ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ
News

ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ

July 29, 2022

ಪುತ್ತೂರು, ಜು.28-ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನೀಡಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್‍ಕಟೀಲ್, ಸಚಿವರಾದ ಸುನೀಲ್‍ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ. ಸರ್ಕಾರ ಮತ್ತು ಬಿಜೆಪಿ ನಿಮ್ಮೊಂದಿಗಿದೆ ಎಂದು ಪ್ರವೀಣ್ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೊಲೆ ಮಾತ್ರವಲ್ಲ, ದೇಶ ದ್ರೋಹದ ಕೆಲಸ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೇರಳದ ಗಡಿಯಲ್ಲಿ ನಡೆದಿರುವುದರಿಂದ ಇದು ವ್ಯವಸ್ಥಿತ ಕೊಲೆ ಎನ್ನಬಹುದು. ಕರಾವಳಿ ಪ್ರದೇಶದಲ್ಲಿ ಇಂತಹ ಕೊಲೆಗಳು ನಡೆಯುತ್ತಿರುವ ಪರಿಣಾಮ, ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪ್ರಕರಣವನ್ನೂ ಕೂಡ ಎನ್‍ಐಎಗೆ ವಹಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಹತ್ಯೆ ಹಿಂದೆ ಯಾವುದೇ ಸಂಘಟನೆ ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

Translate »