ಕೋವಿಡ್ ನಡುವೆಯೂ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂದಾಯ
ಮೈಸೂರು

ಕೋವಿಡ್ ನಡುವೆಯೂ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂದಾಯ

July 14, 2020

ಮೈಸೂರು, ಜು. 13(ಆರ್‍ಕೆ)- ಕೋವಿಡ್-19 ಸಂಕಷ್ಟ ಪರಿಸ್ಥಿತಿಯಲ್ಲೂ ಮೈಸೂರು ಮಹಾನಗರ ಪಾಲಿಕೆಗೆ 41 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ.

ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ, ರಸ್ತೆ, ಚರಂಡಿ ನಿರ್ವಹಣೆಯಂತಹ ಮೂಲ ಸೌಕರ್ಯ ಒದಗಿಸಿ, ಮೈಸೂರು ನಗರ ನಿರ್ವಹಿಸಲು ಪಾಲಿಕೆಗೆ ಆಸ್ತಿ ತೆರಿಗೆ, ಉದ್ದಿಮೆ ರಹದಾರಿ ಶುಲ್ಕ, ನೀರಿನ ತೆರಿಗೆಯೇ ಪ್ರಮುಖ ಆರ್ಥಿಕ ಸಂಪ ನ್ಮೂಲವಾಗಿರುವುದರಿಂದ ಆದಾಯ ಕ್ರೋಢೀಕರಣವು ಪ್ರಮುಖ ಕರ್ತವ್ಯ ವಾಗಿದೆ. ಮೈಸೂರು ನಗರದಲ್ಲಿ 26,000 ಕಂದಾಯ ಆಸ್ತಿಗಳು ಸೇರಿ ಒಟ್ಟು 1,83,000 ಸ್ಥಿರಾಸ್ತಿಗಳಿದ್ದು, ತೆರಿಗೆ ಪಾವತಿಸುವಂತೆ ಪ್ರೋತ್ಸಾಹಿಸಲು ಮೈಸೂರು ಮಹಾ ನಗರ ಪಾಲಿಕೆಯು ಜು.31ರೊಳಗೆ ಆಸ್ತಿ ತೆರಿಗೆ ಮೊತ್ತದ ಮೇಲೆ ಶೇ.5ರಷ್ಟು ವಿನಾಯಿತಿ ನೀಡಿದೆ. ಅದರಿಂದಾಗಿ ನಾಗರಿಕರು ಕೋವಿಡ್-19 ಪರಿಸ್ಥಿತಿ ನಡುವೆಯೂ ಮುಂದೆ ಬಂದು ಮೈಸೂರು ನಗರದಲ್ಲಿರುವ ವಲಯ ಕಚೇರಿಗಳಲ್ಲಿ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸುತ್ತಿರುವುದರಿಂದ ಈ ದಿನದವರೆಗೆ ಒಟ್ಟು 41 ಕೋಟಿ ರೂ. ಸಂದಾಯವಾಗಿದೆ. ವರ್ಷಕ್ಕೆ 150 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ (ಟಾರ್ಗೆಟ್) ಹೊಂದಿರುವ ಪಾಲಿಕೆಗೆ ಕೊರೊನಾ ವೈರಸ್ ಸೋಂಕಿನಿಂದಾಗಿ ನಿರೀಕ್ಷಿತ ಆದಾಯ ಬಂದಿಲ್ಲ. ಅತೀ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ಪಾವತಿಸಬೇಕಾಗಿ ರುವ ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಸರ್ಕಾರಿ ಇಲಾಖಾ ಕಚೇರಿಗಳೇ ಬಾಕಿ ಉಳಿಸಿಕೊಂಡಿರುವುದು ಪಾಲಿಕೆ ಆದಾಯ ಕ್ರೋಢೀಕರಣದಲ್ಲಿ ಹಿಂದೆ ಬೀಳಲು ಪ್ರಮುಖ ಕಾರಣವಾಗಿದೆ.

ಕಳೆದ ವರ್ಷ ಏಪ್ರಿಲ್ ಮಾಹೆಯೊಳಗೆ 56 ಕೋಟಿ ರೂ. ಆಸ್ತಿ ತೆರಿಗೆ ವಸೂಲಾಗಿತ್ತು. ಮೇ, ಜೂನ್, ಜುಲೈ ತಿಂಗಳಲ್ಲಿ 85 ಕೋಟಿ ರೂ. ಆಸ್ತಿ ತೆರಿಗೆ ವಸೂಲಾಗಿತ್ತು. ಈ ಬಾರಿ ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಾದ ಕಾರಣ ಜುಲೈ ತಿಂಗಳು ಬಂದರೂ ಕೇವಲ 41 ಕೋಟಿ ರೂ. ಮಾತ್ರ ಸಂದಾಯವಾದಂತಾಗಿದೆ. ಪಾಲಿಕೆ ಕಂದಾಯ ವಿಭಾಗದ ಜೊತೆಗೆ ಕಾರ್ಪೊರೇಟರ್‍ಗಳು, ಮೇಯರ್-ಉಪ ಮೇಯರ್‍ಗಳು ಕೈ ಜೋಡಿಸಿದಲ್ಲಿ ಇನ್ನಷ್ಟು ಕಂದಾಯ ವಸೂ ಲಾಗುತ್ತದೆ. ಸರ್ಕಾರಿ ಸಂಸ್ಥೆ ಕಚೇರಿಗಳೂ ಅನುದಾನ ತರಿಸಿ ಕೊಂಡು ನೀರು, ಆಸ್ತಿ ತೆರಿಗೆಯನ್ನು ಪಾವತಿಸಿದರೆ ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಲಿದೆ..

Translate »