ಕೋವಿಡ್ ಸೋಂಕು ಲಕ್ಷಣದ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸುವವರ ಮಾಹಿತಿ ಸಂಗ್ರಹಿಸಲು ಕಟ್ಟುನಿಟ್ಟಿನ ಸೂಚನೆ
ಮೈಸೂರು

ಕೋವಿಡ್ ಸೋಂಕು ಲಕ್ಷಣದ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸುವವರ ಮಾಹಿತಿ ಸಂಗ್ರಹಿಸಲು ಕಟ್ಟುನಿಟ್ಟಿನ ಸೂಚನೆ

May 23, 2020

ಮೈಸೂರು, ಮೇ 22- ಶೀತ, ಕೆಮ್ಮು, ಜ್ವರ ಹಾಗೂ ಕೋವಿಡ್-19 ಲಕ್ಷಣದ ಆರೋಗ್ಯ ಸಮಸ್ಯೆಗಳಿಗೆ ಔಷಧ ಖರೀದಿಸುವವರ ಮೊಬೈಲ್ ಸಂಖ್ಯೆ, ವಿಳಾಸ ಸಂಗ್ರಹಿಸಿ, ರೋಗ ಲಕ್ಷಣದ ವಿವರ ಪಡೆದು ಪ್ರತಿಸಂಜೆ ನಿಗದಿತ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿ ಎಂದು ಔಷಧ ಮಳಿಗೆಗಳು ಮತ್ತು ಫಾರ್ಮಾಸಿಸ್ಟ್‍ಗಳಿಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ತಾಕೀತು ಮಾಡಿದೆ.

ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಈ ಎಲ್ಲಾ ಮಾಹಿತಿಯನ್ನು ಔಷಧ ಮಾರಾಟ ಗಾರರು, ಫಾರ್ಮಾಸಿಸ್ಟ್‍ಗಳು ಪ್ರತಿನಿತ್ಯ ಅಪ್‍ಲೋಡ್ ಮಾಡುವುದು ಕಡ್ಡಾಯ. ಇದಕ್ಕೆ ತಪ್ಪಿದರೆ ಔಷಧ ಮಳಿಗೆಯ ಲೈಸನ್ಸ್ ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ.

ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ವೀಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾ ಔಷಧ ನಿಯಂತ್ರಕರ ಜತೆ ಸಭೆ ನಡೆಸಿದ್ದು, `ಶೀತ, ಕೆಮ್ಮು, ಜ್ವರಕ್ಕೆ ಔಷಧ ಖರೀದಿಸುವವರ ಮೊಬೈಲ್ ನಂಬರ್, ವಿಳಾಸವನ್ನು ದಾಖಲಿಸಿಕೊಂಡು ಪ್ರತಿದಿನ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂಬ ಸೂಚನೆಯನ್ನು ಔಷಧ ಮಳಿಗೆಯ ವರಿಗೆ ಮನದಟ್ಟು ಮಾಡಿಕೊಡಿ’ ಎಂಬ ಸೂಚನೆ ನೀಡಿದ್ದಾರೆ.

ಇನ್‍ಫ್ಲುಯೆಂಜಾ ರೀತಿಯ ಕಾಯಿಲೆ ಇರುವವರು ಹಾಗೂ `ಸಿವಿಯರ್ಲಿ ಅಕ್ಯೂಟ್ ರೆಸ್ಪಿರೇಟರಿ ಇಲ್‍ನೆಸ್’ (ಎಸ್‍ಎಆರ್‍ಐ-ತೀವ್ರ ತೆರನಾದ ಉಸಿರಾಟದ ಸಮಸ್ಯೆ) ಇರುವವರು, ಕೋವಿಡ್-19 ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಆರಂಭದ ಹಂತದಲ್ಲೇ ಆರೋಗ್ಯ ತಪಾಸಣೆಗೆ ಒಳ ಪಡಿಸಬೇಕು. ಆ ಮೂಲಕ ಸಮುದಾಯ ದಲ್ಲಿ ಕೋವಿಡ್ ಹರಡುವುದನ್ನು, ಜೀವ ಹಾನಿಯಾಗುವುದನ್ನು ತಡೆಯಬೇಕು ಎಂಬುದನ್ನು `ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ರೆಗ್ಯುಲೇಷನ್ಸ್ 2020’ ನಿಯಮ ಗಳು ತಿಳಿಸುತ್ತವೆ.

ಸೆಟಿರಿಝೈನ್, ಕ್ಲೋರಾಫೆನಿರಮೈನ್ ಮೊದಲಾದವು ಹಾಗೂ ಎಲ್ಲಾ ಬಗೆಯ ಕೆಮ್ಮಿನ ಸಿರಪ್‍ಗಳು. ಇವು ಪ್ರತ್ಯೇಕವಾಗಿ ತೆಗೆದುಕೊಳ್ಳುವ, ಇಲ್ಲವೇ ಹಲವನ್ನು ಒಟ್ಟಿಗೆ ಸೇರಿಸಿಕೊಂಡು ಸೇವಿಸುವಂತಹ ಔಷಧಗಳಾಗಿರಬಹುದು. ಈ ಔಷಧಗಳು ವ್ಯಾಪಕವಾಗಿ ಜ್ವರದ ಗುಣಲಕ್ಷಣದ (ಆಂಟಿಪೈರೆಟಿಕ್ಸ್ ಮತ್ತು ಆಂಟಿಇನ್ ಫ್ಲಮೇಟರಿ), ಶೀತ (ಆಂಟಿ ಅಲರ್ಜಿಕ್) ಮತ್ತು ಕೆಮ್ಮು (ಆಂಟಿ ಟಸ್ಸೀವ್) ಚಿಕಿತ್ಸೆಗೆ ಬಳಕೆಯಾಗುತ್ತವೆ ಎಂದು ವರ್ಗೀ ಕರಿಸಲಾಗಿದೆ. ಈ ಔಷಧಗಳು ಬಹುತೇಕ ಪ್ಯಾರಾಸಿಟಮೋಲ್ (ಎಲ್ಲಾ ಬಗೆಯ ಡೋಸೇಜ್ ಮತ್ತು ಸ್ಟ್ರೆಂಥ್).

ಆಸ್ಪತ್ರೆಗಳಲ್ಲಿನ ಫಾರ್ಮಾಸಿಗಳು, ಅಲ್ಲಿನ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್‍ಗಳು ಇಲ್ಲಿ ಉಲ್ಲೇಖಿಸಿದ ಔಷಧಗಳನ್ನು ರೋಗಿಗಳಿಗೆ ನೀಡಿದ್ದರೆ ಆ ರೋಗಿಗಳ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿಟ್ಟುಕೊಂಡು, ಮೆಡಿಕಲ್ ಸ್ಟೋರ್‍ಗಳಿಗಾಗಿಯೇ ಅಭಿವೃದ್ಧಿಪಡಿಸಿದ ಮೊಬೈಲ್ ಆಪ್‍ನಲ್ಲಿ ಪ್ರತಿದಿನವೂ ಅಪ್‍ಲೋಡ್ ಮಾಡಬೇಕಿದೆ.

ಬಹಳಷ್ಟು ಮೆಡಿಕಲ್ ಸ್ಟೋರ್‍ನವರು ಈ ಡೇಟಾವನ್ನು (ರೋಗಿಗಳ ವಿವರವನ್ನು) ಆಪ್‍ನಲ್ಲಿ ಅಪ್‍ಲೋಡ್ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿ ಸಿದೆ. ನಿಯಮ ಪಾಲಿ ಸದ ಮೆಡಿಕಲ್ ಸ್ಟೋರ್ ಪರವಾನಗಿ ರದ್ದುಪಡಿಸಲಾ ಗುವುದು ಹಾಗೂ ಕಾನೂನು ಕ್ರಮವನ್ನೂ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಮೈಸೂರಿನಲ್ಲಿ 1300ಕ್ಕೂ ಅಧಿಕ ಮೆಡಿಕಲ್ ಸ್ಟೋರ್ ಮತ್ತು ಫಾರ್ಮಾ ಸಿಗಳಿವೆ. ಆದರೆ, 200ರಿಂದ 220 ಮೆಡಿಕಲ್ ಸ್ಟೋರ್‍ನವರು ಮಾತ್ರವೇ ಪ್ರತಿನಿತ್ಯವೂ ನಿಗದಿಪಡಿಸಿದ ಆಪ್‍ನಲ್ಲಿ ಈ ಔಷಧಗಳ ಮಾರಾಟದ ಮಾಹಿತಿ ಮತ್ತು ರೋಗಿಗಳ ವಿವರಗಳನ್ನು ಅಪ್ ಲೋಡ್ ಮಾಡುತ್ತಿವೆ ಎಂದು ಮೂಲ ಗಳು `ಮೈಸೂರು ಮಿತ್ರ’ನಿಗೆ ತಿಳಿಸಿವೆ.

ಮಾರ್ಗಸೂಚಿ ಮನದಟ್ಟು: ಮೈಸೂ ರಿನ ಡೆಪ್ಯುಟಿ ಡ್ರಗ್ ಕಂಟ್ರೋಲರ್ ಅರುಣ್ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಗರದ ಎಲ್ಲಾ ಮೆಡಿಕಲ್ ಸ್ಟೋರ್ಸ್, ಫಾರ್ಮಾ ಸಿಸ್ಟ್‍ಗಳು ಹಾಗೂ ಪ್ರಾತಿನಿಧಿಕ ಸಂಘಟನೆಗಳ ಪದಾಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ಸರ್ಕಾರದ ಮಾರ್ಗಸೂಚಿ ಸ್ಪಷ್ಟವಾಗಿದ್ದು, ಅದರ ನಿಯಮಗಳನ್ನು ತಪ್ಪದೇ ಪಾಲಿಸ ಬೇಕೆಂದು ಸೂಚನೆ ನೀಡಲಾಗಿದೆ. ಕೋವಿಡ್-19 ರೋಗ ಲಕ್ಷಣದ ಆರೋಗ್ಯ ಸಮಸ್ಯೆಗಳಿಗೆ, ಶೀತ, ಕೆಮ್ಮು, ಜ್ವರಕ್ಕೆ ಔಷಧ ಖರೀದಿಸಿದ ರೋಗಿಗಳ ಮಾಹಿತಿ ಮತ್ತು ಮಾರಾಟವಾದ ಔಷಧಗಳ ವಿವರಗಳನ್ನು ಪ್ರತಿನಿತ್ಯ ಆಪ್‍ಗೆ ಅಪ್‍ಲೋಡ್ ಮಾಡುವಂತೆ ಮನದಟ್ಟು ಮಾಡಲಾಗಿದೆ ಎಂದರು.

Translate »