ಅರಮನೆ ಆವರಣಕ್ಕಷ್ಟೇ ಈ ಬಾರಿ ದಸರಾ ಸೀಮಿತ
ಮೈಸೂರು

ಅರಮನೆ ಆವರಣಕ್ಕಷ್ಟೇ ಈ ಬಾರಿ ದಸರಾ ಸೀಮಿತ

September 9, 2020

ಬೆಂಗಳೂರು, ಸೆ. 8 (ಕೆಎಂಶಿ)- ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಮಹೋ ತ್ಸವವನ್ನು ಈ ಬಾರಿ ಮೈಸೂರು ಅರಮನೆಗೆ ಸೀಮಿತ ಗೊಳಿಸಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯ ಕ್ಷತೆಯಲ್ಲಿ ಮಂಗಳವಾರ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿರುವುದಲ್ಲದೆ, ನಾಡದೇವತೆ ಚಾಮುಂಡೇ ಶ್ವರಿಯ ಅಗ್ರ ಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್‍ಗಾಗಿ ಶ್ರಮಿಸುತ್ತಿರುವ ಕೊರೊನಾ ಸೇನಾನಿ ಗಳಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಹಾಗೂ ಪೊಲೀಸರಿಂದ ನೆರ ವೇರಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಧ್ಯುಕ್ತವಾಗಿ ಪೂಜೆ ನೆರವೇರಿಸಿ, ಐದು ಆನೆಗಳನ್ನು ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು, ಮೈಸೂರು ನಗರದಲ್ಲಿ ವಿದ್ಯುತ್ ದೀಪಾ ಲಂಕಾರ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಇಂದಿನ ಸಭೆಯಲ್ಲಿ ಕೊರೊನಾ ಸೋಂಕು ಇನ್ನೂ ತಹಬದಿಗೆ ಬಾರದ ಕಾರಣ ಸಾಂಪ್ರದಾಯಿಕ ಆಚರಣೆಯನ್ನು ಕೈಬಿಟ್ಟು, ವೈಭವಕ್ಕೆ ಕಡಿವಾಣ ಹಾಕು ವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ.

ಕಳೆದ ಐದಾರು ತಿಂಗಳಿನಿಂದ ಕೋವಿಡ್-19 ನಿಯಂತ್ರಿಸಲು ಪೊಲೀಸರು, ವೈದ್ಯರು, ಸ್ಥಳೀಯ ಆಡಳಿತ ಸಿಬ್ಬಂದಿ ಶ್ರಮಿಸುತ್ತಿದೆ. ಇಂತಹ ಸನ್ನಿವೇಶ ದಲ್ಲಿ ಅವರ ಮೇಲೆ ಮತ್ತೆ ಹೆಚ್ಚು ಹೊರೆ ಬೀಳಬಾರದು ಎಂಬ ಉದ್ದೇಶವೂ ಸರಳ ದಸರಾಗೆ ಕಾರಣವಾಗಿದೆ.

ಸೋಂಕು ನಿಯಂತ್ರಣಕ್ಕೆ ಗುಂಪುಗೂಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಾವೇ ವಿಜೃಂಭಣೆಯಿಂದ ಆಚರಣೆ ಮಾಡಿದರೆ, ನಾಡದೇವತೆ ಆರಾಧಕರನ್ನು ಮತ್ತು ಸಾರ್ವಜನಿ ಕರನ್ನು ತಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಸರಳವಾಗಿ ಅರಮನೆಗೆ ಸೀಮಿತವಾಗಿ ಆಚರಿಸೋಣ. ಅಲ್ಲಿ ಈ ಹಿಂದೆ ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿ ದೆಯೋ ಆ ಎಲ್ಲಾ ಕಾರ್ಯಕ್ರಮಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ಮುನ್ನೆಚ್ಚರಿಕೆಯಿಂದ, ಸಾಂಪ್ರದಾಯಿಕವಾಗಿ ನಡೆಸೋಣ ಎಂಬ ತೀರ್ಮಾ ನಕ್ಕೆ ಬರಲಾಗಿದೆ. ಇದಕ್ಕಾಗಿ 10 ಕೋಟಿ ರೂ.ಗಳನ್ನು ಮುಖ್ಯಮಂತ್ರಿಯವರು ಸಭೆಯಲ್ಲಿ ಪ್ರಕಟಿಸಿರುವು ದಲ್ಲದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 5 ಕೋಟಿ ರೂ. ಪಡೆದು, ಅಗತ್ಯ ಮತ್ತು ತುರ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದಾರೆ. ಅರಮನೆ ಆವರಣದಲ್ಲಿ ದಸರಾ ಯಾವ ರೀತಿ ನಡೆಯಬೇಕು, ಉದ್ಘಾಟನೆಗೆ ಐದು ಜನ ವಾರಿಯರ್ಸ್ ಯಾರು ಎಂಬ

ಎಲ್ಲ ಆಯ್ಕೆಯನ್ನು ಶೀಘ್ರದಲ್ಲೇ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಿ ಎಂಬ ಅಧಿಕಾರವನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕೆಲವೊಂದಷ್ಟು ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ. ರವಿ, ಕೋವಿಡ್‍ಗಾಗಿ ಶ್ರಮಿಸಿದವರಿಂದ ಈ ಬಾರಿ ದಸರಾ ಉದ್ಘಾಟನೆಯಾಗಲಿದೆ, ಅದರ ಜೊತೆಗೆ ಇನ್ಯಾರನ್ನಾದರೂ ಕರೆಸಬೇಕೆಂಬ ತೀರ್ಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬಹುದು.

ಈ ಬಾರಿ ಜಂಬೂ ಸವಾರಿ ಮೆರವಣಿಗೆ, ಟಾರ್ಚ್ ಪರೇಡ್, ವಸ್ತು ಪ್ರದರ್ಶನ, ಪಾರಂಪರಿಕ ಉಡುಗೆ, ನಡಿಗೆ, ಚಲನಚಿತ್ರೋತ್ಸವ, ಸಂಗೀತ ಕಾರ್ಯಕ್ರಮಗಳು, ತೋಟಗಾರಿಕೆ ವಸ್ತು ಪ್ರದರ್ಶನ, ರೈತಗೋಷ್ಠಿ, ಕ್ರೀಡಾಕೂಟ, ಕುಸ್ತಿ ಪಂದ್ಯಾವಳಿ ಇವ್ಯಾವೂ ಇರುವುದಿಲ್ಲ.

ಸಾಂಪ್ರದಾಯಿಕವಾಗಿ ಯಾವುದನ್ನು ಮಾಡಬೇಕೋ ಅವುಗಳನ್ನು ಅರಮನೆ ಆವರಣದಲ್ಲಿ ಸೀಮಿತವಾಗಿ ಮಾಡಲಾಗುವುದು ಎಂದರು.

ದಸರಾ ದರ್ಶನ, ಹಾಸ್ಯೋತ್ಸವ, ಮನೆ ಮನೆ ದಸರಾ ಮನೆಗಳಿಗೆ ಸೀಮಿತವಾಗಿರುತ್ತದೆ. ಸಂಗೀತ ಕಾರ್ಯಕ್ರಮ, ಏರ್‍ಶೋ, ಚಿತ್ರ ಹಸಿರು ಸಂತೆ, ಯಾವುದೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಂಬೂ ಸವಾರಿ ಮೆರವಣಿಗೆ ಅರಮನೆಗೆ ಸೀಮಿತವಾಗಿರುತ್ತದೆ. ಈ ವೇಳೆ ಸಂಪ್ರದಾಯವನ್ನು ಪಾಲಿಸಲಾಗುವುದು. ಪಂಜಿನ ಕವಾಯತು ಇರುವುದಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಉಂಟಾಗಿದ್ದ ತೀವ್ರ ಬರಗಾಲದಿಂದ 2002 ರಲ್ಲಿ ಸರಳವಾಗಿ ದಸರಾವನ್ನು ಆಚರಿಸಲಾಯಿತು. ಅದಾದ ನಂತರ ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಇಂತಹ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಅನೇಕ ವೇಳೆ ಸರಳ ದಸರಾ ಆಚರಿಸಲಾಗಿದೆ
ಮೈಸೂರು, ಸೆ.8(ಎಸ್‍ಬಿಡಿ)- ಕೊರೊನಾ ಪರಿಣಾಮ ಐತಿಹಾಸಿಕ 410ನೇ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಇದರಿಂದ ವೈಭವದ ಜಂಬೂ ಸವಾರಿ ನೋಡಬೇಕೆಂಬ ಜನರ ಮಹದಾಸೆಗೆ ತಣ್ಣೀ ರೆರಚಿದಂತಾಗಿದೆ. ಮಾತ್ರವಲ್ಲ ದಸರೆಯನ್ನೇ ನೆಚ್ಚಿಕೊಂಡಿದ್ದ ಸಾವಿರಾರು ವ್ಯಾಪಾರಿಗಳು, ಕಾರ್ಮಿಕರು, ಆಟೋ, ಟಾಂಗಾ, ಟ್ಯಾಕ್ಸಿ ಚಾಲಕರು, ಹೋಟೆಲ್ ಇನ್ನಿತರೆ ಉದ್ಯಮಕ್ಕೆ ಬರೆ ಬಿದ್ದಿದೆ. ಮೈಸೂರು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮಕ್ಕೂ ಭಾರೀ ನಷ್ಟ ವಾಗಲಿದೆ. ಆದರೆ ಸರಳ, ಸಾಂಪ್ರದಾಯಿಕ ದಸರಾ ಆಚರಣೆ ಇದೇ ಮೊದಲೇನಲ್ಲ. ಹತ್ತಾರು ಬಾರಿ ಸರಳವಾಗಿ ದಸರಾ ಆಚರಿಸುವ, ಕೆಲ ವೊಮ್ಮೆ ರದ್ದುಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಮಹಾರಾಜರ ಆಳ್ವಿಕೆ ಕಾಲ ಹಾಗೂ ಸರ್ಕಾರದ ವತಿಯಿಂದ ಆಚರಣೆ ಆರಂಭಿಸಿದ ನಂತರವೂ ಹಲವು ಬಾರಿ ಸರಳ ದಸರಾ ನಡೆದಿದೆ.

ದಸರಾ ರದ್ದಾಗಿತ್ತು: ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಭೀಕರ ಕ್ಷಾಮ ದಿಂದಾಗಿ 1816ರಲ್ಲಿ ದಸರಾ ರದ್ದಾಗಿತ್ತು. ಬಳಿಕ ಅವರ ಪುತ್ರ 10ನೇ ಚಾಮರಾಜೇಂದ್ರ ಒಡೆ ಯರ್ ಕಾಲದಲ್ಲಿ ಇದೇ ಕಾರಣಕ್ಕೆ 1876 ರಿಂದ 78ರವರೆಗೆ 3 ವರ್ಷ ಸತತವಾಗಿ ದಸರಾ ನಡೆಯಲಿಲ್ಲ. ಜಯಚಾಮರಾಜೇಂದ್ರ ಒಡೆ ಯರ್ ಅವರು ಮಹಾರಾಜರಾಗಿ 1969ರಲ್ಲಿ ಕಡೆಯದಾಗಿ ದಸರಾ ನಡೆಸಿದರು. ಬಳಿಕ ಸರ್ಕಾರದ ಅಡ್ಡಿಯಿಂದಾಗಿ 1970ರಲ್ಲಿ ದಸರಾ ನಡೆಸಲಾಗಲಿಲ್ಲ. 1971ರಿಂದ ಗಣ್ಯರು, ಸಂಘ ಸಂಸ್ಥೆಗಳು ಸೇರಿ ಜನತೆಯ ದಸರಾ ಆಚರಿ ಸಿದರು. ನಂತರದಲ್ಲಿ ಸರ್ಕಾರವೇ ದಸರಾ ಆಚರಣೆ ನಡೆಸಿಕೊಂಡು ಬರುತ್ತಿದೆ. ಆದರೆ ಅರಮನೆ ಆವರಣದಲ್ಲಿ ನಡೆಯುವ ಅಂತ ರಂಗದ ದಸರಾ ಯಾವ ವರ್ಷವೂ ಯಾವ ಕಾರಣಕ್ಕೂ ನಿಂತಿಲ್ಲ. ಸಾರ್ವಜನಿಕ ಅಥವಾ ಬಹಿರಂಗ ಉತ್ಸವ ಮಾತ್ರ ರದ್ದಾಗಿರುವುದು. ಸಾಂಪ್ರದಾಯಿಕ ದಸರಾ ಸಾಂಗವಾಗಿ ನಡೆ ದಿದೆ ಎಂದು ಇತಿಹಾಸಕಾರರು ತಿಳಿಸಿದರು.

ಸರಳ ದಸರಾ: ರಾಜ್ಯ ಸರ್ಕಾರದ ವತಿ ಯಿಂದ ದಸರಾ ಆಚರಣೆ ಆರಂಭವಾದ ನಂತರವೂ ಅನೇಕ ಕಾರಣಾಂತರಗಳಿಂದ ಸರಳವಾಗಿ ದಸರಾ ಆಚರಿಸಲಾಗಿದೆ. ಮಳೆ ಯಿಲ್ಲದೆ ಬರ ಸೃಷ್ಟಿಯಾಗಿದ್ದರಿಂದ 1983, 1992 ಹಾಗೂ 1997ರಲ್ಲಿ

ಸರಳ ದಸರೆ ನಡೆಯಿತು. ಡಾ.ರಾಜ್‍ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದರಿಂದ 2000ನೇ ಇಸವಿಯಲ್ಲಿ ಅದ್ಧೂರಿಯಾಗಿ ದಸರೆ ಆಚರಿಸಲಿಲ್ಲ. ಗುಜರಾತ್ ಭೀಕರ ಭೂಕಂಪದಿಂದಾಗಿ 2001ರಲ್ಲೂ ಸರಳವಾಗಿ ಆಚರಿಸಲಾಯಿತು. 2002, 2011 ಹಾಗೂ 2012ರಲ್ಲೂ ಬರದಿಂದಾಗಿ ಸರಳ ಆಚರಣೆಗಷ್ಟೇ ದಸರೆ ಸೀಮಿತವಾಗಿತ್ತು. ಇನ್ನು ಬರ ಹಾಗೂ ರೈತರ ಸರಣಿ ಆತ್ಮಹತ್ಯೆ ಕಾರಣದಿಂದಾಗಿ 2015 ಹಾಗೂ 2016ರಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರೆ ಆಚರಣೆ ಮಾಡಲಾಯಿತು.

ಸಮರ್ಪಕ ವ್ಯಾಖ್ಯಾನವಿಲ್ಲ: ಈ ಬಾರಿ ಅರಮನೆ ಆವರಣ ಹಾಗೂ ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿರುವಂತೆ ಸರಳವಾಗಿ ದಸರಾ ಆಚರಿಸಲು ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ. ಆದರೆ ಸರಳ ದಸರಾ ಎಂಬುದಕ್ಕೆ ಸರ್ಕಾರ ಸಮರ್ಪಕ ವ್ಯಾಖ್ಯಾನ ನೀಡಿಲ್ಲ. ಈ ಹಿಂದೆಯೂ ಸರಳ ದಸರಾ ಎಂದು ಘೋಷಿಸಿಯೂ ವೈಭವವಾಗಿ ಜರುಗಿದ ಉದಾಹರಣೆಯೂ ಇದೆ. ವೆಚ್ಚ, ಜಂಬೂ ಸವಾರಿಯಲ್ಲಿ ಸಾಗುವ ಕಲಾ ತಂಡಗಳು, ಸ್ಥಬ್ದಚಿತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಸಾಂಸ್ಕøತಿಕ ಕಾರ್ಯಕ್ರಮ ಇನ್ನಿತರ ಚಟುವಟಿಕೆಗಳನ್ನು ನಡೆಸದೇ ಇರುವುದನ್ನೇ ಸರಳ ಎನ್ನಬಹುದು. ಕಾರಣಾಂತರದಿಂದ ಸಾರ್ವಜನಿಕ ದಸರಾ ರದ್ದಾದರೂ, ಸರಳವಾಗಿ ಅಥವಾ ಅತ್ಯಂತ ವೈಭವಯುತವಾಗಿ ನಡೆಸಿದರೂ ಸಾಂಪ್ರದಾಯಿಕ ಆಚರಣೆ ಮಾತ್ರ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಿರ್ವಿಘ್ನವಾಗಿ ನಡೆದು ಬಂದಿದೆ ಎಂಬುದು ಹಿರಿಯರ ಅಭಿಪ್ರಾಯ.

 

 

Translate »