ನಾನೇ ನರಸಿಂಹರಾಜ ಕ್ಷೇತ್ರದ ಶಾಸಕ!
ಮೈಸೂರು

ನಾನೇ ನರಸಿಂಹರಾಜ ಕ್ಷೇತ್ರದ ಶಾಸಕ!

June 19, 2020

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಖಂಡನೆ
ಮೈಸೂರು, ಜೂ.18-ಸಾರ್ವತ್ರಿಕ ಚುನಾವಣೆಯಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಇರುವಾಗಲೇ, ನಾನೇ ನರಸಿಂಹರಾಜ ವಿಧಾನ ಸಭಾ ಕ್ಷೇತ್ರಕ್ಕೆ ಶಾಸಕ ಎಂದು ಹೇಳುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉದ್ಧಟತನ ಮೆರೆದಿದ್ದಾರೆ. ಇದು ಪ್ರಜಾಪ್ರತಿನಿಧಿಯೊಬ್ಬರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಮುಖಂಡರೂ ಆದ ಸಿಟಿ ಕೋ- ಆಪರೇಟಿವ್ ಬ್ಯಾಂಕ್ ನಿರ್ದೇಶಕ ಎನ್.ಧ್ರುವರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಹಿರಿಯ ಅಲ್ಪಸಂಖ್ಯಾತ ನಾಯಕ ಅಜೀಜ್ ಸೇಟ್ ನಂತರ ಅವರ ಪುತ್ರ ಹಾಲಿ ಶಾಸಕ ತನ್ವೀರ್ ಸೇಟ್ ನಿರಂತರವಾಗಿ ಐದು ಬಾರಿ ಆಯ್ಕೆಯಾಗುತ್ತಾ ಬಂದಿದ್ದಾರೆ.

ತನ್ವೀರ್ ಸೇಟ್ 2 ಬಾರಿ ಸಚಿವರಾಗಿಯೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ದುರದೃಷ್ಟವಶಾತ್ ದಾಳಿಗೆ ತುತ್ತಾಗಿ ಕಳೆದೊಂದು ವರ್ಷದಿಂದ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅದೂ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೂ ಆಗಾಗ ಕ್ಷೇತ್ರದ ಜನರ ಭೇಟಿ ಮಾಡಿ ಅಹವಾಲು ಸ್ವೀಕರಿಸಿ, ಅವರಿಗೆ ಪರಿಹಾರ ಕಲ್ಪಿಸುತ್ತಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಬೆಂಬಲಿಗರ ಮೂಲಕ ಬಡವರು, ಕಾರ್ಮಿಕರು, ನಿರಾಶ್ರಿತರಿಗೆ ನೆರವಾಗಿದ್ದಾರೆ. ಇವೆಲ್ಲದರ ನಡುವೆ ಜವಬ್ದಾರಿಯುತ ಸಚಿವರೂ ಆದ ಎಸ್.ಟಿ.ಸೋಮಶೇಖರ್, ನರಸಿಂಹರಾಜ ಕ್ಷೇತ್ರಕ್ಕೆ ನಾನೇ ಶಾಸಕ. ನನ್ನ ಬಳಿ ಬನ್ನಿ, ನಿಮ್ಮ ಕೆಲಸಗಳೆಲ್ಲವನ್ನು ನಾನು ಮಾಡಿಕೊಡುತ್ತೇನೆ ಎಂದು ಹೇಳಿರುವುದು ಪ್ರಜಾಪ್ರಭುತ್ವ, ಪ್ರಜಾ ಪ್ರಾತಿನಿಧ್ಯಕ್ಕೆ ಅಪಚಾರವೆಸಗಿದಂತೆ. ಕೂಡಲೇ ಸಚಿವರು, ಶಾಸಕ ತನ್ವೀರ್ ಸೇಟ್ ಹಾಗೂ ಕ್ಷೇತ್ರದ ಜನರ ಕ್ಷಮೆ ಯಾಚಿಸಬೇಕು ಎಂದು ಧ್ರುವರಾಜ್ ಆಗ್ರಹಿಸಿದ್ದಾರೆ.

Translate »