ಮೈಸೂರು-ಬೆಂಗಳೂರು ರೈಲು ಸಂಚಾರ ಆರಂಭ
ಮೈಸೂರು

ಮೈಸೂರು-ಬೆಂಗಳೂರು ರೈಲು ಸಂಚಾರ ಆರಂಭ

May 23, 2020

ಮೈಸೂರು, ಮೇ 22 (ಆರ್‍ಕೆ)- ಮೈಸೂರು-ಬೆಂಗ ಳೂರು ನಡುವೆ ವಿಶೇಷ ರೈಲು ಇಂದಿನಿಂದ ಸಂಚಾರ ಆರಂಭಿಸಿದೆ. ಮೊದಲ ಟ್ರಿಪ್‍ನಲ್ಲಿ ಬೆಂಗಳೂರಿನಿಂದ 69 ಮಂದಿ ಆಗಮಿಸಿದರೆ, ವಾಪಸ್ ಹೋದ ಇದೇ ರೈಲಿನಲ್ಲಿ ಮೈಸೂರಿನಿಂದ 59 ಮಂದಿ ಬೆಂಗಳೂರಿಗೆ ತೆರಳಿದರು. ಇಂದು ಬೆಳಿಗ್ಗೆ 9.30ಕ್ಕೆ ಬೆಂಗಳೂರಿ ನಿಂದ ಪ್ರಯಾಣ ಬೆಳೆಸಿದ ರೈಲು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಿತು. ಮತ್ತೆ ಅದೇ ರೈಲು ಮಧ್ಯಾಹ್ನ 1.45 ಗಂಟೆಗೆ ವಾಪಸ್ ಹೊರಟು ಸಂಜೆ 4.45 ಗಂಟೆಗೆ ಬೆಂಗಳೂರು ತಲುಪಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ಬಂದ ಎಲ್ಲಾ ಪ್ರಯಾಣಿಕರಿಗೆ ಎಕ್ಸಿಟ್ ಪಾಯಿಂಟ್‍ನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ಮಾಡಿ ಆನ್‍ಲೈನ್‍ನಲ್ಲಿ ಪಡೆದ ಟಿಕೆಟ್ ಅನ್ನು ಪಡೆದು ಹೊರ ಹೋಗಲು ಅವಕಾಶ ಮಾಡಿಕೊಟ್ಟರು. ಹಾಗೆಯೇ ಬೆಂಗಳೂರಿಗೆ ಹೊರಟ ಪ್ರಯಾಣಿಕರಿಗೂ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಅಗತ್ಯ ಮಾಹಿತಿ ದಾಖಲಿಸಿಕೊಂಡು ಫ್ಲಾಟ್ ಫಾರಂಗೆ ಕಳುಹಿಸುತ್ತಿದ್ದ ಸಿಬ್ಬಂದಿ ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‍ನಿಂದ ಕೈ ಸ್ವಚ್ಛಗೊಳಿಸಿ, ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು.

ಬೆಂಗಳೂರಿನಿಂದ ಬಂದ ರೈಲಿನ ಎಲ್ಲಾ ಬೋಗಿ ಗಳ ಸ್ವಚ್ಛಗೊಳಿಸಿ, ರಾಸಾಯನಿಕ ಸಿಂಪಡಿಸಿದ ನಂತರ ವಷ್ಟೇ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾ ಣಿಸಲು ಅವಕಾಶ ನೀಡಲಾಯಿತು. ಶುಕ್ರವಾರ ಆರಂಭ ವಾದ ರೈಲು ಸಂಚಾರಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಂಗಳೂರಿನಿಂದ ಬಂದ ಪ್ರಯಾಣಿಕರನ್ನು ಅವರ ಸಂಬಂಧಿಗಳು ರೈಲು ನಿಲ್ದಾಣದ ಸರ್ಕಲ್‍ನಿಂದ ತಮ್ಮ ವಾಹನಗಳಲ್ಲಿ ಕರೆದೊಯ್ದರು. ಕೆಲವರು ಆಟೋಗಳಲ್ಲಿ ತಮ್ಮ ಮನೆಗಳಿಗೆ ತೆರಳಿದರೆ, ಮತ್ತೆ ಕೆಲವರು ನಡೆದುಕೊಂಡೇ ಹೋದರು.

ಆರ್‍ಪಿಎಫ್, ರೈಲ್ವೆ ಪೊಲೀಸ್ ಠಾಣೆ, ಮಂಡಿ ಠಾಣೆ ಹಾಗೂ ಎನ್.ಆರ್. ಸಂಚಾರ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಪ್ರಯಾಣಿಕರು ಗುಂಪು ಸೇರದಂತೆ ನಿಗಾ ವಹಿಸಿದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಹಾಗೂ ಆರ್‍ಪಿಎಫ್ ಅಧಿಕಾರಿಗಳು ಇಂದು ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿ ಪಾಲಿಸಿರುವುದರ ಬಗ್ಗೆ ಅವಲೋಕನ ನಡೆಸಿದರು.

Translate »