ಮೈಸೂರು, ಜ.4(ಎಸ್‍ಪಿಎನ್)- `ತುಕ್ಕು ಹಿಡಿಯುತ್ತಿರುವ ಬ್ಯಾರಿಕೇಡ್; ನಾಗರಿಕರ ಆಕ್ರೋಶ’ ಜ.2ರಂದು `ಮೈಸೂರು ಮಿತ್ರ’ನಲ್ಲಿ ಪ್ರಕಟ ವಾಗಿದ್ದ ವರದಿಗೆ ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸ್ಪಂದಿಸಿ ದ್ದಾರೆ. ಮೈಸೂರು ರಿಂಗ್‍ರೋಡ್‍ನ ದಟ್ಟಗಳ್ಳಿ ಮಾರ್ಗದ ಆದರ್ಶನಗರ ಸಮೀಪದ(ಪರಸಯ್ಯನಹುಂಡಿ ಮಾರ್ಗ) ರಸ್ತೆ ಪಕ್ಕದಲ್ಲಿ ಜೋಡಿಸಲಾಗಿದ್ದ 10-12 `ಬ್ಯಾರಿಕೇಡ್’ಗಳು ಮಳೆ, ಬಿಸಿಲಿಗೆ ತುಕ್ಕುಹಿಡಿ ಯುತ್ತಿವೆ. ಅಲ್ಲದೆ, ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ ಎಂದು `ಮೈಸೂರು ಮಿತ್ರ’ನಲ್ಲಿ ಜ.2ರಂದು ವರದಿಯಾಗಿತ್ತು. ಇದೀಗ ಆ ವರದಿಗೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ಅವರು ತಕ್ಷಣವೇ ಸ್ಪಂದಿಸಿ, ಆ ಭಾಗದ ಸಂಚಾರ ಪೊಲೀಸರಿಗೆ ಸೂಚನೆ ನೀಡಿ ತೆರವುಗೊಳಿಸಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸರು ಈ ಬ್ಯಾರಿಕೇಡ್‍ಗಳ ತಯಾರಿಕೆಗೆ ಖಾಸಗಿ ವ್ಯಕ್ತಿಯೊಬ್ಬರಿಗೆ ಕೆಲವು ತಿಂಗಳ ಹಿಂದೆ ಆರ್ಡರ್ ಮಾಡಿದ್ದ ಬಗ್ಗೆ ಮಾಹಿತಿ ನೀಡಿ, ಈ ಬ್ಯಾರಿಕೇಡ್‍ಗಳಿಗೂ ಮೈಸೂರು ನಗರ ಪೊಲೀಸ್ ವಿಭಾಗ (ಸಂಚಾರ ವಿಭಾಗ)ಕ್ಕೂ ಸಂಬಂಧವಿಲ್ಲ. ಹಾಗಾಗಿ ಪಾದಾಚಾರಿಗಳಿಗೆ ಅನಾನುಕೂಲ ವಾಗುವಂತೆ ಫುಟ್‍ಪಾತ್ ಮೇಲೆ ಬ್ಯಾರಿಕೇಡ್ ಹಾಕಿದ್ದ ವ್ಯಕ್ತಿಗೆ ಸೂಚಿಸಿ, ಅಲ್ಲಿದ್ದ ಬ್ಯಾರಿಕೇಡ್‍ಗಳನ್ನು ತೆರವು ಮಾಡಿಸಿ, ಪಾದಚಾರಿಗಳ ಓಡಾಟಕ್ಕೆ ಸುಗಮಗೊಳಿಸಿದ್ದಾರೆ.