7ನೇ ಸುತ್ತಿನ ಮಾತುಕತೆಯೂ ವಿಫಲ; ಜ.8ಕ್ಕೆ ಮತ್ತೊಂದು ಸಭೆ
ಮೈಸೂರು

7ನೇ ಸುತ್ತಿನ ಮಾತುಕತೆಯೂ ವಿಫಲ; ಜ.8ಕ್ಕೆ ಮತ್ತೊಂದು ಸಭೆ

January 5, 2021

ನವದೆಹಲಿ: ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಏಳನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾನೂನು ತಿದ್ದುಪಡಿ ಪ್ರಯತ್ನಕ್ಕೆ ಒಪ್ಪದ ರೈತರು ಕಾನೂನುಗಳನ್ನು ರದ್ದುಪಡಿಸುವಂತೆ ಪಟ್ಟು ಸಡಿಲಿಸಿಲ್ಲ. ಇದರ ಪರಿಣಾಮ ಇಂದಿನ ಸಭೆ ವಿಫಲವಾಗಿದ್ದು, ಜ.8ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕೇಂದ್ರ ಹಾಗೂ ರೈತ ಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಇನ್ನು ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳು ಈಡೇರದಿದ್ದರೆ, ಜ.26ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ಮೆರವಣಿಗೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೇ ಇಂದಿನ ಸಭೆಯಲ್ಲಿ ರೈತರ 4 ಬೇಡಿಕೆಗಳಲ್ಲಿ ಎರಡಾದ ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಕೃಷಿ ತ್ಯಾಜ್ಯ ಸುಡುವಿಕೆ ನಿಬಂಧನೆಗಳನ್ನು ಹಿಂಪಡೆಯಲು ಎರಡು ಕಡೆಯಿಂದ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ. ಸಭೆಯಲ್ಲಿ ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರಿಗೆ ಸಚಿವರಾದ ನರೇಂದ್ರಸಿಂಗ್ ತೋಮರ್, ಪಿಯೂಷ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಹಾಗೂ ಸರ್ಕಾರಿ ಅಧಿಕಾರಿಗಳು 2 ನಿಮಿಷ ಮೌನ ಆಚರಿಸಿ, ಗೌರವ ಸಲ್ಲಿಸಿದರು.

ಸಭೆ ಬಳಿಕ ಮಾತನಾಡಿದ ಕೃಷಿ ಸಚಿವ ನರೇಂದ್ರ ಥೋಮರ್, ಜ.8ರಂದು ಮತ್ತೆ ಸಭೆ ಸೇರಿ ಚರ್ಚೆ ನಡೆಸುತ್ತೇವೆ. ಇಂದಿನ ಸಭೆಯಲ್ಲಿ ಕಾನೂನು ಹಿಂಪಡೆಯುವ ಬಗ್ಗೆ ಚರ್ಚೆ ಆಗಿಲ್ಲ. ಮಧ್ಯಮ ಮಾರ್ಗ ಹುಡುಕಲೆಂದು ರೈತರು ಬಯಸುತ್ತಾರೆ. ಎರಡೂ ಕೈ ಕೂಡಿ ದರೆ ಚಪ್ಪಾಳೆ ಆಗಲಿದೆ ಎನ್ನುವ ಮೂಲಕ ಪರೋಕ್ಷವಾಗಿ ರೈತ ಸಂಘಟನೆಗೂ ಪಟ್ಟು ಸಡಿಲಿಸುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ವನ್ನು ಮುಂದಿಟ್ಟಿ ದ್ದಾರೆ. ಜೊತೆಗೆ ಕನಿಷ್ಠ ಬೆಂಬಲ ಬೆಲೆ ಪದ್ದತಿ ಮುಂದು ವರೆಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಈ ಪ್ರಸ್ತಾಪಗಳಿಗೆ ಒಪ್ಪದ ರೈತ ಮುಖಂಡರು ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ರೈತರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಜೊತೆಗೆ ರೈತರಿಗೆ ಮಾರಕವಾಗಿರುವ ವಿದ್ಯುತ್ ಕಾನೂನನ್ನು ವಾಪಸ್ ಪಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.

Translate »