ವಿಶೇಷಚೇತನರಿಗಾಗಿಯೇ ಶೇ.5ರ ಅನುದಾನ ಬಳಕೆ
ಮೈಸೂರು

ವಿಶೇಷಚೇತನರಿಗಾಗಿಯೇ ಶೇ.5ರ ಅನುದಾನ ಬಳಕೆ

November 22, 2020

ಮೈಸೂರು, ನ.21(ಎಸ್‍ಬಿಡಿ)- ಮೈಸೂರು ತಾಲೂಕು ಪಂಚಾಯ್ತಿಯಲ್ಲಿ ವಿಶೇಷಚೇತನರ ಅನುಕೂಲಕ್ಕಾಗಿ ಮೀಸಲಿರುವ ಶೇ.5ರ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ ಎಂಬ ಸದಸ್ಯರ ಆರೋಪಕ್ಕೆ ಕಾರ್ಯನಿರ್ವಾಹಕಾಧಿಕಾರಿ(ಇಓ) ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದ ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಶೇ.5ರ ಅನುದಾನವನ್ನು ವಿಕಲಚೇತನರ ಕಲ್ಯಾಣ ಕಾರ್ಯಗಳಿಗೆ ನಿಗದಿಪಡಿಸಲಾಗಿದೆ. ಜೂ.8ರಂದು ನಡೆದ ಸಾಮಾನ್ಯ ಸಭೆಯಲ್ಲಿ 2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಂಡಿರುವ ಕಾರಣ ನಂತರದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿಲ್ಲ. ಹಾಗೆಯೇ ಸೆ.21ರಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೇ.5ರ ಅನುದಾನ ಬಳಕೆಯಲ್ಲಿ ಸರ್ಕಾರಿ ಶಾಲೆಗಳ ಅಗತ್ಯತೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿರುವುದರಿಂದ ವರುಣಾ, ಇಲವಾಲ ಹಾಗೂ ಜಯಪುರ ಹೋಬಳಿ ವ್ಯಾಪ್ತಿಯ ಶಾಲೆಗಳನ್ನು ಕ್ರಿಯಾಯೋಜನೆಗೆ ಒಳಪಡಿಸಿ ಕೊಳ್ಳಲಾಗಿದೆ ಎಂದು ಇಓ ಮಾಹಿತಿ ನೀಡಿರುವ ಪತ್ರ ಶನಿವಾರ ತಲುಪಿದೆ ಎಂದು ತಾಪಂ ಸದಸ್ಯ ಕೆ.ಹನುಮಂತ ತಿಳಿಸಿದ್ದಾರೆ. ತಾಲೂಕಿನ ಮೂಡಲಹುಂಡಿ ಹಾಗೂ ತಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ 2, ಕಲ್ಲೂರು ನಾಗನಹಳ್ಳಿ, ಕಲ್ಲೂರು, ಚಿಕ್ಕನಹಳ್ಳಿ, ದೂರ ಹಾಗೂ ಆನಂದೂರು ಶಾಲೆಗಳಲ್ಲಿ ತಲಾ ಒಂದು ಸೇರಿದಂತೆ 9 ವಿಕಲಚೇತನ ವಿದ್ಯಾರ್ಥಿಗಳಿದ್ದಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ. ಹೀಗೆ ಒಬ್ಬರು, ಇಬ್ಬರು ವಿಕಲಚೇತನರಿರುವ ಶಾಲೆಗಳಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ, ವಿಶೇಷ ಶೌಚಾಲಯ ನಿರ್ಮಿಸುವ ಅಗತ್ಯವಿದೆಯೇ? ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಶಾಸಕರು ಕಾಳಜಿಯಿಂದ ನೀಡಿದ ಸೂಚನೆ ಯನ್ನೇ ನೆಪವಾಗಿಸಿಕೊಂಡು ದುರ್ಬಳಕೆಗೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದ್ದಾರೆ.

Translate »