟಿಕ ಆಹಾರ ಪೂರೈಕೆಯಾಗಲಿದೆ. ಇದಕ್ಕಾಗಿ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡಲಾಗಿದೆ. ಏಕಾಏಕಿ ಪೌಷ್ಟಿಕ ಆಹಾರ ನೀಡಿದರೆ, ಆನೆಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪೌಷ್ಠಿಕ ಆಹಾರ ನೀಡಲಾಗುತ್ತದೆ ಎಂದರು.

ಕುಟುಂಬಸ್ಥರ ಭಾಗಿಯಿಲ್ಲ: ಮಾವುತರು ಹಾಗೂ ಕಾವಾಡಿಗಳೊಂದಿಗೆ ಅವರ ಕುಟುಂಬ ಸದಸ್ಯರು ಬಂದಿಲ್ಲ. ಕೊರೊನಾ ಆತಂಕದಿಂದಾಗಿ ಕಳೆದ ವರ್ಷದಂತೆ ಈ ಬಾರಿಯೂ ಕುಟುಂಬಸ್ಥರನ್ನು ಕರೆತಂದಿಲ್ಲ ಎಂದರು.

Translate »