- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರಿಂದ ಗರೀಬ್ ಕಲ್ಯಾಣ್ ರೋಜ್‍ಗಾರ್ ಯೋಜನೆ ಮಾಹಿತಿ
- ಯೋಜನೆಗೆ ಜೂನ್ 20ರಂದು ಪ್ರಧಾನಿ ಮೋದಿ ಅವರಿಂದ ಬಿಹಾರದ ಖಗೇರಿಯಾದಲ್ಲಿ ಚಾಲನೆ ಮುಂದಿನ 125 ದಿನಗಳಲ್ಲಿ ಕೇಂದ್ರ ಸರ್ಕಾರದ ಸುಮಾರು 25 ಯೋಜನೆಗಳ ಜಾರಿ
ನವದೆಹಲಿ, ಜೂ.18-ಕೊರೊನಾ ವೈರಸ್ ಹಾಗೂ ಲಾಕ್‍ಡೌನ್ ಕಾರಣಗಳಿಂದಾಗಿ ಅಸಂಖ್ಯಾತ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಿದ್ದಾರೆ. ಈ ಎಲ್ಲಾ ವಲಸೆ ಕಾರ್ಮಿಕರಿಗೆ ಅವರ ಗ್ರಾಮಗಳಲ್ಲೇ ಜೀವನೋ ಪಾಯ ಕಲ್ಪಿಸುವ ಗುರಿ ಹೊಂದಿರುವ ಗರೀಬ್ ಕಲ್ಯಾಣ್ ರೋಜ್‍ಗಾರ್ ಯೋಜನೆ ಕುರಿತ ಮಾಹಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ. ಈ ಯೋಜನೆಗಾಗಿ 50,000 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ಸೀತಾರಾಮನ್, ಕೊರೊನಾ ಲಾಕ್‍ಡೌನ್ ಕಾರಣದಿಂದಾಗಿ ದೇಶದ 6 ರಾಜ್ಯಗಳ ಒಟ್ಟು 116 ಜಿಲ್ಲೆಗಳು ಅಪಾರ ಪ್ರಮಾಣದ ವಲಸೆ ಕಾರ್ಮಿಕರನ್ನು ಮರಳಿ ತನ್ನ ಒಡಲಿಗೆ ಸೇರಿಸಿಕೊಂಡಿದೆ. ಹೀಗೆ ಮರಳಿದ ಎಲ್ಲಾ ವಲಸೆ ಕಾರ್ಮಿಕರನ್ನೂ ಕೇಂದ್ರ-ರಾಜ್ಯ ಸರ್ಕಾರಗಳು ಗುರುತಿಸಿದ್ದು, ಇವರಿಗೆ ಕೌಶಲ್ಯ ಸೆಟ್ ನೀಡಲು ಉದ್ದೇಶಿಸ ಲಾಗಿದೆ. ಅಲ್ಲದೆ, ಅವರಿಗೆ ಈ ಮೂಲಕ ಕೆಲಸವನ್ನೂ ಒದಗಿಸಲಾಗುತ್ತದೆ. ಪ್ರಧಾನಿ ಮೋದಿ ಜೂ.20ರಂದು ಬಿಹಾರದ ಖಗೇರಿಯಾ ಎಂಬಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಮುಂದಿನ 125 ದಿನಗಳಲ್ಲಿ ಕೇಂದ್ರ ಸರ್ಕಾರದ ಸುಮಾರು 25 ಯೋಜನೆಗಳನ್ನು ಗರಿಬ್ ಕಲ್ಯಾಣ್ ರೋಜ್‍ಗಾರ್ ಅಭಿಯಾನ್ ಯೋಜನೆಯ ಅಡಿಯಲ್ಲಿ ತರಲಾಗುವುದು. ಆ 125 ದಿನಗಳಲ್ಲಿ ಆ ಪ್ರತಿಯೊಂದು ಯೋಜನೆಗಳನ್ನೂ ನಾವು ಅಗತ್ಯವಿರುವ ಜನರಿಗೆ ತಲುಪಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೃಹತ್ ಗ್ರಾಮೀಣ ಲೋಕೋಪಯೋಗಿ ಯೋಜನೆಯನ್ನು ಜೂ.20ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ಸುಶೀಲ್ ಮೋದಿ ಅವರ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಪ್ರಾರಂಭಿಸಲಿದ್ದಾರೆ. ಈ ಕಾರ್ಯ ಕ್ರಮವನ್ನು ಬಿಹಾರದ ಖಗೇರಿಯಾ ಜಿಲ್ಲೆಯ ಬ್ಲಾಕ್ ಬೆಲ್ಡೌರ್ ಎಂಬ ತೆಲಿಹಾರ್ ಗ್ರಾಮ ದಿಂದ ಪ್ರಾರಂಭಿಸಲಾಗುವುದು. ಈ ವರ್ಚುವಲ್ ಉಡಾವಣೆಯಲ್ಲಿ ಇತರ ಐದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೆಲವು ಕೇಂದ್ರ ಸಚಿವರು ಸಹ ಭಾಗವಹಿಸಲಿದ್ದಾರೆ.