ಪ್ರವೀಣ್ ಹತ್ಯೆಯಾದ 48 ಗಂಟೆಯಲ್ಲಿ ಸುರತ್ಕಲ್‍ನಲ್ಲಿ ಮತ್ತೊಬ್ಬ ಯುವಕನ ಹತ್ಯೆ
News

ಪ್ರವೀಣ್ ಹತ್ಯೆಯಾದ 48 ಗಂಟೆಯಲ್ಲಿ ಸುರತ್ಕಲ್‍ನಲ್ಲಿ ಮತ್ತೊಬ್ಬ ಯುವಕನ ಹತ್ಯೆ

July 29, 2022

ಮಂಗಳೂರು, ಜು.28-ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿ ನಡೆದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಕಾವು ಆರುವ ಮುನ್ನವೇ ಗುರುವಾರ ರಾತ್ರಿ ಸುರತ್ಕಲ್‍ನ ಜನನಿಬಿಡ ಪ್ರದೇಶದಲ್ಲಿ ಸಾರ್ವಜನಿಕರ ಕಣ್ಣೆದುರೇ ಯುವಕ ನೋರ್ವನನ್ನು ಮೂರ್ನಾಲ್ಕು ದುಷ್ಕರ್ಮಿ ಗಳು ತಲ್ವಾರ್‍ಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಮಂಗಳಪೇಟೆ ನಿವಾಸಿ ಫಾಜಿಲ್(23) ಹತ್ಯೆಗೀಡಾದವನಾಗಿದ್ದು, ಸುರತ್ಕಲ್‍ನ ಬಟ್ಟೆ ಅಂಗಡಿಯೊಂದರ ಮುಂದೆ ನಿಂತು ಸ್ನೇಹಿತನ ಜೊತೆ ಮಾತನಾಡಿ, ಅಂಗಡಿ ಯೊಳಗೆ ಹೋಗುತ್ತಿದ್ದಂತೆಯೇ ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಆತನನ್ನು ಅಟ್ಟಾಡಿಸಿಕೊಂಡು ತಲ್ವಾರ್ ಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಫಾಜಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಬಿಳಿ ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಂಕಿ ಕ್ಯಾಪ್ ಧರಿಸಿದ್ದರು. ರಸ್ತೆಯಲ್ಲಿ ಜನರ ಓಡಾಟವೂ ಕೂಡ ಇತ್ತು. ಹಠಾತ್ತನೆ ನಡೆದ ಈ ಕೃತ್ಯ ದಿಂದ ಭಯಭೀತರಾದ ಜನರು ಅತ್ತಿಂದಿತ್ತ ಓಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರದ ಸುರತ್ಕಲ್, ಬಜ್ಪೆ, ಪಣಂಬೂರು ಮತ್ತು ಮುಲ್ಕಿ ಠಾಣಾ ವ್ಯಾಪ್ತಿಗಳಲ್ಲಿ ಶನಿವಾರ ಬೆಳಗ್ಗೆವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಈ ಸಂಬಂಧ ಮಾಧ್ಯಮ ಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಮೂರ್ನಾಲ್ಕು ಮಂದಿಯ ತಂಡ ಈ ಹತ್ಯೆ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಯಾವ ಕಾರಣಕ್ಕೆ ಯಾರು ಹತ್ಯೆ ಮಾಡಿ ದ್ದಾರೆ ಎಂಬುದರ ಬಗ್ಗೆ ತನಿಖೆ ನಡೆ ಯುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿ ಗೊಡದೇ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು. ನಾಲ್ಕೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾನೂನು-ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ.

ಮತ್ತೊಂದೆಡೆ ಮಾಜಿ ಶಾಸಕ ಮೊಹಿಯು ದ್ದೀನ್ ಬಾವ, ಸುದ್ದಿಗಾರರೊಂದಿಗೆ ಮಾತ ನಾಡಿ, ಹತ್ಯೆಗೀಡಾದ ಯುವಕ ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರತೀ ಕಾರಕ್ಕಾಗಿ ಈ ಹತ್ಯೆ ನಡೆದಿದೆ ಎಂದು ತಿಳಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮೂರ್ನಾಲ್ಕು ಮಂದಿ ಯಿಂದ ಸುರತ್ಕಲ್‍ನಲ್ಲಿ ಯುವಕನ ಹತ್ಯೆಯಾಗಿದೆ. ಈ ಹತ್ಯೆಯ ಹಿನ್ನೆಲೆ ಹಾಗೂ ಹಂತಕರ ಬಗ್ಗೆ ತಮಗೆ ಇನ್ನೂ ಮಾಹಿತಿ ದೊರೆತಿಲ್ಲ. ಸದ್ಯಕ್ಕೆ ಆ ಪ್ರದೇಶ ದಲ್ಲಿ ಕಾನೂನು-ಸುವ್ಯವಸ್ಥೆ ನಿಯಂತ್ರ ಣದಲ್ಲಿದೆ ಎಂದು ಹೇಳಿದ್ದಾರೆ.

Translate »