ಮೈಸೂರು ಜಿಲ್ಲೆಯಲ್ಲಿ ಶೇ.91.58 ರಷ್ಟು ಪಡಿತರ ವಿತರಣೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.91.58 ರಷ್ಟು ಪಡಿತರ ವಿತರಣೆ

April 14, 2020

ಆಹಾರ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ಸ್ಪಷ್ಟನೆ
ಮೈಸೂರು, ಏ.13(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಶೇ.91.58 ರಷ್ಟು ಪಡಿತರ ವಿತರಣೆ ಮಾಡಲಾಗಿದ್ದು, ಪಡಿತರ ಚೀಟಿ ಗಾಗಿ ಅರ್ಜಿ ಸಲ್ಲಿಸಿರುವವರಿಗೂ ಏ.18 ರಿಂದ ಪಡಿತರ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು.

‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಂತೆ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಟ್ಟಿಗೆ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೇ ಜಿಲ್ಲೆ ಯಲ್ಲಿ 2,04,077 ಕ್ವಿಂಟಾಲ್ ಅಕ್ಕಿ ಮತ್ತು 22,242 ಕ್ವಿಂಟಾಲ್ ಗೋಧಿಯನ್ನು ವಿತರಿಸಲಾಗಿದೆ ಎಂದರು.

ಅಂತ್ಯೋದಯ(ಎಎಎವೈ) ಪ್ರತಿ ಕಾರ್ಡಿಗೆ 35 ಕೆ.ಜಿಯಂತೆ 70 ಕೆ.ಜಿ ಅಕ್ಕಿ, ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಸದಸ್ಯ ರಿಗೆ 5 ಕೆ.ಜಿಯಂತೆ ಎರಡು ತಿಂಗಳ 10 ಕೆ.ಜಿ ಅಕ್ಕಿ ಮತ್ತು 4 ಕೆ.ಜಿ ಗೋಧಿ ಮತ್ತು ಎಪಿಎಲ್ ಕಾರ್ಡುದಾರರಿಗೆ ಒಂದು ಕೆ.ಜಿಗೆ 15 ರೂ.ನಂತೆ ಏಕ ವ್ಯಕ್ತಿ ಪಡಿತರ ಚೀಟಿಗೆ 5 ಕೆ.ಜಿಯಂತೆ 10 ಕೆ.ಜಿ ಅಕ್ಕಿ, ಎರಡು ಮತ್ತು ಎರಡಕ್ಕಿಂತ ಹೆಚ್ಚಿನ ಸದಸ್ಯರ ಪಡಿತರ ಚೀಟಿಗೆ 10 ಕೆ.ಜಿಯಂತೆ ಒಟ್ಟು 20 ಕೆ.ಜಿ ಅಕ್ಕಿಯನ್ನು ನೀಡಲಾಗಿದೆ ಎಂದು ಹೇಳಿದರು.

ಗ್ರಾಮಾಂತರ ಪ್ರದೇಶದ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಲೀಟರ್‍ಗೆ 35 ರೂ.ನಂತೆ ತಿಂಗಳಿಗೆ 1 ಲೀಟರ್ ನಂತೆ ಒಟ್ಟು 2 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 1011 ನ್ಯಾಯ ಬೆಲೆ ಅಂಗಡಿಗಳಿದ್ದು, ಇವುಗಳಲ್ಲಿ 50444 ಅಂತ್ಯೋದಯ, 655751 ಬಿಪಿಎಲ್ ಮತ್ತು 26343 ಎಪಿಎಲ್ ಕಾರ್ಡುದಾರರಿದ್ದು, ತೊಂದರೆಯಾಗದಂತೆ ನಿರ್ವಹಣೆ ಮಾಡ ಲಾಗುತ್ತಿದೆ ಎಂದು ತಿಳಿಸಿದರು.

ಅರ್ಜಿ ಸಲ್ಲಿದವರಿಗೆ ರೇಷನ್: ಏ.18 ರಿಂದ ಏ.30ರವೆಗೂ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರಿಗೆ ಪಡಿತರ ನೀಡಲಾಗುವುದು. ಪಡಿತರ ಪಡೆದುಕೊಳ್ಳಲು ಅರ್ಜಿ ಸ್ವಿಕೃತಿ, ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪರಿಗಣಿಸಿ ಒಟಿಪಿ ಮುಖಾಂತರ ವಿತರಣೆ ಮಾಡಲಾಗು ವುದು. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಿನಲ್ಲಿ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗು ವುದು ಎಂದು ಮಾಹಿತಿ ನೀಡಿದರು.

ಎಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವ ರಿಗೆ ಒಂದು ಕೆ.ಜಿಗೆ 15 ರೂ.ನಂತೆ 10 ಕೆ.ಜಿ ಅಕ್ಕಿ ನೀಡಲಾಗುವುದು. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‍ಗೆ 1,88,152 ಮತ್ತು ಎಪಿಎಲ್ ಕಾರ್ಡ್‍ಗೆ 61,233 ಮಂದಿ ಅರ್ಜಿ ಸಲ್ಲಿಸಿ ದ್ದರೆ, ಮೈಸೂರು ಜಿಲ್ಲೆಯಲ್ಲಿ ಬಿಪಿಎಲ್ ಗಾಗಿ 9,176 ಮತ್ತು ಎಪಿಎಲ್‍ಗಾಗಿ 1,568 ಜನರು ಅರ್ಜಿ ಹಾಕಿದ್ದಾರೆ ಎಂದರು.

7 ನ್ಯಾಯಬೆಲೆ ಅಂಗಡಿ ಅಮಾನತು: ಜಿಲ್ಲೆಯಲ್ಲಿ ತೂಕ ವ್ಯತ್ಯಾಸ ಮತ್ತು ಅಳತೆ ಯಲ್ಲಿ ಪಡಿತರದಾರರಿಗೆ ವಂಚಿಸುತ್ತಿದ್ದ 7 ನ್ಯಾಯಬೆಲೆ ಅಂಗಡಿಗಳನ್ನು ಅಮಾನತು ಗೊಳಿಸಲಾಗಿದೆ. ಮೈಸೂರಿನ ಕುವೆಂಪು ನಗರದ ಚೇತನ್ ನ್ಯಾಯಬೆಲೆ ಅಂಗಡಿ, ಗಾಂಧಿನಗರದ ಸಿಸಿಎಸ್, ಟಿ.ಕೆ.ಲೇಔಟ್‍ನ ಲಕ್ಷ್ಮಿ ನ್ಯಾಯಬೆಲೆ ಅಂಗಡಿ, ಹೆಬ್ಬಾಳಿನ ಲಕ್ಷ್ಮಿಕಾಂತ್ ಸಿಸಿಎಸ್, ದೇವರಾಜ ಮೊಹ ಲ್ಲಾದ ಕೆ.ಟಿ.ಸ್ಟ್ರೀಟ್‍ನ ಶ್ರೀರಾಮಲಿಂಗ ಚೌಡೇ ಶ್ವರಿ ನ್ಯಾಯಬೆಲೆ ಅಂಗಡಿ, ಕ್ಯಾತಮಾರನ ಹಳ್ಳಿಯ ಶ್ರೀ ಕರ್ನಾಟಕ ಲೇಡಿಸ್ ಸಿಸಿಎಸ್ ಬ್ರಾಂಚ್ ಮತ್ತು ನಂಜನಗೂಡು ತಾಲೂಕಿನ ಗೆಜ್ಜಗನಹಳ್ಳಿ ಗ್ರಾಮದ ಶ್ರೀ ವಿಠ್ಠಲ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲಾಗಿದೆ ಎಂದರು.

ದಂಡ ವಸೂಲು: ಸರಿಯಾದ ರೀತಿ ಯಲ್ಲಿ ತೂಕ ಮತ್ತು ಅಳತೆ ಮಾಡದ 67 ನ್ಯಾಯಬೆಲೆ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದು, 95,500 ರೂ. ದಂಡ ವಸೂಲು ಮಾಡಲಾಗಿದೆ. ಮುಕ್ತ ಮಾರು ಕಟ್ಟೆಗಳಲ್ಲಿ ದರಪಟ್ಟಿ, ದಾಸ್ತಾನು ಫಲಕ ಪ್ರಕಟಿಸಿದೆ ಇರುವುದು ಮತ್ತು ಲೆಕ್ಕಪತ್ರಗಳ ಸರಿಯಾದ ನಿರ್ವಹಣೆ ಮಾಡದಿರುವವರ ಮೇಲೂ ನಿಗಾವಹಿಸಿದ್ದು, ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ದರ ಫಲಕ ಮತ್ತು ಲೆಕ್ಕಪತ್ರ ನಿರ್ವಹಣೆ ಮಾಡದ ಆಕಳು ಟ್ರೇಡರ್ಸ್ ಮತ್ತು ಮುರಾರಿ ಟ್ರೇಡರ್ಸ್ ಮೇಲೆ ಕಾನೂನು ಕ್ರಮ ಜರುಗಿಸಿ ವಹಿವಾಟು ಸ್ಥಗಿತ ಗೊಳಿಸಲಾಗಿದೆ ಎಂದು ಹೇಳಿದರು.

ಕಂಟ್ರೋಲ್ ರೂಂ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿ ಯಿಂದ ಕಂಟ್ರೋಲ್ ರೂಂ ತೆರೆಯ ಲಾಗಿದ್ದು, ಪಡಿತರ ವಿತರಣೆ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವಾಗ ಮೋಸ ಗಳಾದಲ್ಲಿ 1077 ಸಂಖ್ಯೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದರು.

ಪ್ರತಿನಿತ್ಯ ಆಹಾರ ಇಲಾಖೆ ಸಿಬ್ಬಂದಿ ನ್ಯಾಯಬೆಲೆ ಅಂಗಡಿ ಗಳು ಮತ್ತು ಮುಕ್ತ ಮಾರುಕಟ್ಟೆಗಳಲ್ಲಿ ಅಂಗಡಿಗಳ ಪರಿಶೀಲನೆ ಮಾಡಲಾಗುತ್ತಿದೆ. ಪಡಿತರ ಚೀಟಿ ಇಲ್ಲದ ಅಥವಾ ಅರ್ಜಿ ಯನ್ನು ಸಲ್ಲಿಸದವರಿಗೆ ಪಡಿತರ ನೀಡುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. – ಪಿ.ಶಿವಣ್ಣ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Translate »