ಮಾಸ್ಕ್ ಧರಿಸದವರಿಗೆ ದಂಡದ ಬಿಸಿ
ಮೈಸೂರು

ಮಾಸ್ಕ್ ಧರಿಸದವರಿಗೆ ದಂಡದ ಬಿಸಿ

July 12, 2021

ಮೈಸೂರು,ಜು.11(ಎಂಟಿವೈ)-ಅನ್‍ಲಾಕ್ ನಿಯಮ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮ ಪಾಲಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸದೆ ನಿರ್ಲಕ್ಷಿಸುತ್ತಿರುವವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ಕೊರೊನಾ 2ನೇ ಅಲೆಯ ತೀವ್ರತೆಗೆ ತತ್ತರಿಸಿದ್ದ ಮೈಸೂರಿನ ಜನತೆ ಕಳೆದ 2 ತಿಂಗಳಿನಿಂದ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಇದ್ದರಾದರೂ, ಜುಲೈ 5ರಿಂದ 15ರವರೆಗೆ ರಾಜ್ಯದಾದ್ಯಂತ ಅನ್‍ಲಾಕ್ ನಿಯಮ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಂಡಿವೆ. 2ನೇ ಅಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿದ್ದರೂ, ಜನರು ಇನ್ನೂ ಬುದ್ಧಿ ಕಲಿತಂತೆ ಕಂಡುಬರುತ್ತಿಲ್ಲ. ಮಾಸ್ಕ್ ಧರಿ ಸದೆ ಓಡಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪುಗೂಡುತ್ತಿದ್ದಾರೆ.

ಸಾರ್ವಜನಿಕರ ಈ ಬೇಜವಾಬ್ದಾರಿತನದಿಂದ ಕೊರೊನಾ ಸೋಂಕು ಮತ್ತೆ ಹರಡುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಪಾಲಿಸದೆ ಇರುವವರಿಗೆ ಪಾಠ ಕಲಿಸಲು ಪೊಲೀಸರು ಸಕ್ರಿಯಗೊಂಡಿದ್ದಾರೆ. ಮಾಸ್ಕ್ ಧರಿಸದೆ ವಾಹನ ಚಾಲನೆ ಮಾಡುವವರಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದ್ದಾರೆ. ಮೈಸೂರಿನ ಲಕ್ಷ್ಮೀಪುರಂ ಠಾಣೆಯ ಪೊಲೀಸರು, ಭಾನುವಾರ ರಾಮಸ್ವಾಮಿ ವೃತ್ತದಲ್ಲಿ ಕಾರ್ಯಾಚರಣೆ ನಡೆಸಿ, ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ ಹಾಕಿ ಮಾಸ್ಕ್ ಧರಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಿದರು. ಇದಲ್ಲದೆ ಕೆಲವು ಟೀ-ಅಂಗಡಿ ಬಳಿ ಗುಂಪುಗೂಡುತ್ತಿದ್ದವರಿಗೂ ದಂಡದ ಬಿಸಿ ಮುಟ್ಟಿಸಲಾಗಿದೆ. ಅಲ್ಲದೆ ಮಾಸ್ಕ್ ಧರಿಸದ ಆಟೋ ಚಾಲಕರಿಗೂ ದಂಡ ವಿಧಿಸಲಾಯಿತು. ಸಿಟಿ ವ್ಯಾಪ್ತಿಯಲ್ಲಿ 250 ರೂ., ಗ್ರಾಮಾಂತರ ಪ್ರದೇಶದಲ್ಲಿ 100 ರೂ. ದಂಡ ವಿಧಿಸಲಾಗುತ್ತಿದೆ.

Translate »