ಮೈಸೂರು: ಭಕ್ತಾದಿಗಳು ಸಮರ್ಪಿಸಿದ ಹರಕೆ ಸೀರೆಗಳ ಮಾರಾಟದಿಂದ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಒಂದು ವರ್ಷದಲ್ಲಿ ಸುಮಾರು 80 ಲಕ್ಷದಿಂದ 1 ಕೋಟಿ ರೂ. ವರೆಗೆ ಆದಾಯ ಬರುತ್ತದೆ.
ವಿಶೇಷ ದಿನಗಳೂ ಸೇರಿದಂತೆ ವರ್ಷವಿಡೀ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು `ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ರೇಷ್ಮೆ, ಕಾಟನ್ ಸೇರಿದಂತೆ 300 ರೂ.ನಿಂದ 10,000 ರೂ.ಗಳ ಬೆಲೆಯ ಸೀರೆಗಳನ್ನು ಹರಕೆಯಾಗಿ ಸಮರ್ಪಿಸಿ ರಶೀದಿ ಪಡೆಯುತ್ತಾರೆ.
ಭಕ್ತಾದಿಗಳಿಂದ ಬಂದ ಹರಕೆ ಸೀರೆಗಳನ್ನು ತಾಯಿಗೆ ಸ್ಪರ್ಶ ಮಾಡಿದ ನಂತರ ದೇವಸ್ಥಾನದಲ್ಲೇ ಇರುವ ಕೌಂಟರ್‌ನಲ್ಲಿ ಪ್ರತೀ ದಿನ ಸೀರೆಗಳನ್ನು ಶೇ.25ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇದರಿಂದ ಪ್ರತೀ ವರ್ಷ ಸರಿ ಸುಮಾರು 80 ಲಕ್ಷದಿಂದ 1 ಕೋಟಿ ರೂ. ಆದಾಯ ಬರುತ್ತದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹರಕೆ ಸೀರೆಗಳಿಂದ ಬರುವ ಆದಾಯವನ್ನು ದಾಸೋಹ ಮತ್ತಿತರ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ವಿವಿಧ ಧಾರ್ಮಿಕ ಕೈಂಕರ್ಯ, ವಿಶೇಷ ಪೂಜೆ, ಹುಂಡಿ, ಅಲಂಕಾರ ಗಳಿಂದ ಹಾಗೂ ಭಕ್ತರಿಂದ ಬರುವ ವಿವಿಧ ರೂಪದ ಸೇವಾ ಶುಲ್ಕಗಳೂ ಸಹ ದೇವಾಲಯದ ಸಂಪನ್ಮೂಲವನ್ನು ಹೆಚ್ಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.