ಮೈಸೂರು ಜಿಲ್ಲೆಯಲ್ಲಿ 3.54 ಲಕ್ಷ ವಿದ್ಯಾರ್ಥಿಗಳು ಶಾಲಾ ಪ್ರವೇಶ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 3.54 ಲಕ್ಷ ವಿದ್ಯಾರ್ಥಿಗಳು ಶಾಲಾ ಪ್ರವೇಶ

September 9, 2020

ಮೈಸೂರು, ಸೆ.8(ಪಿಎಂ)- ಕೊರೊನಾ ಸೋಂಕಿನ ಭೀತಿ ಹೆಚ್ಚುತ್ತಲೇ ಇರುವುದರಿಂದ ರಾಜ್ಯದಲ್ಲಿ ಶಾಲೆ ಬಾಗಿಲು ತೆರೆಯು ವುದೋ ಇಲ್ಲವೋ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆಯೇ ವಿದ್ಯಾರ್ಥಿಗಳ ಶಾಲಾ ಪ್ರವೇಶ ದಾಖಲಾತಿ ಸದ್ದಿಲ್ಲದೇ ಸಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ಮೈಸೂರು ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 3.54 ಲಕ್ಷ ವಿದ್ಯಾರ್ಥಿ ಗಳು ಪ್ರವೇಶ ದಾಖಲಾತಿ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪ್ರವೇಶ ದಾಖಲಾತಿ ಪ್ರಕ್ರಿಯೆ ನಡೆದು ಜೂನ್‍ನಲ್ಲಿ ಶಾಲೆ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್ ಬಂದರೂ ಶಾಲೆ ತೆರೆಯಲಾಗಿಲ್ಲ. ಇದಕ್ಕೆ ಕೊರೊನಾ ಸೋಂಕು ಶಾಲೆ ಪುನಾರಂಭಕ್ಕೆ ದೊಡ್ಡ ಅಡ್ಡಿಯಾಗಿದೆ.

ಸದ್ಯ ಶಾಲೆ ತೆರೆಯುವ ಸಂಬಂಧ ಯಾವುದೇ ನಿರ್ಧಾರವಾಗಿಲ್ಲ ವಾದರೂ ಶಾಲಾ ಪ್ರವೇಶ ದಾಖಲಾತಿ ಪ್ರಕ್ರಿಯೆ ಈಗಾಗಲೇ ಚಾಲನೆ ಪಡೆದುಕೊಂಡಿದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿ ಸರ್ಕಾರಿ, ಅನುದಾನಿತ, ಅನುದಾನರಹಿತ (ಖಾಸಗಿ) ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಈವರೆಗೆ 3,54,891 ಮಕ್ಕಳ ಪ್ರವೇಶಾತಿ (ವಸತಿ ಶಾಲೆ ಬಿಟ್ಟು) ಆಗಿದೆ. ಎಲ್‍ಕೆಜಿ, ಯುಕೆಜಿ ಒಳಗೊಂಡರೆ ಒಟ್ಟು 3,59,333 ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಕಳೆದ ವರ್ಷ ಈ ಎಲ್ಲಾ ಶಾಲೆಗಳಿಂದ 1ರಿಂದ 10ನೇ ತರಗತಿವರೆಗೆ ಒಟ್ಟಾರೆ 4,35,508 ಮಕ್ಕಳು ಪ್ರವೇಶ ಪಡೆದಿದ್ದರು.

ಖಾಸಗಿ ಶಾಲೆಗಳಲ್ಲಿ ಜೂನ್‍ನಿಂದಲೇ ಪ್ರವೇಶ ದಾಖಲಾತಿ ಪ್ರಕ್ರಿಯೆ ನಡೆದಿದ್ದು, ಹಲವು ಪ್ರತಿಷ್ಠಿತ ಶಾಲೆಗಳಲ್ಲಿ ಈಗಾಗಲೇ ದಾಖಲಾತಿ ಪ್ರಕ್ರಿಯೆಯೇ ಅಂತ್ಯಗೊಂಡಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಈ ಮಾಸಾಂತ್ಯ ದೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೋಮವಾರವಷ್ಟೇ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವೇಶ ಪ್ರಕ್ರಿಯೆ ಚುರುಕುಗೊಳ್ಳುವ ನಿರೀಕ್ಷೆ ಇದೆ.

ಮತ್ತೊಂದೆಡೆ ಶಾಲೆಗಳ ಬಾಗಿಲು ತೆರೆಯದಿದ್ದರೂ ಶಿಕ್ಷಕರು ಮಕ್ಕಳ ಮನೆ ಬಾಗಿಲಿಗೇ ತೆರಳಿ ಪಾಠ ಮಾಡುವ ವಿದ್ಯಾಗಮ ಯೋಜನೆ ಸದ್ಯ ಚಾಲ್ತಿಯಲ್ಲಿದೆ. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಅನುಕೂಲವಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ವಿದ್ಯಾಗಮ ಆರಂಭವಾದ ಬೆನ್ನಲ್ಲೇ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪ್ರವೇಶ ದಾಖಲಾತಿಗೂ ಚಾಲನೆ ದೊರೆತಿದೆ. ಮಕ್ಕಳು ಕಲಿಕೆಯಿಂದ ಹಿಂದೆ ಉಳಿಯಬಾರ ದೆಂಬ ಕಾರಣಕ್ಕೆ ವಿದ್ಯಾಗಮ ರೂಪಿಸಲಾಗಿದೆ. ಈ ಕಾರ್ಯಕ್ರಮ ಖಾಸಗಿ ಶಾಲೆಗಳಲ್ಲಿ ಅನುಷ್ಠಾನಗೊಂಡಿಲ್ಲ. ಆನ್‍ಲೈನ್ ಬೋಧನಾ ವಿಧಾನವನ್ನು ಖಾಸಗಿ ಶಾಲೆಗಳು ಬಳಸಿಕೊಂಡು ತಮ್ಮ ಶಾಲೆ ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತಿವೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 1,97,869 ಪ್ರವೇಶಾತಿ ಪಡೆದು ಕೊಂಡಿದ್ದು, ಕೇವಲ 435 ಮಕ್ಕಳ ಮಾತ್ರ ಪ್ರವೇಶಾತಿಯಿಂದ ದೂರ ಉಳಿದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಂಕಿ-ಅಂಶ ನೀಡಿದೆ. ವಲಸೆ ಸೇರಿದಂತೆ ನಾನಾ ಕಾರಣಗಳಿಗೆ 435 ಮಕ್ಕಳು ಇನ್ನೂ ಪ್ರವೇಶಾತಿ ಪಡೆದಿಲ್ಲ. ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಈ ಸಾಲಿನಲ್ಲಿ ಮೈಸೂರಿಂದ ಬೇರೆ ಜಿಲ್ಲೆಗೆ 70 ಮಕ್ಕಳು ವಲಸೆ ಹೋಗಿವೆ. ಬೇರೆ ಜಿಲ್ಲೆಯಿಂದ 23 ಮಕ್ಕಳು, ಬೇರೆ ರಾಜ್ಯದಿಂದ 1 ಮಗು ಮೈಸೂರು ಜಿಲ್ಲೆಗೆ ವಲಸೆ ಬಂದಿವೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಆವರಣ ದಲ್ಲಿಯೇ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಂಗ್ಲ ಮಾಧ್ಯಮ ಶಾಲೆ ಆರಂಭಿಸ ಲಾಗಿದೆ. ಇಂತಹ 12 ಶಾಲೆಗಳು ಮೈಸೂರು ಜಿಲ್ಲೆಯಲ್ಲಿವೆ. ನಗರದ ರಾಜೇಂದ್ರನಗರ (ಮೈಸೂರು ನಗರ ಉತ್ತರ ವಲಯ), ಕುವೆಂಪುನಗರ (ಮೈಸೂರು ನಗರ ದಕ್ಷಿಣ ವಲಯ), ಗ್ರಾಮಾಂತರ ವಲಯದ ಇಲವಾಲ ಮತ್ತು ಮಂಚೇಗೌಡನಕೊಪ್ಪಲಿನಲ್ಲಿ ತಲಾ ಒಂದು ಕರ್ನಾಟಕ ಪಬ್ಲಿಕ್ ಶಾಲೆಗಳಿವೆ. ಇಲ್ಲಿಯೂ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ (ಖಾಸಗಿ) ಶಾಲೆಗಳು, ವಿವಿಧ ಇಲಾಖೆಗಳ ವಸತಿ ಶಾಲೆಗಳು ಸೇರಿದಂತೆ ಒಟ್ಟು 3,453 ಶಾಲೆಗಳಿವೆ. 2,124 ಸರ್ಕಾರಿ ಶಾಲೆಗಳು, 112 ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯವು, 277 ಅನುದಾನಿತ ಶಾಲೆಗಳು, 929 ಅನುದಾನರಹಿತ ಶಾಲೆಗಳು (ಖಾಸಗಿ). ಯಾವುದೇ ದಾಖಲೆಪತ್ರ ಇಲ್ಲದಿದ್ದರೂ ಮಕ್ಕಳ ಶಾಲಾ ಪ್ರವೇಶಕ್ಕೆ ಅವಕಾಶವಿದೆ. ಜಾತಿ, ಆದಾಯ ಪ್ರಮಾಣಪತ್ರ ನೀಡಲೇಬೇಕೆಂದಿಲ್ಲ. ಆದರೆ ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಅಗತ್ಯ ಎಂದು ಇಲಾಖೆ ತಿಳಿಸಿದೆ.

ಶಾಲಾ ಪ್ರವೇಶ ದಾಖಲಾತಿ ಆರಂಭವಾಗಿದ್ದು, ಮಾಸಾಂತ್ಯ ಪೂರ್ಣಗೊಳ್ಳಲಿದೆ. ಶಿಕ್ಷಕರು ಶಾಲೆಗೆ ಕರ್ತ ವ್ಯಕ್ಕೆ ಹಾಜರಾಗುವಂತೆ ಇಲಾಖೆ ಸೂಚನೆ ನೀಡಿದಾಗಿನಿಂದ ಪ್ರವೇಶ ದಾಖಲಾತಿ ಪ್ರಕ್ರಿಯೆ ಆರಂಭಿಸಲಾಗಿದೆ.
-ಪಾಂಡುರಂಗ, ಡಿಡಿಪಿಐ, ಮೈಸೂರು

ಪ್ರಥಮ ಪಿಯು ಪ್ರವೇಶ ಪ್ರಕ್ರಿಯೆ ಆ.13ರಿಂದಲೇ ಆರಂಭವಾಗಿದ್ದು, ಕೊನೆ ದಿನಾಂಕ ಆದ ಬಳಿಕ ಕಾಲೇಜುವಾರು ಪ್ರವೇಶ ದಾಖಲಾತಿ ವಿವರ ನಮ್ಮ ಕಚೇರಿಗೆ ಲಭ್ಯವಾಗಲಿದೆ. ಇಲಾಖೆ ಯಿಂದ ಪ್ರವೇಶ ದಾಖಲಾತಿಗೆ ಇನ್ನೂ ಅಂತಿಮ ದಿನಾಂಕ ನಿಗದಿ ಮಾಡಿಲ್ಲ.
-ಜಿ.ಆರ್.ಗೀತಾ, ಉಪನಿರ್ದೇಶಕರು, ಪಿಯು ಶಿಕ್ಷಣ ಇಲಾಖೆ

 

 

 

Translate »