ಕೆಆರ್‍ಎಸ್ ಅಣೆಕಟ್ಟೆ ಬಿರುಕಿಗೆ 67 ಕೋಟಿ  ಕಾಮಗಾರಿ ಪುಷ್ಟಿ ನೀಡಿದ ಸುಮಲತಾ
ಮಂಡ್ಯ

ಕೆಆರ್‍ಎಸ್ ಅಣೆಕಟ್ಟೆ ಬಿರುಕಿಗೆ 67 ಕೋಟಿ ಕಾಮಗಾರಿ ಪುಷ್ಟಿ ನೀಡಿದ ಸುಮಲತಾ

July 15, 2021

ಕೃಷ್ಣರಾಜಸಾಗರ (ಶ್ರೀರಂಗಪಟ್ಟಣ ತಾ.), ಜು.14 (ವಿನಯ್ ಕಾರೇಕುರ)-ಮಂಡ್ಯ ಸಂಸದೆ ಸುಮಲತಾ ಅವರು ಬುಧವಾರ ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಅಧಿಕಾರಿ ಗಳ ಸಭೆ ನಡೆಸಿ, ಮಾಹಿತಿ ಪಡೆದ ನಂತರ ತಾವು `ಸೇವ್ ಕೆಆರ್‍ಎಸ್, ಸ್ಟಾಪ್ ಇಲ್ಲೀಗಲ್ ಮೈನಿಂಗ್’ ಹ್ಯಾಷ್ ಟ್ಯಾಗ್‍ನಡಿ ಅಕ್ರಮ ಗಣಿಗಾರಿಕೆ ನಿಲ್ಲುವವರೆಗೂ ಹೋರಾಟ ಮುಂದುವರೆಸುವುದಾಗಿ ಘೋಷಿಸಿದರು.
ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂಬ ತಮ್ಮ ಹೇಳಿಕೆ ಯನ್ನು ಪುನರುಚ್ಛರಿಸಿದ ಅವರು, ಅಣೆಕಟ್ಟೆಯಲ್ಲಿ ಸಣ್ಣ ಪ್ರಮಾಣದ ಬಿರುಕು ಇರುವುದರಿಂದಲೇ ಅಧಿ ಕಾರಿಗಳು 67 ಕೋಟಿ ರೂ. ಅನುದಾನದ ಒಂದು ಭಾಗವಾಗಿ ಗ್ರೌಟಿಂಗ್ ಕಾಮಗಾರಿ ನಡೆಸಿದ್ದಾರೆ ಎಂದರು. ಪರಿಶೀಲನೆ ವೇಳೆ ಅಣೆಕಟ್ಟೆ ಭದ್ರತೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ತಮಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ. ಗಣಿಗಳಲ್ಲಿ ಸ್ಫೋಟ ನಡೆಸುವುದರಿಂದ ಅಣೆಕಟ್ಟೆಗೆ ಧಕ್ಕೆಯಾಗುವುದಿಲ್ಲವೇ? ಎಂಬುದರ ಬಗ್ಗೆ ತಜ್ಞರ ಸರ್ಟಿಫಿಕೇಟ್ ಇಲ್ಲ. ಹೀಗಾಗಿ ಈಗಿರುವ ಸಣ್ಣ ಬಿರುಕುಗಳು ಮುಂದಿನ ದಿನಗಳಲ್ಲಿ ದೊಡ್ಡದಾಗಿ ಅನಾಹುತ ವಾಗುವ ಅಪಾಯವಿರುವುದರಿಂದ ತಾವು ಕೆಆರ್‍ಎಸ್ ಉಳಿವಿಗಾಗಿ ಹೋರಾಟ ಮುಂದುವರೆಸಲಿರುವುದಾಗಿ ಅವರು ಹೇಳಿದರು. ಗಣಿಗಾರಿಕೆಗೆ ನನ್ನ ವಿರೋಧವಿಲ್ಲ. ಆದರೆ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುವ ಗಣಿಗಾರಿಕೆಗೆ ನನ್ನ ವಿರೋಧ ವಿದೆ. ಗಣಿಗಾರಿಕೆಯಿಂದ ಅಣೆಕಟ್ಟೆಗೆ ಹಾನಿಯಾದರೆ ಅದನ್ನು ನೋಡಿಕೊಂಡು ನಾನಂತೂ ಸುಮ್ಮನೆ ಕೂರಲ್ಲ. 2019ರ ಸಂಸತ್ ಅಧಿವೇಶನದಲ್ಲಿ ಡ್ಯಾಂ ಸೇಫ್ಟಿ ಬಿಲ್ ಮಂಡನೆಯಾದಾಗ ತಾವು ಕೆಆರ್‍ಎಸ್ ಅಣೆಕಟ್ಟೆಯಲ್ಲಿನ ಬಿರುಕು ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸಿರುವುದಾಗಿ ಸುಮಲತಾ ಹೇಳಿದರು.

ಇದಕ್ಕೂ ಮುನ್ನ ಕೆಆರ್‍ಎಸ್ ಜಲಾಶಯದ ಗೇಟ್‍ಗಳನ್ನು ಪರಿಶೀಲಿಸಿದ ಸಂಸದೆ, ಗೇಟ್‍ಗಳಲ್ಲಿ ನಡೆಸಲಾಗಿದ್ದ ಕೆಲ ಕಾಮಗಾರಿಗಳ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿ ಗಳಿಂದ ವಿವರಣೆ ಪಡೆದರು. ನಂತರ ಅವರು ಕೆಆರ್‍ಎಸ್‍ನ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕೆಆರ್‍ಎಸ್ ಭದ್ರತೆ ಹಾಗೂ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆದರು. ಅಣೆಕಟ್ಟೆ ಬಿರುಕು ಬಿಟ್ಟಿಲ್ಲವೇ? ಇಲ್ಲಾ ಎಂದಾದರೆ 67 ಕೋಟಿ ರೂ. ಅನುದಾನದಲ್ಲಿ ಯಾವ ಕಾಮಗಾರಿ ನಡೆಸಿದ್ದೀರಿ ಎಂದು ಸುಮಲತಾ ಕೆಆರ್‍ಎಸ್‍ನ ಸೂಪರಿಂಟೆಂಡೆಂಟ್ ಇಂಜಿನಿಯರ್ ವಿಜಯಕುಮಾರ್ ಅವರನ್ನು ಪ್ರಶ್ನಿಸಿದರು. ಆಗ ಅವರು ನೀರಿನ ಗುಳ್ಳೆ ಹಾಗೂ ಸಣ್ಣ ಪ್ರಮಾಣದ ನೀರಿನ ಜಿನುಗುವಿಕೆ ತಡೆಯಲು ಗ್ರೌಟಿಂಗ್ ಮಾಡಿಸಿದ್ದೇವೆ ಎಂದರು. ಗಣಿಗಳಲ್ಲಿ ಸ್ಫೋಟ ನಡೆಸಿದರೆ ಅಣೆಕಟ್ಟೆಗೆ ಧಕ್ಕೆಯಾಗುವುದಿಲ್ಲ ಎಂಬುದರ ಬಗ್ಗೆ ನಿಮ್ಮಲ್ಲಿ ಯಾವುದಾದರೂ ದೃಢೀಕರಣ ಸರ್ಟಿಫಿಕೇಟ್ ಇದೆಯೇ? ಎಂದು ಸಂಸದೆ ಪ್ರಶ್ನಿಸಿದಾಗ, ನಾವು ಅಣೆಕಟ್ಟೆ ನಿರ್ವಹಣೆ ಮಾಡುತ್ತೇವೆ ಅಷ್ಟೇ. ಸ್ಫೋಟದಿಂದ ಅಣೆಕಟ್ಟೆಗೆ ಧಕ್ಕೆಯಾಗುತ್ತದೆಯೇ? ಇಲ್ಲವೇ? ಎಂಬುದರ ಬಗ್ಗೆ ತಜ್ಞರು ಹೇಳಬೇಕಾಗುತ್ತದೆ ಎಂದು ವಿಜಯಕುಮಾರ್ ಉತ್ತರಿಸಿದಾಗ ಕೆರಳಿದ ಸುಮಲತಾ, ಯಾವುದೇ ದೃಢೀಕರಣ ಸರ್ಟಿಫಿಕೇಟ್ ಇಲ್ಲದೆಯೇ ಗಣಿಗಾರಿಕೆಯ ಸ್ಫೋಟದಿಂದ ಅಣೆಕಟ್ಟೆಗೆ ಧಕ್ಕೆ ಇಲ್ಲ ಎಂದು ನೀವು ಹ್ಯಾಗೆ ಮಾಧ್ಯಮ ಗಳಿಗೆ ಹೇಳಿಕೆ ಕೊಟ್ಟಿರಿ? ಎಂದು ಪ್ರಶ್ನಿಸಿದರು. ಈ ವೇಳೆ ವಿಜಯಕುಮಾರ್ ತಬ್ಬಿಬ್ಬಾಗಿ ಕುಳಿತರು. ನಂತರ ಸುಮಲತಾ, ಕೆಆರ್‍ಎಸ್‍ನಲ್ಲಿ 67 ಕೋಟಿ ರೂ. ಅನುದಾನದಲ್ಲಿ ನಡೆದಿರುವ ಕಾಮಗಾರಿ, ಗುತ್ತಿಗೆದಾರ ಯಾರು?, ಬಿಲ್ ಪಾವತಿಯಾಗಿರುವ ಬಗ್ಗೆ ಸಂಪೂರ್ಣ ವಿವರವನ್ನು ತಮಗೆ ನೀಡಬೇಕೆಂದು ತಾಕೀತು ಮಾಡಿದರಲ್ಲದೆ, ಟೆಕ್ನಿಕಲ್ ರಿಪೋರ್ಟ್ ಇಲ್ಲದೆಯೇ ಅಣೆಕಟ್ಟೆ ಸುರಕ್ಷಿತವಾಗಿದೆ ಎಂದು ಹೇಳುವುದರಲ್ಲಿ ಅರ್ಥವಿದೆಯೇ? ಎಂದು ಪ್ರಶ್ನಿಸಿದರು.

ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್‍ಪಿ ಸಂದೇಶ್ ಕುಮಾರ್ ಅವರನ್ನು ಪ್ರಶ್ನಿಸಿದ ಸುಮಲತಾ, ಆ ಸ್ಫೋಟಕಗಳು ಎಲ್ಲಿಗೆ ಹೋಗುತ್ತಿದ್ದವು ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದೀರಾ? ಎಂದರು. ಇದಕ್ಕೆ ಉತ್ತರಿಸಿದ ಡಿವೈಎಸ್‍ಪಿ, ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಸ್ಫೋಟಕಗಳನ್ನು ಕಳವು ಮಾಡಿಕೊಂಡು ಬರಲಾಗಿತ್ತು. ಅದನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು. ಅದು ಸರಿ, ಸ್ಫೋಟಕಗಳು ಹೋಗುತ್ತಿದ್ದುದು ಎಲ್ಲಿಗೆ? ಎಂದು ಕೇಳಿದಾಗ `ಒಂದು ಸಣ್ಣ ಕ್ವಾರಿಗೆ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಹೇಳಿದರು’ ಎಂದು ಸಂದೇಶ್ ಕುಮಾರ್ ಉತ್ತರಿಸಿದರು. ಹಾಗಾದರೆ ಕ್ವಾರಿ ಯಾವುದು ಎಂದು ಪರಿಶೀಲಿಸಲಿಲ್ಲವೇ? ಎಂದಾಗ ಪರಿಶೀಲನೆ ನಡೆಸಿದ್ದೇವೆ, ಸುರೇಶ್ ಎಂಬುವರಿಗೆ ಸೇರಿದ ಕ್ವಾರಿಗೆ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ಹೇಳಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ ಆ ಕ್ವಾರಿಯಲ್ಲಿ ಕೆಲಸವೇ ನಡೆಯುತ್ತಿರಲಿಲ್ಲ ಎಂಬುದು ಗೊತ್ತಾಯಿತು. ಈ ಎಲ್ಲಾ ವಿವರಗಳನ್ನು ನಮ್ಮ ವರದಿಯಲ್ಲಿ ಉಲ್ಲೇಖಿಸಿ ದ್ದೇವೆ ಎಂದು ಸಂದೇಶ್ ಕುಮಾರ್ ವಿವರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಮಗೆ ಒದಗಿಸಬೇಕು ಎಂದು ಸುಮಲತಾ ತಾಕೀತು ಮಾಡಿದರು.

ಕೆಲ ವಾರಗಳ ಹಿಂದೆ ಕೆಆರ್‍ಎಸ್ ಹಿನ್ನೀರಿನಲ್ಲಿ ಯುವಕ-ಯುವತಿಯರು ಮೋಜು-ಮಸ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣೆಕಟ್ಟೆ ಭದ್ರತೆ ಉಸ್ತುವಾರಿ ಹೊತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‍ಐಎಸ್‍ಎಫ್) ಇನ್ಸ್‍ಪೆಕ್ಟರ್ ಸಂತೋಷ್ ಅವರನ್ನು ಪ್ರಶ್ನಿಸಿದ ಸುಮಲತಾ, ಡ್ಯಾಂನ ಎಷ್ಟು ವಿಸ್ತೀರ್ಣ ನಿಷೇಧಿತ ಪ್ರದೇಶ ಎಂಬುದರ ಬಗ್ಗೆ ನಿಮಗೆ ಗೊತ್ತಿದೆಯೇ? ಹಿನ್ನೀರಿಗೆ ಕೆಲವರು ರಾಜಾರೋಷವಾಗಿ ಪ್ರವೇಶಿಸಿ ಮೋಜು-ಮಸ್ತಿ ಮಾಡುತ್ತಾರೆ, ಅದು ನಿಮಗೆ ಗೊತ್ತಾಗುವುದೇ ಇಲ್ಲ. ಎಷ್ಟೋ ಹೊತ್ತಾದ ಮೇಲೆ ನೀವು ಅಲ್ಲಿಗೆ ಹೋಗುತ್ತೀರಿ ಅಂದರೆ ಏನಾದರೂ ದುಷ್ಕøತ್ಯ ನಡೆಸುವವರು ಹೀಗೆ ಡ್ಯಾಂಗೆ ಬರಬಹುದಲ್ಲವೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಂತೋಷ್, ಕೆಲ ಯುವಕ-ಯುವತಿಯರು ಹಿಂದಿನ ಡಿವೈಎಸ್‍ಪಿ ಅರುಣ್ ನಾಗೇಗೌಡರ ಫಾರಂ ಹೌಸ್‍ನಲ್ಲಿ ರಾತ್ರಿ ಪೂರ್ತಿ ಪಾರ್ಟಿ ಮಾಡಿ, ಬೆಳಗ್ಗೆ 6.30ರ ಸುಮಾರಿನಲ್ಲಿ ಕೆಆರ್‍ಎಸ್ ಹಿನ್ನೀರಿನಲ್ಲಿ ಮೋಜು-ಮಸ್ತಿ ಮಾಡುವ ವೇಳೆ ಸಿಸಿ ಕ್ಯಾಮರಾದಲ್ಲಿ ನೋಡಿ ನಾವು ಅಲ್ಲಿಗೆ ತೆರಳಿ ಅವರನ್ನು ಕಳುಹಿಸಲು ಪ್ರಯತ್ನಿಸಿದೆವು. ಆದರೆ ಅವರು ಕುಡಿದ ಅಮಲಿನಲ್ಲಿ ಪ್ರಭಾವಿಗಳ ಬೆಂಬಲವಿದೆ ಎಂದು ನಮ್ಮ ಮೇಲೆಯೇ ಹಲ್ಲೆಗೆ ಮುಂದಾದಾಗ ಅವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡೆವು ಎಂದು ಉತ್ತರಿಸಿದರು. ಆ ಪ್ರಕರಣದ ಸಂಪೂರ್ಣ ವಿವರಗಳನ್ನು ತಮಗೆ ನೀಡಬೇಕೆಂದು ತಾಕೀತು ಮಾಡಿದ ಸುಮಲತಾ, ಡಿವೈಎಸ್‍ಪಿಗೆ ನಿಷೇಧಿತ ಪ್ರದೇಶದಲ್ಲಿ ಫಾರಂ ಹೌಸ್ ನಿರ್ಮಿಸಲು ಲೈಸೆನ್ಸ್ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರಲ್ಲದೆ, ತಪ್ಪು ಮಾಡಿದವರು ಎಷ್ಟೇ ಪ್ರಭಾವಿಗಳಾದರೂ, ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದರೆ, ಇಂತಹ ಅನಾಹುತಗಳು ನಡೆಯುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಸಂಸದೆ ಸುಮಲತಾ, ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡಿದಾಗ ಕೆಎಸ್‍ಐಎಸ್‍ಎಫ್ ಸಿಬ್ಬಂದಿ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಏರ್ಪಡಿಸಲಾಗಿತ್ತು. ಅವರು ಡ್ಯಾಂ ಒಳಗೆ ಪ್ರವೇಶಿಸಿದ ವೇಳೆ ಅವರೊಂದಿಗೆ ತೆರಳಿದ ಪ್ರತಿಯೊಬ್ಬರನ್ನೂ ಪೊಲೀಸ್ ಸಿಬ್ಬಂದಿ ಪರಿಶೀಲಿಸಿಯೇ ಒಳ ಬಿಟ್ಟರು. ಮಾಧ್ಯಮ ವರದಿಗಾರರು, ವೀಡಿಯೋಗ್ರಾಫರ್‍ಗಳು, ಫೋಟೋಗ್ರಾಫರ್‍ಗಳು ಸೇರಿದಂತೆ ಸಂಸದರ ಬೆಂಬಲಿಗರನ್ನು ಒಳ ಬಿಡಲು ಪೊಲೀಸ್ ಸಿಬ್ಬಂದಿ ನಿರಾಕರಿಸಿದರು. ಡ್ಯಾಂನ ಭದ್ರತೆ ದೃಷ್ಟಿಯಿಂದ ವೀಡಿಯೋ ಹಾಗೂ ಫೋಟೋ ತೆಗೆಯಲು ಅವಕಾಶವಿಲ್ಲ ಎಂದು ಹೇಳಲಾಗಿತ್ತಾದರೂ, ಸುಮಲತಾ ಅಣೆಕಟ್ಟೆ ಗೇಟ್‍ಗಳನ್ನು ಪರಿಶೀಲನೆ ಮಾಡಿದ ದೃಶ್ಯ ಅವರ ಅಧಿಕೃತ ಫೇಸ್‍ಬುಕ್‍ನಲ್ಲಿ ಲೈವ್ ಆಗಿ ಪ್ರಸಾರವಾಯಿತು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ `ಶಾಸಕ ರವೀಂದ್ರ ಶ್ರೀಕಂಠಯ್ಯ ಡ್ಯಾಂ ಪರಿಶೀಲಿಸಿದಾಗಲೂ ಲೈವ್ ಬಂದಿತ್ತಲ್ಲಾ?’ ಎಂದು ಸುಮಲತಾ ಮಾಧ್ಯಮದವರನ್ನೇ ಪ್ರಶ್ನಿಸಿದರು. ಒಂದೆಡೆ ಸುಮಲತಾ ಅವರು ಕೆಆರ್‍ಎಸ್ ಅಣೆಕಟ್ಟೆಯ ಗೇಟ್‍ಗಳನ್ನು ಪರಿಶೀಲಿಸುತ್ತಿದ್ದರೆ, ಮತ್ತೊಂದೆಡೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕೂಡ ಆಗಮಿಸಿ ಕಾವೇರಿ ಮಾತೆ ಪ್ರತಿಮೆ ಬಳಿ ಅಣೆಕಟ್ಟೆಯನ್ನು ವೀಕ್ಷಿಸಿ ಹಿಂದಿರುಗಿ ದರು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ತಾವು ಸುಮಲತಾ ಅವರ ಜೊತೆ ಅಣೆಕಟ್ಟೆ ವೀಕ್ಷಣೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಕೆಆರ್‍ಎಸ್ ಬಗ್ಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಲು ನಿರಾಕರಿಸಿದರು.

Translate »