ಹೊರ ರಾಜ್ಯದಿಂದ ಬಂದ 719 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್
ಮೈಸೂರು

ಹೊರ ರಾಜ್ಯದಿಂದ ಬಂದ 719 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್

May 23, 2020

ಮೈಸೂರು,ಮೇ 22 (ಆರ್‍ಕೆ)-ಮುಂಬೈನ 104 ಸೇರಿ ಹೊರ ರಾಜ್ಯಗಳಿಂದ ಬಂದಿರುವ ಎಲ್ಲಾ 719 ಮಂದಿಯನ್ನು ಮೈಸೂರಲ್ಲಿ 14 ದಿನಗಳ ಕ್ವಾರಂಟೈನ್‍ನಲ್ಲಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಸೂಚನೆಯಂತೆ ಅರ್ಜಿ ಸಲ್ಲಿಸಿದ್ದ ಮೈಸೂರಿಗೆ ಬರಲು ಅನುಮತಿ ನೀಡಲಾಗಿದೆ. ಹಾಗೆ ಅನುಮತಿ ಪಡೆದು ಬಂದ ಎಲ್ಲಾ 719 ಮಂದಿ ಯನ್ನೂ ಕ್ವಾರಂಟೈನ್ ಮಾಡಿ, ಅವರ ಗಂಟಲು ದ್ರವ ಸಂಗ್ರಹಿಸಿ, ಪರೀಕ್ಷೆಗೊಳ ಪಡಿಸಲಾಗಿದೆ. ಆ ಪೈಕಿ ಮುಂಬೈನಿಂದ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿರುವುದರಿಂದ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಹೊರಗಿನಿಂದ ಬಂದವರನ್ನು ನೇರವಾಗಿ 14 ದಿನಗಳವರೆಗೆ ಕ್ವಾರಂಟೈನ್‍ನಲ್ಲಿರಿಸಿರುವು ದರಿಂದ ಕೊರೊನಾ ಸೋಂಕು ಇತರರಿಗೆ ಹರಡುವ ಪ್ರಶ್ನೆಯೇ ಇಲ್ಲ ಎಂದ ಸಚಿವರು, ಮುಂಬೈ ಮತ್ತು ತಮಿಳುನಾಡಿನ ಕೊಯಮತ್ತೂರಿನಿಂದ ಬಂದವರಿಂದ ಸ್ಥಳೀಯರಿಗೆ ಹರಡುತ್ತಿದೆ ಎಂಬ ಆತಂಕ ಬೇಡ. ಇಲ್ಲಿ ಕೊರೊನಾ ಸೋಂಕು ಹೆಚ್ಚಾಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ಬರಲುಬಯಸುವವರಿಗೆ ಅನುಮತಿ ನೀಡಿದೆಯೇ ಹೊರತು, ಕೆ.ಆರ್. ಪೇಟೆ ನಾರಾ ಯಣಗೌಡ ಒಬ್ಬರೇ ಮುಂಬೈನಿಂದ ಜನರನ್ನು ಕರೆಸಿಕೊಂಡಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Translate »