10 ದಿನಗಳ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ
ಮೈಸೂರು

10 ದಿನಗಳ ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ

November 22, 2020

ರೇಷ್ಮೆ ಜವಳಿ ಮಾರಾಟ ಮೇಳ ಉದ್ಘಾಟಿಸಿದ ಮೇಯರ್ ತಸ್ನೀಂ, ಮುಡಾ ಅಧ್ಯಕ್ಷ ರಾಜೀವ್

ಮೈಸೂರು, ನ.21(ವೈಡಿಎಸ್)- ನಂಜರಾಜ ಬಹದ್ದೂರ್ ಛತ್ರದಲ್ಲಿ ಹಸ್ತಶಿಲ್ಪಿ’ ವತಿಯಿಂದ ನ.20 ರಿಂದ 29ರವರೆಗೆ ಆಯೋಜಿಸಿರುವಸಿಲ್ಕ್ ಇಂಡಿಯಾ-2020 ಮೇಳಕ್ಕೆ ಮೇಯರ್ ತಸ್ನೀಂ ಮತ್ತು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ರಾಜೀವ್ ಮಾತನಾಡಿ, ಕೈಮಗ್ಗ ದಿಂದ ತಯಾರಿಸಿದ 14 ರಾಜ್ಯಗಳ ಗುಣಮಟ್ಟದ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ವನ್ನು ಮೈಸೂರಿನಲ್ಲಿ ಆಯೋಜಿಸಿದ್ದು, ನಗರದ ಜನತೆ ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಮೇಳದಲ್ಲಿ ಕಾಶ್ಮಿರದಿಂದ ಕನ್ಯಾಕುಮಾರಿ ವರೆಗಿನ ಪ್ರದೇಶಗಳ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಕರು ಮತ್ತು ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿವೆ. 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನ ಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿವೆ.

ಮೇಳದಲ್ಲೇನಿದೆ: ಟಸ್ಸಾರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರ್ಣಿ ರೇಷ್ಮೆ ಸೀರೆ, ಧರ್ಮಾವರಂ-ಕಾಂಜಿವರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ಕಚ್ಚಾ ರೇಷ್ಮೆ ಮತ್ತು ಕೋಸಾ ಸೀರೆಗಳು, ಕೊಲ್ಕತ್ತಾ ಗಣಪತಿ ಸೀರೆ ಗಳು, ಢಾಕಾ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್ ಮೆಟೀರಿಯಲ್, ಬಾಲು ಚಾರಿ ರೇಷ್ಮೆ ಸೀರೆಗಳು, ಮಟ್ಕಾ ಸೀರೆಗಳು, ಪಶ್ಮೀನಾ ಶಾಲುಗಳು, ಬೂಟಿಕ್ ಸೀರೆಗಳು, ಬಾಗಲ್ಪುರ ರೇಷ್ಮೆ ಸೀರೆಗಳು ಲಭ್ಯವಿವೆ. ಮೇಳ ನಿತ್ಯ ಬೆಳಿಗ್ಗೆ 10.30 ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ. ಹಸ್ತಶಿಲ್ಪಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದನ್, ಕಾರ್ಯದರ್ಶಿ ಮಂಜುನಾಥ್ ಮತ್ತಿತರರಿದ್ದರು.

Translate »