ಮೈಸೂರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ  72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು
ಮೈಸೂರು

ಮೈಸೂರಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ  72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು

October 25, 2018

ಮೈಸೂರು: ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಸುಬ್ಬರಾಯನ ಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಬುಧವಾರ ಮೈಸೂರು ನಗರ ಮತ್ತು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ 72ನೇ ವರ್ಷದ ಮೈಸೂರು ಚಲೋ ಚಳವಳಿ ನೆನಪು ಕಾರ್ಯಕ್ರಮ ನಡೆಸಲಾಯಿತು.

ಮೊದಲಿಗೆ ಉದ್ಯಾನದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ತ್ರಿವರ್ಣ ಧ್ವಜ ಹಾರಿಸಲಾಯಿತು. ನಂತರ ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತದವರೆಗೆ ಮೆರವಣಿಗೆಯಲ್ಲಿ ತೆರಳಿ ಅಲ್ಲಿ ರಾಮಸ್ವಾಮಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಡಿ.ಹೆಚ್.ಜಗದೀಶ್, 1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಬಂದರೂ ಮೈಸೂರಿನಲ್ಲಿ ರಾಜಮನೆತನದ ಆಡಳಿತವಿತ್ತು. ಬಳಿಕ ಹಳೇ ಮೈಸೂರು ರಾಜ್ಯದಲ್ಲಿಯೂ ಪ್ರಜಾಪ್ರಭುತ್ವ ಆಡಳಿತ ಜಾರಿಗೊಳಿಸಬೇಕೆಂದು ಹೋರಾಟ ತೀವ್ರಗೊಳಿಸ ಲಾಯಿತು. ಇದರ ಫಲವಾಗಿ ಆ.24ರಂದು ಹಳೇ ಮೈಸೂರು ಪ್ರಾಂತ್ಯದಲ್ಲಿ ರಾಜರ ಆಳ್ವಿಕೆ ಅಂತ್ಯಗೊಂಡು ಅಲ್ಲಿ ತ್ರಿವರ್ಣ ಧ್ವಜ ಹಾರಿಸಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಜಾರಿಗೊಳಿಸಲಾಯಿತು ಎಂದು ಸ್ಮರಿಸಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಪ್ರಜಾಪ್ರಭುತ್ವ ಸ್ಥಾಪನೆ ಯಾಗಲು ನಿಜವಾದ ಸ್ವಾತಂತ್ರ್ಯ ಹೋರಾಟ ಗಾರರೇ ಕಾರಣ ಎಂದು ಹೇಳಿದರು.

ನಂತರ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ದಲ್ಲಿರುವ ಸ್ಮಾರಕ ಭವನದಲ್ಲಿ ನಡೆದ ವೇದಿಕೆ ಕಾರ್ಯ ಕ್ರಮಕ್ಕೆ ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದು ಪ್ರಾಧ್ಯಾಪಕರು ಗಾಂಧಿ ಕುರಿತು ಯುವ ಜನಾಂಗಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದು, ಹೀಗಾಗಿ ಯುವ ಸಮುದಾಯ ಗಾಂಧೀಜಿಯವರ ಬಗ್ಗೆ ತಿಳಿದು ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯ ದರ್ಶಿ ಪ್ರೊ. ಹೆಚ್.ಎನ್.ಅಶ್ವಥ್‍ನಾರಾಯಣ್, ಸ್ವಾತಂತ್ರ್ಯ ಹೋರಾಟಗಾರರಾದ ಸಿ.ಆರ್.ರಂಗಶೆಟ್ಟಿ, ಟಿ.ವೆಂಕಟಾಚಲಯ್ಯ, ಪುಟ್ಟಣ್ಣ, ಸೋಮಶೇಖರ್, ಲೇಖಕ ಬನ್ನೂರು ಕೆ.ರಾಜು, ಸಂಚಾಲಕ ಬಿ. ಕರುಣಾಕರನ್ ಇನ್ನಿತರರು ಉಪಸ್ಥಿತರಿದ್ದರು.

Translate »