3 ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟ;  ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ?
ಮೈಸೂರು

3 ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟ; ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ?

July 12, 2021

ಮೈಸೂರು,ಜು.11(ಪಿಎಂ)- ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆ ಗಳಲ್ಲಿ ಏನಾದರೂ ನ್ಯೂನತೆ ಇದ್ದಲ್ಲಿ ಸರಿ ಪಡಿಸುವುದಾಗಿ ಕೇಂದ್ರ ಕೃಷಿ ಸಚಿವರು ಮಾತುಕತೆಗೆ ಆಹ್ವಾನಿಸಿದರೂ ಬಾರದೇ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದು, ಇಲ್ಲಿ ದಲ್ಲಾಳಿಗಳ ಪರ ಚಿಂತನೆ ಇದೆಯೇ? ಎಂದು ಪ್ರಶ್ನಿಸಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಶಿವಪ್ರಸಾದ್, ಈ ವಿಚಾರದಲ್ಲಿ ಕೇವಲ ರಾಜಕೀಯ ಲಾಭಕ್ಕೆ ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿದೆ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ನಗರದ ಬಿಜೆಪಿ ಕಚೇರಿ ಸಚ್ಚಿನ್ ರಾಜೇಂದ್ರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೈಸೂರು ನಗರ ಮತ್ತು ಗ್ರಾಮಾಂತರ ರೈತ ಮೋರ್ಚಾ ಕಾರ್ಯ ಕಾರಿಣಿ ಸಭೆಯ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡಿದರು. ಕಾಯ್ದೆ ಗಳಲ್ಲಿ ಏನಾದರೂ ನ್ಯೂನತೆ ಇದ್ದರೆ ಸರಿ ಪಡಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರೂ ಚರ್ಚೆಗೆ ತಯಾರಿಲ್ಲ. ಬದಲಿಗೆ ಕಾಯ್ದೆ ಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿಯಲಾಗಿದೆ. ಆದರೆ ಇದಕ್ಕೆ ಕಾರಣ ಮಾತ್ರ ಹೇಳುತ್ತಿಲ್ಲ. ಹಾಗಾದರೆ ಇಲ್ಲಿ ದಲ್ಲಾಳಿಗಳಿಗೆ ನಷ್ಟವಾಗುತ್ತದೆ ಎಂಬ ಚಿಂತನೆ ಇದೆಯೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ರೈತರನ್ನು ಎತ್ತಿಕಟ್ಟುತ್ತಿದೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ಬಗ್ಗೆ ಕಳೆದ 20 ವರ್ಷಗಳಿಂದ ಚರ್ಚೆಯಾಗುತ್ತಲೇ ಇದೆ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಂದರ್ಭದಲ್ಲಿ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ದಲ್ಲಾಳಿ ವ್ಯವಸ್ಥೆಯಿಂದ ರೈತರನ್ನು ಮುಕ್ತ ಗೊಳಿಸಲು ಎಪಿಎಂಸಿ ಕಾಯ್ದೆಗೆ ತಿದ್ದು ಪಡಿ ತರಬೇಕೆಂಬ ಬಗ್ಗೆಯೂ ಚರ್ಚೆ ಯಾಗಿದೆ. 2019ರ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಘೋಷಣೆ ಮಾಡಿತ್ತು. ಕಾಂಗ್ರೆಸ್‍ನ ಈ ಆಶ್ವಾಸನೆ ಯನ್ನು ರೈತರಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಮೋದಿಯವರು ಈಡೇರಿಸಿ ದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಬೇಕಿದ್ದ ಕಾಂಗ್ರೆಸ್, ಕೇವಲ ರಾಜಕೀಯ ಲಾಭ ಕ್ಕಾಗಿ ರೈತರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತ ತನ್ನ ಬೆಳೆಯನ್ನು ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಸ್ವತಂತ್ರ ಅವಕಾಶ ಕಲ್ಪಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ಅನುಮಾನದಿಂದ ಬಾದಾಮಿಗೆ ಹೋದರಲ್ಲವೇ? ಅಂತೆಯೇ ನೆರೆ ರಾಜ್ಯ ತಮಿಳುನಾಡಿನಲ್ಲಿ ಲಾಭದ ದರ ದೊರೆತರೆ ಅಲ್ಲಿ ಮಾರಾಟ ಮಾಡು ವುದಕ್ಕೆ ಅವಕಾಶ ಕಲ್ಪಿಸುವುದು ತಪ್ಪಾ? ಎಂದು ಪ್ರಶ್ನಿಸಿದರು.

ಲಕ್ಷ ಕೋಟಿ ರೂ.ಗಳನ್ನು ಎಪಿಎಂಸಿ ಗಳ ಮೂಲಭೂತ ಸೌಲಭ್ಯ ಕಲ್ಪಿಸಲು ಮೀಸಲಿಟ್ಟಿದ್ದು, ಇವರು ಆರೋಪಿಸುವಂತೆ ಎಪಿಎಂಸಿ ರದ್ದು ಮಾಡುವ ಉದ್ದೇಶ ವಿದ್ದರೆ ಇಷ್ಟು ಪ್ರಮಾಣದ ಹಣವನ್ನು ಸರ್ಕಾರ ಮೀಸಲಿಡುತ್ತಿತ್ತೇ? ಆದರೆ ಕಾಂಗ್ರೆಸ್ ಮತ್ತು ಇನ್ನಿತರ ಹೋರಾಟಗಾರರು ಈ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

70 ವರ್ಷಗಳಿಂದ ದೇಶದ ಆಡಳಿತ ನಡೆಸಿದವರು ರೈತರ ಆತ್ಮಹತ್ಯೆ ತಡೆ ಗಟ್ಟಲು, ಅವರ ಸಮಸ್ಯೆಗಳನ್ನು ನಿವಾರಿ ಸಲು ಮುಂದಾಗಲಿಲ್ಲ. ರೈತರ ಆರ್ಥಿಕ ಸಬಲೀಕರಣಕ್ಕೂ ಚಿಂತನೆ ಮಾಡಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರಧಾನಿ ಯಾದ ಬಳಿಕ ರೈತರ ಸ್ವಾವಲಂಬನೆಗೆ ಒತ್ತು ನೀಡಿದರು. ರೈತರ ಆರ್ಥಿಕ ಸಬಲೀ ಕರಣ ಆಗದೇ ದೇಶದ ಆರ್ಥಿಕತೆ ಸುಧಾ ರಣೆಯಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತು ರೈತರಿಗೆ ವಾರ್ಷಿಕ ವರಮಾನ ದ್ವಿಗುಣಗೊಳಿಸಲು ಮುಂದಾದರು. ಇದಕ್ಕೆ ಪೂರಕವಾಗಿ ಹಲವು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡರು ಎಂದರು.
ಮಣ್ಣಿನ ಆರೋಗ್ಯ ಕಾರ್ಡ್ ವ್ಯವಸ್ಥೆ ಮೂಲಕ ವೈಜ್ಞಾನಿಕ ವಿಧಾನದಲ್ಲಿ ಬೆಳೆ ಬೆಳೆಯಲು ವ್ಯವಸ್ಥೆ ಕಲ್ಪಿಸಿದರು. ದೇಶದ 22 ಕೋಟಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗಿದೆ. ಕೇವಲ ಐದಾರು ವರ್ಷಗಳಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ 44 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ರೈತರ ಭೂಮಿಗೆ ನೀರು ಕೊಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಏಳು ವರ್ಷ ಗಳ ಹಿಂದೆ ರೈತರು ಸರತಿ ಸಾಲಿನಲ್ಲಿ ನಿಂತ ರಸಗೊಬ್ಬರ ಕೊಳ್ಳುವ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶದಲ್ಲಿ ಅನೇಕ ಬಾರಿ ಲಾಠಿ ಪ್ರಹಾರ ನಡೆದಿದೆ. ಆದರೆ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ ಬಳಿಕ ರಸಗೊಬ್ಬರ ಕೊರತೆ ಆಗ ದಂತೆ ಕ್ರಮ ವಹಿಸಲಾಗಿದೆ ಎಂದರು.

ಭ್ರಷ್ಟಾಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಮೂಲಾಗ್ರ ಬದಲಾ ವಣೆ ತಂದಿದೆ. ಒಂದು ರೂಪಾಯಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾ ದರೆ ಫಲಾನುಭವಿಗೆ ಮುಟ್ಟುವುದು ಕೇವಲ 15 ಪೈಸೆ ಎಂದು ಸಂಸತ್ತಿನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರು. ಅಂದರೆ ಆಗ 85 ಪೈಸೆ ಸೋರಿಕೆಯಾಗುತ್ತಿತ್ತು. ಆದರೆ ಇಂದು ನರೇಂದ್ರ ಮೋದಿಯವರ ಸರ್ಕಾರದಲ್ಲಿ 1 ರೂ. ಬಿಡುಗಡೆಯಾದರೆ, ಅದು ಪೂರ್ಣ ಪ್ರಮಾಣದಲ್ಲಿ ಫಲಾನುಭವಿಯ ಕೈ ಸೇರಲಿದೆ ಎಂದು ಹೇಳಿದರು.

ಬಳಿಕ ಕಾರ್ಯಕಾರಿಣಿಗೆ ಸಂಬಂಧಿಸಿ ದಂತೆ ಆಂತರಿಕ ಸಭೆ ನಡೆಯಿತು. ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಂಜುಂಡೇಗೌಡ, ಕಾರ್ಯದರ್ಶಿಗಳಾದ ಡಾ.ನವೀನ್, ಲೋಕೇಶ್, ನಗರ ಪ್ರಭಾರಿ ಎಸ್.ಕೆ.ದಿನೇಶ್, ನಗರಾಧ್ಯಕ್ಷ ಕೆ.ದೇವ ರಾಜ್ ಮತ್ತಿತರರು ಹಾಜರಿದ್ದರು.

Translate »