ಕೊಡಗಿನಲ್ಲಿ ಮಳೆ ಆರ್ಭಟ: ಕೆಲವೆಡೆ  ಭೂ ಕುಸಿತ, ಸಂಚಾರಕ್ಕೆ ಅಡ್ಡಿ
ಕೊಡಗು

ಕೊಡಗಿನಲ್ಲಿ ಮಳೆ ಆರ್ಭಟ: ಕೆಲವೆಡೆ ಭೂ ಕುಸಿತ, ಸಂಚಾರಕ್ಕೆ ಅಡ್ಡಿ

July 15, 2021

ಮಡಿಕೇರಿ, ಜು.14- ಕೊಡಗು ಜಿಲ್ಲೆ ಯಾದ್ಯಂತ ವರುಣ ಆರ್ಭಟಿಸುತ್ತಿದ್ದು, ಭಾರೀ ಗಾಳಿ ಸಹಿತ ಮಳೆಯಿಂದಾಗಿ ಕೆಲವೆಡೆ ರಸ್ತೆಗೆ ಮರಗಳು ಉರುಳಿ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತ ವಾಗಿದೆ. ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್ ಗಳಿಗೂ ಭಾರೀ ಹಾನಿಯಾಗಿದ್ದು, ಮಳೆ ಗಾಳಿಯ ತೀವ್ರತೆಯ ನಡುವೆಯೇ ದುರಸ್ತಿ ಕಾರ್ಯ ನಡೆಯುತ್ತಿದೆ. ಕೆಲವು ಮನೆಗಳ ಮೇಲೂ ಮರಗಳು ಬಿದ್ದಿದ್ದು, ಹಾನಿ ಯಾಗಿದೆ. ಈ ಮಧ್ಯೆ ಬುಧವಾರ ಸಂಜೆ ಮಡಿ ಕೇರಿ ತಾಲೂಕು ಅವ್ವಂ ದೂರು ಗ್ರಾಮದ ಬಳಿ ವಿಕಲಚೇತನ ಬೊಮ್ಮೇಗೌಡನ ಬಾಬಿ (70), ಕಿರು ಹೊಳೆ ದಾಟುತ್ತಿದ್ದಾಗ ಕೊಚ್ಚಿ ಹೋಗಿದ್ದಾರೆ.

ನಗರದ ಮಂಗಳೂರು ರಸ್ತೆಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಈ ಸ್ಥಳದಲ್ಲಿ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಿಟಾಚಿ ಯಂತ್ರಗಳು ಸಂಚ ರಿಸಿದ ಪರಿಣಾಮ ಮಣ್ಣು ಸಡಿಲಗೊಂಡು ಈ ಭೂ ಕುಸಿತವಾಗಿದೆ. ಹೆದ್ದಾರಿ ಪಕ್ಕದಲ್ಲಿ ಹರಿಯುತ್ತಿರುವ ಚರಂಡಿ ನೀರು ತಡೆಗೋಡೆ ನಿರ್ಮಾಣ ಸ್ಥಳಕ್ಕೆ ಹರಿಯುತ್ತಿದ್ದು, ನಗರಸಭೆ ಸಿಬ್ಬಂದಿ ಚರಂಡಿ ನೀರಿನ ಪಥ ಬದಲಿಸುವ ಮೂಲಕ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ.

ಭೂ ಕುಸಿತ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮಹೇಶ್, ಇನ್ಸ್‍ಪೆಕ್ಟರ್ ವೆಂಕಟೇಶ್, ಸಿಬ್ಬಂದಿ ಪರಿಶೀಲನೆ ನಡೆಸಿದರು. ನಗರದ ಆಕಾಶ ವಾಣಿ ಕೇಂದ್ರದ ಬಳಿಯೂ ಭೂ ಕುಸಿತ ಸಂಭವಿಸಿದ್ದು, ಟವರ್‍ಗೆ ಹಾನಿಯಾಗುವ ಸಾಧ್ಯತೆಗಳಿವೆ. ಆಕಾಶವಾಣಿ ಕೇಂದ್ರ ಸಿಬ್ಬಂದಿ ಟವರ್ ಬಳಿ ನೀರು ಹರಿಯದಂತೆ ಮರಳು ಮೂಟೆಗಳನ್ನು ಇಟ್ಟು ತಡೆ ಒಡ್ಡಿದ್ದಾರೆ. ಘಟನೆ ಕುರಿತು ಚೆನ್ನೈ ಆಕಾಶವಾಣಿ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗಿದೆ. ಮುಖ್ಯ ಕಚೇರಿಯ ಸೂಚನೆ ಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರವಾಹ ಆತಂಕ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಕಂಡು ಬಂದಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತ್ರಿವೇಣಿ ಸಂಗಮ ಮುಳುಗಡೆ ಹಂತ ತಲುಪಿದೆ. ಮಡಿಕೇರಿ-ತಲಕಾವೇರಿ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಪರ್ಕ ಎಂದಿನಂತಿದ್ದು ಮಳೆ ಇದೇ ರೀತಿ ಬಿರುಸು ತೋರಿದಲ್ಲಿ ಸಂಪರ್ಕ ವ್ಯವಸ್ಥೆ ಬಂದ್ ಆಗಲಿದೆ. ಕಾವೇರಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಕೊಟ್ಟಮುಡಿ, ಕೊಂಡಂಗೇರಿ, ಬಲಮುರಿ, ಕರಡಿಗೋಡು, ನೆಲ್ಯಹುದಿಕೇರಿ ಕದನೂರು ಮತ್ತಿತ್ತರ ಕಡೆಗಳಲ್ಲಿ ಪ್ರವಾಹದ ಆತಂಕ ಜನರನ್ನು ಕಾಡುತ್ತಿದೆ. ನದಿ ತಟ ನಿವಾಸಿ ಗಳಿಗೆ ಸ್ಥಳೀಯ ಪಂಚಾಯಿತಿಗಳು ಈಗಾ ಗಲೇ ನೋಟೀಸ್ ಜಾರಿ ಮಾಡಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಜಿಲ್ಲಾಡಳಿತ ಭವನಕ್ಕೆ ಅಪಾಯ: ಭಾರೀ ಮಳೆಯಿಂದ ಜಿಲ್ಲಾಡಳಿತ ಭವನಕ್ಕೂ ಅಪಾಯ ಎದುರಾಗುವ ಸಾಧ್ಯತೆ ಕಂಡು ಬಂದಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಜಿಲ್ಲಾಡಳಿತ ಭವನಕ್ಕೆ 8 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿ ಸಲಾಗುತ್ತಿದೆಯಾದರೂ ಅದರ ಪಕ್ಕದಲ್ಲೇ ಭಾರೀ ಮಳೆ ನೀರು ಹರಿದು ಬರುತ್ತಿದೆ. ಹೀಗಾಗಿ ಭವನ ಸಹಿತ ತಡೆಗೋಡೆಗೂ ಹಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಕಾಮಗಾರಿ ವಿಳಂಬ ಮತ್ತು ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದರಿಂದ ಇದೀಗ ಜಿಲ್ಲಾಡಳಿತ ಭವನ ಅಪಾಯ ಎದುರಿಸುವಂತಾಗಿದೆ.

Translate »