ಮೈಸೂರು, ಮಾ. 1(ಆರ್‍ಕೆ)- ಷೋರೂಂ ಬೀಗ ಮುರಿದು 33 ಲಕ್ಷ ರೂ. ಮೌಲ್ಯದ ಒಟ್ಟು 60 ಮೊಬೈಲ್ ಫೋನ್‍ಗಳನ್ನು ಕಳವು ಮಾಡಿರುವ ಘಟನೆ ಮೈಸೂರಿನ ಕುವೆಂಪುನಗರದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಕುವೆಂಪುನಗರದ ನ್ಯೂ ಕಾಂತರಾಜ ಅರಸು ರಸ್ತೆಯ ಅಕ್ಷಯ ಭಂಡಾರ್ ಸರ್ಕಲ್ ಬಳಿ ಜೆಎಸ್‍ಎಸ್ ಕಾನೂನು ಕಾಲೇಜು ಕಟ್ಟಡದಲ್ಲಿರುವ ಎಸ್. ಶಾಪಿ ಡಾಟ್ ಕಾಂ ಪ್ರೈವೇಟ್ ಲಿಮಿಟೆಡ್‍ನ ರೀಟೇಲ್ ಮೊಬೈಲ್ ಷೋರೂಂನಲ್ಲಿ ಭಾರೀ ಕಳ್ಳತನ ನಡೆದಿದೆ. ಫೆ.28 ರಂದು ರಾತ್ರಿ 9 ಗಂಟೆಗೆ ಷೋರೂಂಗೆ ಬೀಗ ಹಾಕಿ ಹೋಗಿ ಮರು ದಿನ ಶನಿವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಬಾಗಿಲು ತೆರೆಯ ಲೆಂದು ಬಂದಾಗ ಷೆಟರ್ ಮೀಟಿ ಕಳವು ಮಾಡಿರುವುದು ತಿಳಿಯಿತು. ಷೋರೂಂ ಮಾಲೀಕ ಬಿ.ಸಿ. ಸತೀಶ್‍ಕುಮಾರ್ ನೀಡಿದ ದೂರಿನನ್ವಯ ಸ್ಥಳಕ್ಕೆ ಧಾವಿಸಿದ ಕುವೆಂಪು ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಹಾ ವೀರ ಹಾಗೂ ಸಿಬ್ಬಂದಿ ಮಹಜರು ನಡೆಸಿ ದರು. ಶನಿವಾರ ಮುಂಜಾನೆ 5.34 ಗಂಟೆಗೆ ಷೋರೂಂ ಷೆಟರ್ ಮೀಟಿ ಒಳಗೆ ನುಸುಳಿ ಬಾಕ್ಸ್‍ಗಳಿಂದ ತೆಗೆದು ಬೆಲೆಬಾಳುವ ಮೊಬೈಲ್ ಫೋನ್‍ಗಳನ್ನು ಖದೀ ಮರು ಹೊತ್ತೊಯ್ದಿರುವುದು ಅಲ್ಲಿನ ಸಿಸಿ ಕ್ಯಾಮರಾ ಫುಟೇಜಸ್‍ಗಳನ್ನು ಪರಿ ಶೀಲಿಸಿದಾಗ ಕಂಡುಬಂದಿದೆ. ನಾಲ್ವರು ಖದೀಮರು ಷೋರೂಂನಲ್ಲಿ ಬಾಕ್ಸ್‍ಗಳಿಂದ ಐಫೋನ್‍ಗಳನ್ನು ಬೇರ್ಪಡಿಸಿ ಚೀಲಕ್ಕೆ ತುಂಬಿಕೊಳ್ಳುತ್ತಿರುವ ದೃಶ್ಯ ಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 39 ಆ್ಯಪಲ್ (ಐಫೋನ್) ಫೋನ್‍ಗಳು ಹಾಗೂ ಒನ್ ಪ್ಲಸ್, ವೊಪ್ಪೊ ಮತ್ತು ರಿಯಲ್ ಮಿ ಕಂಪನಿಗಳ 21 ಸೇರಿ 33 ಲಕ್ಷ ರೂ. ಮೌಲ್ಯದ (ಜಿಎಸ್‍ಟಿ ಹೊರತುಪಡಿಸಿ) ಒಟ್ಟು 60 ಮೊಬೈಲ್ ಫೋನ್‍ಗಳನ್ನು ಖದೀಮರು ಹೊತ್ತೊಯ್ದಿದ್ದಾರೆ ಎಂದು ಮಾಲೀಕ ಸತೀಶ್ ಕುಮಾರ್ ಮಹಜರು ನಡೆಸಿದ ಪೊಲೀಸರಿಗೆ ತಿಳಿಸಿದ್ದಾರೆ. ಷೋರೂಂನಲ್ಲಿ ಮಾರಾಟ ಕ್ಕಿರಿಸಿದ್ದ ಫೋನ್‍ಗಳಿಗೆ ನಾವು ವಿಮೆ ಮಾಡಿಸಿರಲಿಲ್ಲವಾದ್ದರಿಂದ ಇನ್ಶೂರೆನ್ಸ್ ಕ್ಲೇಮು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸತೀಶ್‍ಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ನಗರ ಬೆರಳಚ್ಚು ವಿಭಾಗ, ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಠಾಣೆ ಪೊಲೀಸರು, ಸಿಸಿ ಟಿವಿ ಕ್ಯಾಮರಾ ಫುಟೇಜಸ್‍ಗಳ ಸಹಾಯದಿಂದ ಖದೀಮರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.