ಸರ್ಕಾರಿ ಸಂಸ್ಥೆಗಳ ಮೂಲಕವೇ ಮರಳು ಗಣಿಗಾರಿಕೆ, ಮಾರಾಟ ಆನ್‍ಲೈನ್ ಮೂಲಕವೇ ಬುಕ್ಕಿಂಗ್
ಮೈಸೂರು

ಸರ್ಕಾರಿ ಸಂಸ್ಥೆಗಳ ಮೂಲಕವೇ ಮರಳು ಗಣಿಗಾರಿಕೆ, ಮಾರಾಟ ಆನ್‍ಲೈನ್ ಮೂಲಕವೇ ಬುಕ್ಕಿಂಗ್

May 23, 2020

ಬೆಂಗಳೂರು, ಮೇ 22- ರಾಜ್ಯದಲ್ಲಿ `ಹೊಸ ಮರಳು ನೀತಿ-2020’ರ ಅನುಷ್ಠಾನಕ್ಕೆ ಆದೇಶಿಸಿರುವ ವಾಣಿಜ್ಯ ಮತ್ತು ಕೈಗಾ ರಿಕೆ ಇಲಾಖೆ, ಈ ಸಂಬಂಧ ರಾಜ್ಯಪತ್ರ ದಲ್ಲಿ ಮಾರ್ಗಸೂಚಿ ಪ್ರಕಟಿಸಿದೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ, ಪಾರದರ್ಶಕವಾಗಿ ಮರಳು ದೊರೆಯು ವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶ ದಿಂದ ಉಪಖನಿಜ ರಿಯಾಯಿತಿ ನಿಯಮ-2017ಕ್ಕೆ ತಿದ್ದುಪಡಿ ತಂದು, ಹೊಸ ಮರಳು ನೀತಿ ಜಾರಿಗೊಳಿಸುವುದಕ್ಕೆ ಕಳೆದ ಏ.30ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದಕ್ಕಿತ್ತು. ಇದಕ್ಕೆ ರಾಜ್ಯಪಾಲರ ಅನುಮತಿಯೂ ಸಿಕ್ಕಿದ ಹಿನ್ನೆಲೆಯಲ್ಲಿ ಅವರ ಆದೇಶಾನುಸಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪೀಠಾಧಿಕಾರಿ(ಗಣಿ) ರಾಜ್ಯಪತ್ರದಲ್ಲಿ `ಹೊಸ ಮರಳು ನೀತಿ-2020’ರ ಮಾರ್ಗ ಸೂಚಿ ಪ್ರಕಟಿಸಿದ್ದು, ಇನ್ನು ಮುಂದೆ ಮರಳು ಗಣಿಗಾರಿಕೆ ಹಾಗೂ ಮರಳು ಮಾರಾಟ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೂಲಕ ವೈಜ್ಞಾನಿಕವಾಗಿ ನಡೆಯಲಿದೆ. ಹಳ್ಳ, ತೊರೆ ಹಾಗೂ ಕೆರೆಗಳಲ್ಲಿ ಲಭ್ಯವಿರುವ ಮರಳು ನಿಕ್ಷೇಪವನ್ನು ಕಂದಾಯ ಇನ್ನಿತರ ಇಲಾಖೆಗಳಿ ಜಂಟಿಯಾಗಿ ಗುರುತಿಸಿ, ತಾಲೂಕು ಮರಳು ಸಮಿತಿ ಮೂಲಕ ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕು. ಜಿಲ್ಲಾ ಸಮಿತಿ ಪರಿಶೀಲನೆ ಬಳಿಕ ಮರಳು ತೆಗೆಯಲು ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗೆ ಅನುಮತಿ ನೀಡಬೇಕು. ಬಳಿಕ ಜಿಲ್ಲಾ ಸಮಿತಿ ನಿಗದಿಪಡಿಸಿದ ದರದಲ್ಲೇ ಮರಳನ್ನು ಮಾರಾಟ ಮಾಡಬೇಕು. ಒಂದು ವರ್ಷ ಮೀರದಂತೆ ಮರಳು ತೆಗೆಯಲು ಪರವಾನಗಿ ನೀಡಬೇಕು. ನದಿ, ಅಣೆಕಟ್ಟೆ, ಹಿನ್ನೀರು ಪಾತ್ರದಲ್ಲಿ ಸಿಗುವ ಮರಳು ತೆಗೆಯಲು 5 ವರ್ಷಗಳಿಗೆ ಪರವಾನಗಿ ನೀಡಬಹುದಾಗಿದೆ.

ಹಳ್ಳ, ಕೆರೆಯಲ್ಲಿ ತೆಗೆದ ಮರಳನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಎತ್ತಿನ ಗಾಡಿ, ಟ್ರಿಲ್ಲರ್, ಟ್ರ್ಯಾಕ್ಟರ್‍ಗಳಲ್ಲಿ, ನದಿ, ಅಣೆಕಟ್ಟೆಯಲ್ಲಿ ತೆಗೆದ ಮರಳನ್ನು ಜಿಪಿಎಸ್ ಅಳವಡಿಸಿರುವ ವಾಹನದಲ್ಲೇ ಸಾಗಿಸಲು ಅವಕಾಶವಿದೆ. ಗ್ರಾಹಕರು ಹಾಗೂ ವಾಹನ ವಿವರ ನೋಂದಣಿ ಮಾಡಿಕೊಂಡು ಆನ್‍ಲೈನ್ ಬುಕ್ಕಿಂಗ್ ಮೂಲಕವೇ ಮರಳು ತಲುಪಿಸಬೇಕು. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಲೈಸನ್ಸ್ ನೀಡುವ ಪ್ರಕ್ರಿಯೆ ಮುಂದುವರೆಯಲಿದೆ. ಚಾಲ್ತಿಯಲ್ಲಿರುವ ಗುತ್ತಿಗೆ ಅವಧಿ ಮುಗಿಯುವವರೆಗೂ ಮರಳು ವಿಲೇವಾರಿ ಮಾಡಲು ಗುತ್ತಿಗೆದಾರನಿಗೆ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಮರಳು ಸಾಗಾಣಿಕೆಗೆ ನಿಯಂತ್ರಣ ಶುಲ್ಕ, ಅನಧಿಕೃತ ಮರಳು ಗಣಿಗಾರಿಕೆ, ದಾಸ್ತಾನು ಹಾಗೂ ಸಾಗಾಣಿಕೆ ವಿರುದ್ಧ ಶಿಸ್ತು ಕ್ರಮ ಹೀಗೆ ಹಲವು ಮಹತ್ವದ ಅಂಶಗಳನ್ನು ಹೊಸ ಮರಳು ನೀತಿ ಒಳಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಉನ್ನತಾಧಿಕಾರಸ್ಥ ಸಮಿತಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮರಳು ಸಮಿತಿ, ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ತಾಲೂಕು ಮರಳು ಸಮಿತಿ ಕಾರ್ಯನಿರ್ವಹಿಸಲಿದ್ದು, ಮರಳು ನಿಕ್ಷೇಪ ಗುರುತಿಸುವಿಕೆ, ಗಣಿಗಾರಿಕೆ, ಮಾರಾಟ, ಸಾಗಣಿ, ಸರ್ಕಾರಿ ಕಾಮಗಾರಿಗಳಿಗೆ ಮರಳು ಒದಗಿಸುವುದು, ಅಕ್ರಮಗಳ ತಡೆ ಸೇರಿದಂತೆ ಎಲ್ಲದರ ಮೇಲೂ ನಿಗಾ ವಹಿಸಲಿವೆ.

Translate »