ಕೊರೊನಾ: ರಾಜ್ಯದಲ್ಲಿ ಸತ್ತವರ ಸಂಖ್ಯೆ 25 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಮೈಸೂರು

ಕೊರೊನಾ: ರಾಜ್ಯದಲ್ಲಿ ಸತ್ತವರ ಸಂಖ್ಯೆ 25 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ

May 3, 2020

ಬೆಂಗಳೂರು, ಮೇ 2(ಕೆಎಂಶಿ)-ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 600ರ ಗಡಿ ದಾಟಿದ್ದು, ಬೆಂಗಳೂರು, ಬೀದರ್, ದಾವಣಗೆರೆಯಲ್ಲಿ ತಲಾ ಒಂದು ಸಾವಿನ ಮೂಲಕ ಸಾವಿನ ಸಂಖ್ಯೆ 25ಕ್ಕೇರಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ ಮೂರು ಮಂದಿಯ ಸಾವನ್ನು ಸರ್ಕಾರ ಪ್ರಕಟಿಸಿದೆ. ಇಂದು ಬೆಳಿಗ್ಗೆ ಬಿಡುಗಡೆ ಮಾಡಲಾದ ಹೆಲ್ತ್ ಬುಲೆಟಿನ್ ನಲ್ಲಿ ಸರ್ಕಾರ ಕೊರೊನಾದಿಂದ 3 ಮಂದಿ ಸಾವನ್ನಪ್ಪಿರುವುದನ್ನು ಬಹಿರಂಗಪಡಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸಲಾರಂಭಿಸಿದ ದಿನಗಳಿಂದ ಇದೇ ಮೊದಲ ಬಾರಿಗೆ ಮೂರು ಮಂದಿಯ ಸಾವಿನ ವರದಿ ಬಹಿರಂಗಗೊಳ್ಳುತ್ತಿದೆ.

ಬೆಂಗಳೂರು ನಗರದ ನಿವಾಸಿಯಾದ ರೋಗಿ ಸಂಖ್ಯೆ 557ರ 63 ವರ್ಷದ ವ್ಯಕ್ತಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ದೀರ್ಘ ಕಾಲೀನ ಮಧುಮೇಹ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಡಯಾಲಿಸಿಸ್‍ಗೆ ಒಳಗಾಗಿದ್ದರು. ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿದ್ದರಿಂದ ಕಿಮೋ ಥೆರಪಿ ಕೂಡ ಮಾಡಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರನ್ನು ಏ.30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 2ರಂದು ಅಂದರೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 556ರ 69 ವರ್ಷದ ವೃದ್ಧರೊಬ್ಬರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜೊತೆಯಲ್ಲಿ ದೀರ್ಘ ಕಾಲದಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ದಾವಣಗೆರೆ ಆಸ್ಪತ್ರೆಗೆ ಏ.28ರಂದು ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೇ 1ರಂದು ರಾತ್ರಿ ಮೃತಪಟ್ಟಿದ್ದಾರೆ. ಇವರು ಯಾವುದೇ ದೂರದೂರಿಗೆ ಪ್ರಯಾಣ ಮಾಡಿರಲಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕಿರುವುದು ಖಚಿತವಾಗಿತ್ತು. ಸೋಂಕು ಹೇಗೆ ಅಂಟಿಕೊಂಡಿದೆ ಎಂಬುದು ಸ್ಪಷ್ಟವಾಗದೆ ಸರ್ಕಾರ ತಲೆ ಕೆಡಿಸಿಕೊಳ್ಳುವಂತಾಗಿದೆ.

ಬೀದರ್ ಜಿಲ್ಲೆಯಲ್ಲಿ ರೋಗಿ ಸಂಖ್ಯೆ 590ರ 82 ವರ್ಷದ ವೃದ್ಧರೊಬ್ಬರು ನಿನ್ನೆ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಏ.27ರಂದು ಬೀದರ್‍ನ ಆಸ್ಪತ್ರೆಗೆ ದಾಖಲಾಗಿದ್ದರು. ಮಾರನೇ ದಿನವೇ ಸಾವನ್ನಪ್ಪಿದ್ದಾರೆ. ಮರಣೋತ್ತರವಾಗಿ ಬಂದಿರುವ ಲ್ಯಾಬ್ ವರದಿ ಮೃತರಿಗೆ ಕೊರೊನಾ ಸೋಂಕಿರುವುದರನ್ನು ನಿನ್ನೆ ಖಚಿತಪಡಿಸಿದೆ. ಈ ಸಾವುಗಳ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 25ಕ್ಕೇರಿಕೆಯಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೇರಿಕೆಯಾದರೆ, ಬೀದರ್ ಮತ್ತು ದಾವಣಗೆರೆಯಲ್ಲಿ ಹೊಸದಾಗಿ ಸಾವಿನ ಪ್ರಕರಣಗಳು ದಾಖಲಾಗಿವೆ.

ಸೋಂಕಿತರು: ಇಂದು ಬಿಡುಗಡೆಯಾಗಿರುವ ಲ್ಯಾಬ್ ವರದಿಯ ಪ್ರಕಾರ ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು, ತುಮಕೂರು, ವಿಜಯಪುರದಲ್ಲಿ ತಲಾ ಎರಡು ಹಾಗೂ ಬೆಂಗಳೂರಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 601 ಮಂದಿಗೆ ಸೋಂಕು ತಗುಲಿದೆ.

Translate »