ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 800  ಕೋಟಿ ಹಗರಣ: ಜೆಡಿಎಸ್ ಆರೋಪ ಸಿಬಿಐ ತನಿಖೆಗೆ ಆಗ್ರಹ
News

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 800 ಕೋಟಿ ಹಗರಣ: ಜೆಡಿಎಸ್ ಆರೋಪ ಸಿಬಿಐ ತನಿಖೆಗೆ ಆಗ್ರಹ

September 4, 2022

ಬೆಂಗಳೂರು, ಸೆ. 3(ಕೆಎಂಶಿ)-ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ 800 ಕೋಟಿ ರೂ. ಅವ್ಯವಹಾರ ನಡೆದಿದ್ದು, ಈ ಹಗರಣ ಸಂಬಂಧ ಸಿಬಿಐ ಯಿಂದ ತನಿಖೆ ನಡೆಸುವಂತೆ ಜೆಡಿಎಸ್ ಒತ್ತಾಯಿಸಿದೆ.

ಈ ಸಂಬಂಧ ದಾಖಲೆಗಳ ಸಮೇತ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಶಾಸಕರ ನಿಯೋಗ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರು ಸಲ್ಲಿಸಲು ನಿರ್ಧರಿಸಿದೆ. ಗಡ್ಕರಿ ಅವರು ಸೆಪ್ಟೆಂಬರ್ 7ರಂದು ಈ ನಿಯೋಗಕ್ಕೆ ಸಮಯ ನೀಡಿದ್ದು, ಈ ಸಂಬಂಧ ಗಡ್ಕರಿ ಅವರಿಗೆ ದಾಖಲೆಗಳನ್ನು ಸಲ್ಲಿಸಲು ಮತ್ತು ಅದಕ್ಕೂ ಮುನ್ನ ಇತರ ನಾಯಕರಿಗೂ ದೂರು ಸಲ್ಲಿಸಲು ಕುಮಾರಸ್ವಾಮಿ, ನಾಳೆಯೇ ದೆಹಲಿಗೆ ತೆರಳು ತ್ತಿದ್ದಾರೆ. 800 ಕೋಟಿ ರೂ. ಲೂಟಿಯಲ್ಲಿ ಯೋಜನಾ ನಿರ್ದೇಶಕ ಶ್ರೀಧರ್, ಸಂಸದ ಪ್ರತಾಪ್ ಸಿಂಹ ಅವರಿಗೂ ಪಾಲು ನೀಡಿರಬಹುದು. ಅದಕ್ಕೆ ಅವರ ಪರವಾಗಿ ಸಂಸ ದರು ನಿಂತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಒಂದಷ್ಟು ಮಾಹಿತಿ ಮತ್ತು ದಾಖಲೆಗಳನ್ನು ಬಿಡುಗಡೆ ಮಾಡಿದ ಮಾಗಡಿಯ ಜೆಡಿಎಸ್ ಶಾಸಕ ಎ.ಮಂಜುನಾಥ್, ಭೂ ಪರಿಹಾರ ಹಾಗೂ ಹೆದ್ದಾರಿ ಅವ್ಯವಹಾರದ ಬಗ್ಗೆ ಇಡಿ ಹಾಗೂ ಸಿಬಿಐ ತನಿಖೆಯಾಗಬೇಕು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆಪ್ಟೆಂಬರ್ 7ರಂದು ದೆಹಲಿಗೆ ತೆರಳಿ, ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ದೂರು ನೀಡುವುದರೊಂದಿಗೆ ಸವಿಸ್ತಾರವಾಗಿ ವಿವರಿಸಲಿದ್ದಾರೆ ಎಂದು ಹೇಳಿದರು. ಮಳೆಯಿಂದಾಗಿ ಹೆದ್ದಾರಿಗೆ ಭಾರೀ ಹಾನಿಯಾಗಿದೆ. ಇಡೀ ರಸ್ತೆಯುದ್ಧಕ್ಕೂ ಮಳೆಯ ನೀರು ತುಂಬಿದೆ. ಆ ಭಾಗದ ರೈತರು, ಜನರಿಗೆ ಅನಾನುಕೂಲವಾಗಿದೆ. ನಾನು ಆ ಭಾಗದ ಜನಪ್ರತಿನಿಧಿಯಾಗಿದ್ದೇನೆ. ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಸಿದ್ದೆವು. ಅವರ ದುರ್ನಡತೆಯಿಂದಾಗಿ ಈ ಸ್ಥಿತಿ ಉಂಟಾಗಿದೆ ಎಂದು ಹೆದ್ದಾರಿ ಕಾಮಗಾರಿ ಬಗ್ಗೆ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಯಾದರೆ ಒಳ್ಳೆಯದು ಎಂಬ ಕಾರಣಕ್ಕೆ ಸುಮ್ಮನಿದ್ದೆವು. ಸಂಸದ ಪ್ರತಾಪ್ ಸಿಂಹ ಆಗಾಗ ಬಂದು ಫೋಸ್ ಕೊಡ್ತಿದ್ರು. ರಸ್ತೆ ನಾವೇ ಮಾಡಿರೋದು ಅಂತ ತಮ್ಮನ್ನು ತಾವೇ ಹೊಗಳಿಕೊಂಡ್ರು. ನಾನು ಪ್ರತಾಪ್ ಸಿಂಹ ಅವರನ್ನು ಕೇಳಲು ಬಯಸುತ್ತೇನೆ, ನೀವು ಯಾರಿಗೆ ಬ್ರಾಂಡ್ ಅಂಬಾಸಿಡರ್ ಹೇಳಿ, ಹೆದ್ದಾರಿ ಮಾಡುವ ಸಂಸ್ಥೆಯವರಿಗಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿಯುದ್ದಕ್ಕೂ ಸಮಸ್ಯೆ… ಸಮಸ್ಯೆ…: ಬಿಡದಿಗೆ ರಸ್ತೆ ಓಪನ್ ಬಿಟ್ಟಿಲ್ಲ. 119 ಕಿ.ಮೀ ರಸ್ತೆಯಲ್ಲಿ ಇಂಟರ್ ಜಂಕ್ಷನ್ ಇಲ್ಲ. ಪ್ರಯಾಣಿಕರಿಗೆ ಟೀ ಕುಡಿಯಲು ವ್ಯವಸ್ಥೆ ಇಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ವ್ಯವಸ್ಥೆಯೂ ಇಲ್ಲ. ಬೇರೆ ಎಕ್ಸ್ ಪ್ರೆಸ್ ಹೈವೇಗಳನ್ನು ಇದೇ ರೀತಿ ಮಾಡಿದ್ದಾರಾ? ಅಪಘಾತವಾದರೆ ಟ್ರಾಮಾ ಸೆಂಟರ್ ಮಾಡಿಲ್ಲ. ಸಾರ್ವಜನಿಕರಿಗೆ ಇದರಿಂದ ಏನು ಲಾಭ? ನಾವೆಲ್ಲ ಶಾಸಕರು ಬರುತ್ತೇವೆ. ಬನ್ನಿ ರಸ್ತೆ ನೋಡಿ ಎಂದು ಪ್ರತಾಪ್ ಸಿಂಹ ಅವರನ್ನು ಆಹ್ವಾನಿಸಿದರು ಮಂಜುನಾಥ್.

ಹೆದ್ದಾರಿಯಲ್ಲಿ ಕ್ರಾಸಿಂಗ್ ಕೊಟ್ಟಿಲ್ಲ. ನಮ್ಮ ಜನ ಎತ್ತಿನ ಗಾಡಿ ಎಲ್ಲಿಂದ ಓಡಿಸಬೇಕು. ಟ್ರ್ಯಾಕ್ಟರ್‍ಗಳನ್ನು ಎಲ್ಲಿ ಕ್ರಾಸ್ ಮಾಡಬೇಕು. 50 ಕಡೆ ಕ್ರಾಸಿಂಗ್ ಇವೆ. ಅಲ್ಲಿ ನೀರು ತುಂಬಿದೆ. ಬನ್ನಿ, ಎಲ್ಲಿ ಮಿಸ್ಟೇಕ್ ಇದೆ ತೋರಿಸ್ತೇವೆ. ರೈತರಿಗೆ ಬರಬೇಕಾದ ಭೂ ಪರಿಹಾರ ಕೊಡಿಸಿ. ಭೂ ಪರಿಹಾರ ಕೊಡದೆ ಇದ್ದರೆ ರಸ್ತೆಯಲ್ಲೇ ಕೂರುತ್ತೇವೆ. ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಸಿದರು.

ಈ ರಸ್ತೆ ಚಿನ್ನ, ಬೆಳ್ಳಿಯಿಂದ ಮಾಡಿರೋದಾ…!:ಈ ರಸ್ತೆಯ ಒಂದು ಕಿ.ಮೀ.ಗೆ 80 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಹೆಚ್ಚಿನ ಹಣ ಖರ್ಚು ಮಾಡಬೇಕು. ಇದು ಡಾಂಬರ್ ರಸ್ತೆಯಾ, ಚಿನ್ನ, ಬೆಳ್ಳಿಯಿಂದ ಮಾಡಿರೋದಾ? ನಿನ್ನಂತೆ ಫೋಸ್ ಕೊಡೋಕೆ ನಾವು ಬಂದಿಲ್ಲ. ನಮ್ಮ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.

ಯಾರ್ದೋ ಭೂಮಿ, ಮತ್ತ್ಯಾರಿಗೋ ಪರಿಹಾರ: ಯಾರದ್ದೋ ಭೂಮಿ, ಇನ್ಯಾರಿಗೋ ಪರಿಹಾರ ನೀಡಲಾಗಿದೆ. ಯಾರಿಗೆ ಪರಿಹಾರ ಕೊಟ್ಟಿದ್ದಾರೆ. ಭೂ ಪರಿಹಾರ ಕೇಳಿದರೆ ಜೈಲಿಗೆ ಹಾಕಿಸ್ತಾರಂತೆ. ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಪ್ರತಾಪ್ ಸಿಂಹ ಬಿಡದಿಗೆ ಬರಬೇಕು. ಬಿಡದಿಗೆ ಬನ್ನಿ ನಾವು ನೋಡಿಕೊಳ್ತೇವೆ ಎಂದು ಗುಡುಗಿದರು ಮಂಜುನಾಥ್. ದಶಪಥ ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ವಿಧಾನಸಭೆ ಅಧಿವೇಶನ ದಲ್ಲಿ ಎರಡು ಬಾರಿ ಪ್ರಶ್ನೆ ಕೇಳಲು ಪ್ರಯತ್ನಪಟ್ಟಿದ್ದರೂ ಪ್ರಶ್ನೋತ್ತರ ವೇಳೆಗೆ ಬಾರದಂತೆ ಸಭಾಧ್ಯಕ್ಷರ ಕಚೇರಿಯನ್ನು ಮ್ಯಾನೇಜ್ ಮಾಡಲಾಗಿದೆ ಎಂದು ಶಾಸಕರು ಆರೋಪಿಸಿದರು. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಬಹಳ ಪ್ರಭಾವ ಇರುವ ವ್ಯಕ್ತಿ. ಅವರು ಏನು ಬೇಕಾದರೂ ಮಾಡಬಲ್ಲರು. ಅದಕ್ಕಾಗಿಯೇ ಮೈಸೂರು ಸಂಸದರು ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಶಾಸಕರು ದೂರಿದರು.

Translate »