ಮೈಸೂರಿನಿಂದ ತಿರುಪತಿಗೆ ಶೀಘ್ರವೇ ವಿಮಾನ ಹಾರಾಟ
ಮೈಸೂರು

ಮೈಸೂರಿನಿಂದ ತಿರುಪತಿಗೆ ಶೀಘ್ರವೇ ವಿಮಾನ ಹಾರಾಟ

July 29, 2022

ಮೈಸೂರು, ಜು.28(ಆರ್‍ಕೆ)-ಮೈಸೂರಿನಿಂದ ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪತಿಗೆ ಶೀಘ್ರವೇ ನೇರ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ದೇಶದ ಪ್ರಮುಖ ಯಾತ್ರಾಸ್ಥಳವಾದ ತಿರುಪತಿಗೆ ಭಕ್ತಾದಿಗಳಿಂದ ಭಾರೀ ಬೇಡಿಕೆ ಇರುವುದ ರಿಂದ ಈಗಾಗಲೇ ಇಂಡಿಗೋ ಸಂಸ್ಥೆ ಜೊತೆ ಮಾತುಕತೆ ನಡೆ ಸಲಾಗಿದ್ದು, ಮೈಸೂರು-ತಿರುಪತಿ ನಡುವೆ ವಿಮಾನ ಹಾರಾಟ ಆರಂಭಿಸಿದಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಅಂದಾಜಿಸಲಾಗುತ್ತಿದೆ. ಜೊತೆಗೆ ಪ್ರಯಾಣ ಶುಲ್ಕ ನಿಗದಿ, ಟೂರ್ ಪ್ಯಾಕೇಜ್ ಇತ್ಯಾದಿ ವಿಷಯಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು. ತಿರುಪತಿಯ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಆನ್‍ಲೈನ್ ಟಿಕೆಟ್ ವ್ಯವಸ್ಥೆ ಇರುವುದರಿಂದ ಟಿಕೆಟ್ ಬುಕ್ ಆಗಿ ವಾಸ್ತವ್ಯಕ್ಕೂ ವ್ಯವಸ್ಥೆ ಖಚಿತವಾದ ಭಕ್ತರು ಮಾತ್ರ ತಿರುಪತಿ ಪ್ರವಾಸ ಹಮ್ಮಿಕೊಳ್ಳುತ್ತಾರೆ. ಕೆಎಸ್‍ಆರ್‍ಟಿಸಿ ಬಸ್, ಕೆಎಸ್‍ಟಿಡಿಸಿ ಟೂರ್ ಪ್ಯಾಕೇಜ್, ಖಾಸಗಿ ಬಸ್ಸುಗಳ ವ್ಯವಸ್ಥೆ ಹಾಗೂ ನಿತ್ಯ ರೈಲು ಸಂಚಾರ ಸೌಲಭ್ಯವೂ ಇರುವುದರಿಂದ ವಿಮಾನದಲ್ಲಿ ಎಷ್ಟು ಮಂದಿ ತಿರುಪತಿಗೆ ಪ್ರಯಾಣ ಮಾಡುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ವಿಮಾನ ಸಂಪರ್ಕ ಕಲ್ಪಿಸಲು ಇಂಡಿಗೋ ಸಂಸ್ಥೆ ನಿರ್ಧರಿಸಲಿದೆ ಎಂದು ಮಂಜುನಾಥ್ ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಪೂರ್ವ ಸಿದ್ಧತೆಯೂ ಪ್ರಗತಿಯಲ್ಲಿ ರುವುದರಿಂದ ಶೀಘ್ರವೇ ಮೈಸೂರು ಮತ್ತು ತಿರುಪತಿ ನಡುವೆ ಇಂಡಿಗೋ ವಿಮಾನ ಹಾರಾಟ ಆರಂಭಿಸಲಿದೆ. ಅದು ಸಾಕಾರವಾದಲ್ಲಿ ಕಡಿಮೆ ಅವಧಿಯಲ್ಲಿ ತಿರುಪತಿ ಯಾತ್ರೆ ಮುಗಿಸಲು ಭಕ್ತಾದಿಗಳಿಗೆ ಸಾಧ್ಯವಾಗಲಿದೆ ಎಂದರು.
ಈಗಾಗಲೇ ಲಕ್ಷದ್ವೀಪದ ಅಗಟ್ಟಿ ಪ್ರವಾಸಿ ಕೇಂದ್ರಕ್ಕೂ ಕಳೆದ 10 ತಿಂಗಳಿಂದ ಸಂಪರ್ಕ ವಿಮಾನ ವ್ಯವಸ್ಥೆ ಇದ್ದು, ಪ್ರವಾಸಿಗರಿಂದ ಈ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏರ್ ಅಲಯನ್ಸ್ ವಿಮಾನವು ಪ್ರತಿ ದಿನ ಬೆಂಗಳೂರು-ಮೈಸೂರು-ಕೊಚ್ಚಿ ಮೂಲಕ ಅಗಟ್ಟಿಗೆ ಹಾರಾಟ ನಡೆಸುತ್ತಿದೆ. ಸುಮಾರು ಶೇ.60 ರಿಂದ 70 ರಷ್ಟು ಸೀಟುಗಳು ಭರ್ತಿಯಾಗುತ್ತಿವೆ ಎಂದು ಅವರು ತಿಳಿಸಿದರು.

ಅದೇ ರೀತಿ ಮೈಸೂರು ಮತ್ತು ಚೆನ್ನೈ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರಯಾಣಿಸುತ್ತಿದ್ದು, ಹೆಚ್ಚುವರಿ ಫ್ಲೈಟ್‍ಗೆ ಬೇಡಿಕೆ ಇರುವುದರಿಂದ ಮತ್ತಷ್ಟು ವಿಮಾನ ಕಾರ್ಯಾಚರಿಸುವಂತೆ ಅಲಯನ್ಸ್ ಏರ್ ಸಂಸ್ಥೆಯನ್ನು ಕೇಳಿಕೊಳ್ಳಲಾಗಿದೆ. ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವುದರಿಂದ ಪ್ರವಾಸ ಮತ್ತು ಯಾತ್ರೆ ಕೈಗೊಳ್ಳಲು ಜನರು ಆಸಕ್ತಿ ತೋರುತ್ತಿರುವುದರಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮಂಜುನಾಥ್ ನುಡಿದರು. ಪ್ರಸ್ತುತ ಮೈಸೂರಿನಿಂದ ಬೆಂಗಳೂರು, ಹೈದರಾಬಾದ್, ಗೋವಾ, ಕೊಚ್ಚಿ, ಚೆನ್ನೈ ಹಾಗೂ ಹುಬ್ಬಳ್ಳಿಗೆ ವಿಮಾನ ಸಂಪರ್ಕವಿದ್ದು, ಎಲ್ಲಾ ಫ್ಲೈಟ್‍ಗಳಲ್ಲೂ ಶೇ.65 ರಿಂದ 75ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಮುಂದಿನ ದಿನಗಳಲ್ಲಿ ಕಲಬುರಗಿ, ಪುಣೆ, ತಿರುವನಂತಪುರಂ, ಮಂಗಳೂರು, ಮುಂಬೈ ಹಾಗೂ ನವದೆಹಲಿಗೂ ಮೈಸೂರಿನಿಂದ ವಿಮಾನ ಸಂಪರ್ಕ ಕಲ್ಪಿಸಿದಲ್ಲಿ ದೇಶದ ಎಲ್ಲ ಪ್ರಮುಖ ನಗರಗಳಿಗೂ ವಿಮಾನ ಸೌಲಭ್ಯ ಸಿಕ್ಕಿದಂತಾಗುತ್ತದೆ.

ಮೈಸೂರು ವಿಮಾನ ನಿಲ್ದಾಣದ ರನ್ ವೇಯನ್ನು ಪ್ರಸ್ತುತ ಇರುವ 1,740 ಮೀಟರ್‍ನಿಂದ 2,750 ಮೀಟರ್‍ಗೆ ವಿಸ್ತರಿಸುವ ಪ್ರಸ್ತಾವನೆ ಸಾಕಾರವಾದಲ್ಲಿ ಅಧಿಕ ಆಸನ ಸಾಮಥ್ರ್ಯದ ವಿಮಾನ ಹಾರಾಟಕ್ಕೆ ಅವಕಾಶವಾಗಲಿದ್ದು, ಮೈಸೂರಿನ ಕೈಗಾರಿಕೆಗಳು, ಶಿಕ್ಷಣ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಯೋಗ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Translate »