ಬೆಂಗಳೂರು, ಆ.30- ರಾಜ್ಯದಲ್ಲಿ ಶನಿವಾರ ಒಂದೇ ದಿನ ಅತಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದ್ದು, 72,684 ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ಇದುವರೆಗೆ ರಾಜ್ಯದಲ್ಲಿ, ಒಟ್ಟು 27,85,718 ಕೋವಿಡ್ ಪರೀಕ್ಷೆ ನಡೆದಿದೆ. ಇನ್ನು ಕೋವಿಡ್ ಪಾಸಿಟಿವ್ ಪ್ರಕರಣಗಳು 8,000ರ ಗಡಿ ದಾಟುತ್ತಲೇ ಇದ್ದು, ಶನಿವಾರ ಸಹ 8,324 ಮಂದಿ ಹೊಸದಾಗಿ ಕೊರೊನಾಗೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 3,27,076ಕ್ಕೆ ತಲುಪಿದೆ.
ಒಂದೇ ದಿನ 115 ಸಾವಿನ ಪ್ರಕರಣ ವರದಿಯಾಗಿದ್ದು ಒಟ್ಟು 5,483 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ 8,110 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 2,35,128 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. “ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳು ನಡೆಯುತ್ತಿದ್ದು ಇದು ಹೆಚ್ಚಿನ ಕೋವಿಡ್ ರೋಗಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ” ಎಂದು ನೋಡಲ್ ಅಧಿಕಾರಿ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ರಾಜ್ಯವು ಪ್ರತಿದಿನ 65,000-70,000 ಪರೀಕ್ಷೆಗಳನ್ನು ನಡೆಸುತ್ತಿದೆ. ಹಾಗಾಗದಿದ್ದಲ್ಲಿ ರಾಜ್ಯದಲ್ಲಿ ಅದೆಷ್ಟೋ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿರಲಿಲ್ಲ. ಇದರಿಂದಾಗಿ ಸೋಂಕು ಹೆಚ್ಚಾಗಿ ಹರಡಲು ಕಾರಣವಾಗುತ್ತಿತ್ತು. ಕೆಲವು ರಾಜ್ಯಗಳು ದಿನಕ್ಕೆ ಕೇವಲ 5,000-10,000 ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕವು ಪ್ರಕರಣಗಳನ್ನು ಪರೀಕ್ಷಿಸುವ ಮತ್ತು ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರು ನಗರವು 2,993 ಮತ್ತು 25 ಸಾವುಗಳೊಂದಿಗೆ ಹೆಚ್ಚಿನ ಪಾಸಿಟಿವ್ ಕೇಸ್‍ಗಳನ್ನು ದಾಖಲಿಸಿದೆ. 468 ಪ್ರಕರಣಗಳೊಂದಿಗೆ ಬಳ್ಳಾರಿ ಎರಡನೇ ಸ್ಥಾನದಲ್ಲಿದೆ. ಶಿವಮೊಗ್ಗ (333), ಹಾಸನ (325), ದಾವಣಗೆರೆ (319) ಮತ್ತು ಮೈಸೂರು (309) ನಂತರದ ಸ್ಥಾನಗಳಲ್ಲಿದೆ.