ಮೈಸೂರು, ಅ.21(ಎಂಟಿವೈ)- ದಸರಾ ಮಹೋತ್ಸವದ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿ ಖರೀದಿಗಾಗಿ ಗ್ರಾಹಕರು ಮುಗಿಬೀಳುವ ಮೂಲಕ ಕೊರೊನಾ ಸೋಂಕು ಸ್ಫೋಟಗೊಳ್ಳುವುದನ್ನು ತಡೆಗಟ್ಟಲು ಮೈಸೂರಿನ ದೇವರಾಜ ಮಾರು ಕಟ್ಟೆಯಲ್ಲಿನ ಹೂವಿನ ಮಳಿಗೆಗಳನ್ನು ಅ.23 ರಿಂದ 25ರವರೆಗೆ ಮೂರು ದಿನ ಬಂದ್ ಮಾಡಿ, ಹೂವು ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಯನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರ ಗೊಳಿಸುವಂತೆ ಮೈಸೂರು ನಗರ ಪಾಲಿಕೆ ಆದೇಶಿಸಿದೆ.
ಕೆಲವು ದಿನಗಳಿಂದ ಮೈಸೂರು ನಗರದಲ್ಲಿ ಪ್ರತಿದಿನ ಸರಾಸರಿ 400ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದು, ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರದ ದೀಪಾಲಂಕಾರ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಪ್ರವಾಸಿಗರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಸಂಜೆ ವೇಳೆ ಮೈಸೂರಲ್ಲಿ ಜನ ಜಂಗುಳಿಯೊಂದಿಗೆ ಟ್ರಾಫಿಕ್ ಜಾಮ್ ಸಹ ಉಂಟಾಗುತ್ತಿದೆ. ಈ ನಡುವೆ ಹಬ್ಬದ ಖರೀದಿಗಾಗಿ ದೇವರಾಜ ಮಾರುಕಟ್ಟೆಗೆ ಗ್ರಾಹಕರು ಮುಗಿಬೀಳುವುದು ಸಾಮಾನ್ಯವಾಗಿದೆ. ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರದ ವೇಳೆ ಗ್ರಾಹಕರು ದೈಹಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೊರೊನಾ ಸೋಂಕು ಹರಡಲು ಪೂರಕವಾದ ವಾತಾವರಣ ನಿರ್ಮಾಣವಾದಂತಾಗುತ್ತಿತ್ತು. ಇದನ್ನು ಮನಗಂಡು ಆಯುಧ ಪೂಜೆ ವೇಳೆ ಅ.23ರಿಂದ 25ರವರೆಗೂ ಹೂವಿನ ಮಳಿಗೆಗಳನ್ನು ಮತ್ತೆ ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈ ಕುರಿತು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಜನಸಂದಣಿ ನಿಯಂತ್ರಿಸಲು ಹೂವಿನ ಮಾರುಕಟ್ಟೆ ಸ್ಥಳಾಂತರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.