ಮೈಸೂರಿನಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ 500 ಮಂದಿ ಕರಸೇವಕರು
ಮೈಸೂರು

ಮೈಸೂರಿನಿಂದ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ 500 ಮಂದಿ ಕರಸೇವಕರು

August 3, 2020

ಮೈಸೂರು, ಆ.2(ಆರ್‍ಕೆಬಿ)- ಅಯೋಧ್ಯೆ ಯಲ್ಲಿ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಮಂದಿರ ನಿರ್ಮಾ ಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಅದ ರಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ವಿಶೇಷ ರೈಲಿನಲ್ಲಿ 500ಕ್ಕೂ ಹೆಚ್ಚು ಮಂದಿ ಕರ ಸೇವಕರು ಅಯೋಧ್ಯೆಗೆ ತೆರಳಿ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗ ವಹಿಸಲಿದ್ದಾರೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಮ್ಮ ತಾಯಿ ಗೋಲಕದಲ್ಲಿ ಸಂಗ್ರಹಿಸಿದ್ದ 7,80,216 ರೂ.ಗಳನ್ನು ಅಯೋ ಧ್ಯೆಗೆ ಕರಸೇವಕರು ತಲುಪಿಸಲಿದ್ದಾರೆ. ಆದರೆ ಇದರ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆ.5ರಂದು ನಡೆಯುವ ಶಿಲಾನ್ಯಾಸ ಕಾರ್ಯ ಕ್ರಮವನ್ನು ಅಂದು ವಿದ್ಯಾರಣ್ಯಪುರಂನ ತಮ್ಮ ಕಚೇರಿ ಮುಂಭಾಗ ದೊಡ್ಡ ಎಲ್‍ಇಡಿ ಪರದೆಯನ್ನು ಅಳವಡಿಸಿ, ಸಾರ್ವಜನಿಕರು ನೇರವಾಗಿ ನೋಡಲು ಅವಕಾಶ ಮಾಡಿ ಕೊಡಲಾಗುತ್ತಿದೆ ಎಂದು ಹೇಳಿದರು.

ಶಿಲಾನ್ಯಾಸ ಸಂದರ್ಭದಲ್ಲಿ ಮೈಸೂರಿನ 10,000ಕ್ಕೂ ಹೆಚ್ಚು ಮನೆಗಳಲ್ಲಿ ಶ್ರೀರಾಮ ಪೂಜೆ, ರಾಮಭಜನೆ, ರಾಮತಾರಕ ಮಂತ್ರಿ, ರಾಮಕಥಾ ಪಾರಾಯಣ, ದೀಪ ಹಚ್ಚುವ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಕೃಷ್ಣರಾಜ ಕ್ಷೇತ್ರದ 14 ವೃತ್ತಗಳಲ್ಲಿ ರಾಮಪೂಜೆ, 25 ರಾಮಮಂದಿರಗಳು ಸೇರಿದಂತೆ 312 ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿದೆ. ಅಲ್ಲದೆ ಡಿಸೆಂಬರ್ 6ರಂದು ರಾಮಜನ್ಮಭೂಮಿಯ ಕರಸೇವೆಯಲ್ಲಿ ಭಾಗವಹಿಸಿದ್ದ ಮೈಸೂರಿನ ಕರಸೇವಕ ರನ್ನು ಸಹ ಸನ್ಮಾನಿಸಲಾಗುವುದು ಎಂದರು.

1850ರಲ್ಲಿ ರಾಮಮಂದಿರ ನಿರ್ಮಾಣ ಕ್ಕಾಗಿ ಹೋರಾಟ ಆರಂಭವಾಗಿತ್ತು. ಬ್ರಿಟಿಷ್ ಸರ್ಕಾರ ಹೋರಾಟವನ್ನು ಹತ್ತಿಕ್ಕಿತ್ತು. 1946 ರಲ್ಲಿ ಹಿಂದೂ ಮಹಾಸಭಾದ ಅಖಿಲ ಭಾರತೀಯ ರಾಮಾಯಣ ಮಹಾಸಭಾ (ಎಬಿಆರ್‍ಎಂ) ಅಯೋಧ್ಯೆಯ ಜನ್ಮಸ್ಥಾನ ಕ್ಕಾಗಿ ಹೋರಾಟ ಆರಂಭಿಸಿತು. ರಾಮ ಜನ್ಮ ಭೂಮಿ ಹೋರಾಟದ ಮೊದಲ ಕಹಳೆ ಊದಿದ್ದು ಕರ್ನಾಟಕದ ಉಡುಪಿಯಲ್ಲಿ ಎಂಬುದು ಹೆಮ್ಮೆಯ ವಿಷಯ ಎಂದರು. 1980ರಲ್ಲಿ ರಾಮಲಲ್ಲನಿಗಾರಿ ದೇವಾಲಯ ಕಟ್ಟಬೇಕೆಂದು ವಿಶ್ವ ಹಿಂದೂ ಪರಿಷತ್ ಪ್ರತಿಪಾದಿಸಿತು. 1986ರಲ್ಲಿ ರಾಮಲಲ್ಲಾನ ಪೂಜೆ ಜನ್ಮಸ್ಥಾನದಲ್ಲಿ ಮಾಡಲು ನ್ಯಾಯಾ ಲಯ ಅನುಮತಿ ಕೊಟ್ಟಾಗ ಕರ್ನಾಟಕ ದಲ್ಲಿ ಅದರ ಸಂಭ್ರಮ ಆಚರಿಸಲಾಯಿತು. 1989ರಲ್ಲಿ ಎಲ್.ಕೆ.ಅಡ್ವಾಣಿ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಜನರ ಅನುಮೋದನೆ ಪಡೆಯಲು ರಥಯಾತ್ರೆ ಆರಂಭಿಸಿದರು. ಅವರ ಇಚ್ಛೆಯಂತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಿಂದ, ರಥಯಾತ್ರೆ ಪ್ರಾರಂಭವಾಯಿತು. ಡಿ.6, 1992ರಂದು 2 ಲಕ್ಷ ಮಂದಿ ಕರಸೇವೆಯಲ್ಲಿ ಭಾಗವಹಿಸಿ ದ್ದರು. ಅಂದು 200ಕ್ಕೂ ಹೆಚ್ಚು ಮಂದಿ ಸಾವ ನ್ನಪ್ಪಿದ್ದರು. 1994ರಲ್ಲಿ ರಾಮಜನ್ಮಭೂಮಿಯ ಮಧ್ಯಕಾಲಿಕ ತೀರ್ಪು ಬಂದ ದಿನ ಮೈಸೂ ರಲ್ಲೇ ಇದ್ದ ಕಲ್ಯಾಣ್ ಸಿಂಗ್ ತಮ್ಮ ಪ್ರತಿ ಕ್ರಿಯೆ ನೀಡಿದ್ದರು ಎಂದು ವಿವರಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯಾರಂಭದ ಅಂಗವಾಗಿ ಆ.5ರಂದು ಕೃಷ್ಣರಾಜ ಕ್ಷೇತ್ರದ ಎಲ್ಲಾ 19 ವಾರ್ಡ್‍ಗಳಲ್ಲಿ ಬೆಳಿಗ್ಗೆ 9.30ಕ್ಕೆರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಾಮುಂಡಿ ಪುರಂ ವೃತ್ತ, ಜೆ.ಪಿ.ನಗರ ಗೊಬ್ಬಳಿಮರ ವೃತ್ತ, ಶ್ರೀರಾಂಪುರ ಭ್ರಮರಾಂಭ ವೃತ್ತ, ವಿವೇಕಾನಂದರ ವೃತ್ತ, ಕುವೆಂಪುನಗರ ಶಾಂತಿಸಾಗರ್ ಕಾಂಪ್ಲೆಕ್ಸ್, ಕವಿತಾ ಬೇಕರಿ ವೃತ್ತ, ಕುವೆಂಪುನಗರ ಅಕ್ಷಯ ಭಂಡಾರ್, ಕೆ.ಜಿ.ಕೊಪ್ಪಲು, ಕೃಷ್ಣಮೂರ್ತಿಪುರಂ ರಾಮ ಮಂದಿರ, ಅಶೋಕಪುರಂ ಸಿಲ್ಕ್ ಫ್ಯಾಕ್ಟರಿ ವೃತ್ತ, ಅಗ್ರಹಾರ ವೃತ್ತ, ಜ್ವಾಲಾಮುಖಿ ವೃತ್ತ, ಆಲನಹಳ್ಳಿ 2ನೇ ಹಂತದ ರಾಮಮಂದಿರ, ನಂಜನಗೂಡು ರಸ್ತೆ ಗಣಪತಿ ಸಚ್ಚಿದಾ ನಂದ ಆಶ್ರಮದ ಎದುರು ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಎಸ್‍ಎಸ್‍ನ ಶ್ರೀಹರಿ, ಸೇಫ್‍ವೀಲ್ಸ್‍ನ ಬಿ.ಎಸ್.ಪ್ರಶಾಂತ್, ಬಿಜೆಪಿ ಕೃಷ್ಣರಾಜ ಕ್ಷೇತ್ರ ಅಧ್ಯಕ್ಷ ವಡಿವೇಲು, ಮುಖಂಡ ಪ್ರೇಮ್‍ಕುಮಾರ್ ಉಪಸ್ಥಿತರಿದ್ದರು.

Translate »