ಮೈಸೂರು,ಮೇ2(ಎಂಟಿವೈ)- ಲಾಕ್‍ಡೌನ್ ನಿಂದಾಗಿ ಆದಾಯ ಮೂಲಕ್ಕೆ ಕಡಿವಾಣ ಬಿದ್ದ ಹಿನ್ನೆಲೆ ಯಲ್ಲಿ ಕಷ್ಟಕ್ಕೆ ಸಿಲುಕಿದ ಮೈಸೂರು ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ 2ನೇ ಹಂತದಲ್ಲಿ ಸ್ನೇಹಿತರಿಂದ ಸಂಗ್ರ ಹಿಸಿದ್ದ 45.30 ಲಕ್ಷ ರೂ ದೇಣಿಗೆ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಮೈಸೂರು ಮೃಗಾಲಯದ ಆ್ಯಂಪಿಥಿಯೇಟರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮ ಶೇಖರ್ 45.30 ಲಕ್ಷ ರೂ.ಗಳ ಚೆಕ್ ಹಾಗೂ ಡಿಡಿಯನ್ನು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಸೋಮಶೇಖರ್, ಲಾಕ್ ಡೌನ್ ನಿಂದಾಗಿ ಪ್ರವಾಸಿಗರಿಲ್ಲದೇ ಮೃಗಾಲಯಕ್ಕೆ ಆದಾಯ ಖೋತಾ ಆಗಿದೆ. ಆದರೆ, ನಿತ್ಯದ ನಿರ್ವಹಣೆ ವೆಚ್ಚ ದೊಡ್ಡದಾಗಿರುವುದರಿಂದ ಸಹಜವಾಗಿಯೇ ಮೃಗಾಲಯ ತೊಂದರೆಗೆ ಸಿಲುಕಿತ್ತು. ಇದನ್ನು ಮನಗಂಡು ಬೆಂಗ ಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸ್ನೇಹಿತರು, ಹಿತೈಷಿ ಗಳಿಂದ ಮೊದಲ ಹಂತದಲ್ಲಿ 73.16 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಮೃಗಾಲಯಕ್ಕೆ ನೀಡಲಾಗಿತ್ತು. 2ನೇ ಹಂತದಲ್ಲಿ ಸಂಗ್ರಹವಾದ 45.30 ಲಕ್ಷ ರೂ. ದೇಣಿಗೆಯನ್ನು ಈಗ ಮೃಗಾಲಯಕ್ಕೆ ನೀಡಲಾಗಿದೆ. ಮೃಗಾಲಯದ ಪ್ರಾಣಿ-ಪಕ್ಷಿ ಹಾಗೂ ಸಿಬ್ಬಂದಿಗೆ ತೊಂದರೆಯಾಗುವುದನ್ನು ತಡೆಯಲು ಒಟ್ಟು 1.19 ಕೋಟಿ ರೂ. ದೇಣಿಗೆ ನೀಡಲಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಗೋಪಾಲಯ್ಯ ಮಾತನಾಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಕೋರಿಕೆ ಮೇರೆಗೆ ಮೃಗಾಲಯದ ಪ್ರಾಣಿ-ಪಕ್ಷಿ ಮತ್ತು ಸಿಬ್ಬಂದಿಗಳ ಹಿತಕಾಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವೈಯಕ್ತಿಕವಾಗಿ 8 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದೇನೆ. ಅಲ್ಲದೆ ಮೃಗಾ ಲಯದಲ್ಲಿ ಕೆಲಸ ಮಾಡುತ್ತಿರುವ 300 ನೌಕರರಿಗೆ ತಲಾ 25 ಕೆಜಿ ಅಕ್ಕಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೃಗಾಲಯಕ್ಕೆ ಇನ್ನಷ್ಟು ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೈಸೂರು ಮೃಗಾಲಯ ನಿರ್ವಹಣೆಗೆ ಅಮೆರಿಕದಿಂದ ಬಂತು ದೇಣಿಗೆ: ಸಚಿವರ ಮನವಿಗೆ ಸ್ಪಂದನೆ
ಮೈಸೂರು, ಮೇ 2- ಮೈಸೂರಿನ ಜಯಚಾಮ ರಾಜೇಂದ್ರ ಮೃಗಾಲಯ ನಿರ್ವಹಣೆಗೋಸ್ಕರ ನಾಗರಿ ಕರು ದೇಣಿಗೆ ನೀಡಿ ಸಹಕರಿಸುವಂತೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ವಾಟ್ಸಪ್ ಮೂಲಕ ಮಾಡಿದ ಮನವಿಗೆ ಸ್ಪಂದಿಸಿದ ಅಮೆರಿಕದ ಫೀನಿಕ್ಸ್‍ನ ಜ್ಯೋತಿ ವಿಕಾಸ್ ಎಂಬುವರು ತಮ್ಮ ಮಗಳ ಹೆಸರಿ ನಲ್ಲಿ 25,000 ರೂಪಾಯಿ ದೇಣಿಗೆ ನೀಡಿದ್ದಾರೆ. ಸಚಿವರ ವಾಟ್ಸಪ್ ಸಂದೇಶದ ಬಗ್ಗೆ ಮಾಧ್ಯಮ ಗಳಲ್ಲಿ ಗಮನಿಸಿದ ಅವರು, ಪ್ರಾಣಿ-ಪಕ್ಷಿಗಳ ನಿರ್ವ ಹಣೆಗೋಸ್ಕರ ತಮ್ಮದೂ ಒಂದು ಕೊಡುಗೆ ಇರ ಬೇಕು ಎಂದು ಅನ್ನಿಸಿ ತಕ್ಷಣ ತಮ್ಮ ಪುತ್ರಿ ಪ್ರಿಶಾ ಹೆಸರಿನಲ್ಲಿ 25,000 ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪ್ರಿಶಾ ನಮ್ಮ 1 ವರ್ಷದ ಮಗಳಾಗಿದ್ದು, ಆಕೆಯ ಹೆಸರಿನಲ್ಲಿ 2 ತಿಂಗಳ ಅವಧಿಗೆ ಆನೆಯೊಂದನ್ನು ದತ್ತು ತೆಗೆದುಕೊಂಡಿ ದ್ದೇವೆ. ಸಚಿವರು ಮಾಡಿದ ಮನವಿಯನ್ನು ಮಾಧ್ಯಮ ಗಳ ಮೂಲಕ ಗಮನಿಸಿ ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿದೆವು. ಜೊತೆಗೆ ಇಲ್ಲಿನ ದಾನಿಗಳಿಂದ ಪ್ರಾಣಿಗಳಿಗೆ ಸಹಾಯಧನವನ್ನು ಸಂಗ್ರಹಿ ಸಲು ನಮ್ಮ ಬಳಗ ನಿರ್ಧರಿಸಿದೆ ಎಂದು ಅಮೆರಿಕದ ಫೀನಿಕ್ಸ್ ನಗರದಲ್ಲಿರುವ ಜ್ಯೋತಿ ವಿಕಾಸ್ ತಿಳಿಸಿದ್ದಾರೆ.
ಮೈಸೂರು ಮೃಗಾಲಯಕ್ಕೆ ನೆರವಾಗುವಂತೆ ಇನ್ಫೋಸಿಸ್ ಫೌಂಡೇಷನ್‍ಗೆ ಸಚಿವರ ಪತ್ರ
ಮೈಸೂರು,ಮೇ 2(ಎಂಟಿವೈ)- ಸಂಪನ್ಮೂಲ ಕೊರತೆಯಿಂದಾಗಿ ಮೈಸೂರು ಮೃಗಾಲಯ ನಿರ್ವಹಣೆ ಕಷ್ಟವಾಗಿರುವುದರಿಂದ ಆರ್ಥಿಕ ನೆರವು ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಇನ್ಫೋಸಿಸ್ ಫೌಂಡೇ ಷನ್ ಸಂಸ್ಥಾಪಕಿ ಸುಧಾಮೂರ್ತಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮೃಗಾ ಲಯದಲ್ಲಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ಪೂರೈಕೆ, ಸಿಬ್ಬಂದಿ ವೇತನಕ್ಕೆ ತಿಂಗಳಿಗೆ 2 ಕೋಟಿ ರೂ. ವೆಚ್ಚವಾಗುತ್ತದೆ. ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರಿಲ್ಲದೇ ಆದಾಯಕ್ಕೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, 224 ಶಾಸಕರು, 28 ಸಂಸದರು, ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದು ಮೃಗಾಲಯಕ್ಕೆ ದೇಣಿಗೆ ನೀಡಿ, ಪ್ರಾಣಿ-ಪಕ್ಷಿಗಳ ಹಿತಕಾಯುವಂತೆ ಮನವಿ ಮಾಡಿದ್ದರು. ಇದೀಗ ಇನ್‍ಫೋಸಿಸ್ ಫೌಂಡೇಷನ್‍ಗೂ ಪತ್ರ ಬರೆದಿದ್ದಾರೆ.
(ಸಚಿವರ ಪತ್ರದ ಸಾರಾಂಶ)
`ಗೌರವಾನ್ವಿತ ಮಾತೃ ಸ್ವರೂಪಿ ಡಾ.ಸುಧಾ ನಾರಾಯಣಮೂರ್ತಿ ಅವರೆ,
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನಾನು 125 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದೆ. ಮೃಗಾಲಯ ಸ್ವಾಯತ್ತ ಸಂಸ್ಥೆಯಾಗಿದ್ದು, 2002ರಿಂದ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಪಡೆಯದೇ ಮೃಗಾಲಯ ಪ್ರವೇಶ ಶುಲ್ಕದ ಹಣದಿಂದಲೇ ಪ್ರಾಣಿ ಮತ್ತು ಪಕ್ಷಿಗಳ ಆಹಾರ, ಸಿಬ್ಬಂದಿ ವೇತನ ಹಾಗೂ ಮೃಗಾಲಯ ನಿರ್ವಹಣೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡುತ್ತಿರು ವುದು ಗಮನಕ್ಕೆ ಬಂದಿತು. ಅಲ್ಲಿನ ಪ್ರಾಣಿ ಮತ್ತು ಪಕ್ಷಿಗಳಿಗೆ ಮೃಗಾಲಯದ ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದರೂ ನನ್ನ ಮತಕ್ಷೇತ್ರವಾದ ಯಶವಂತಪುರದ ದಾನಿಗಳಿಂದ ಒಟ್ಟು 1.18 ಕೋಟಿ ರೂ. ಸಂಗ್ರಹಿಸಿ ಮೃಗಾಲಯಕ್ಕೆ ನೀಡಲಾಗಿದೆ. ದಯಮಾಡಿ, ತಾವು ಕೂಡ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಮೃಗಾಲಯದ ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತಿತರ ಸೌಲಭ್ಯಗಳಿಗೆ ಆರ್ಥಿಕ ಸಹಾಯ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ’.
ಗೌರವಗಳೊಂದಿಗೆ,
ಎಸ್.ಟಿ.ಸೋಮಶೇಖರ್