ತಾಲೂಕಿನ ಖಾಸಗಿ ವೈದ್ಯರು ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ತಹಶೀಲ್ದಾರ್ ಮನವಿ
ಮಂಡ್ಯ

ತಾಲೂಕಿನ ಖಾಸಗಿ ವೈದ್ಯರು ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ತಹಶೀಲ್ದಾರ್ ಮನವಿ

April 14, 2020

ಕೆ.ಆರ್.ಪೇಟೆ, ಏ.13- ತಾಲೂಕಿನ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ತೆರೆದು ಸೇವೆ ಆರಂಭಿಸುವಂತೆ ತಹಸೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಸೋಮವಾರ ನಡೆದ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ವೈದ್ಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ಹಿಂಜರಿಯುತ್ತಿರುವ ಖಾಸಗಿ ವೈದ್ಯರ ಸಮಸ್ಯೆ ಆಲಿಸಿ ಮಾತನಾಡಿದ ತಹಸೀಲ್ದಾರ್, ತಾಲೂಕು ಆಡಳಿತ ನಿಮ್ಮ ಸೇವೆಗೆ ಸಂಪೂರ್ಣ ಸಹಕಾರ ನೀಡಲಿದೆ. ಬಹುತೇಕ ರೋಗಿಗಳು ವೈದ್ಯರ ಚಿಕಿತ್ಸೆಗೆ ಮಾನಸಿಕವಾಗಿ ಅಂಟಿ ಕೊಂಡಿರುತ್ತಾರೆ. ಅವರಿಗೆ ತಮ್ಮ ನೆಚ್ಚಿನ ವೈದ್ಯರಲ್ಲದೆ ಬೇರೋಬ್ಬರ ಬಳಿ ಹೋದರೆ ತಮ್ಮ ಕಾಯಿಲೆ ವಾಸಿಯಾಗಲ್ಲ ಎನ್ನುವ ನಂಬಿಕೆ ಇದೆ. ರೋಗ ಗುಣವಾಗಲು ಮಾನಸಿಕ ಸ್ಥಿರತೆಯೂ ಮುಖ್ಯ. ಹೀಗಾಗಿ ಖಾಸಗಿ ವೈದ್ಯರು ತಮ್ಮ ಸೇವೆ ಆರಂಭಿಸದಿರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ವೈದ್ಯರ ಸೇವೆಗೆ ಅಗತ್ಯ ಸಹಕಾರ ಮತ್ತು ರಕ್ಷಣೆಯನ್ನು ತಾಲೂಕು ಆಡಳಿತ ನೀಡಲಿದ್ದು, ವೈದ್ಯರು ಎಂದಿನಂತೆ ತಮ್ಮ ವೃತ್ತಿ ಸೇವೆ ಆರಂಭಿಸಬೇಕು. ಈ ಮೂಲಕ ಸಾಮಾನ್ಯ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಖಾಸಗಿ ವೈದ್ಯರ ಪರ ಮಾತನಾಡಿದ ಅರವಿಂದ್ ಕ್ಲಿನಿಕ್ ಮತ್ತು ಡಯಗ್ನೋಸ್ಟಿಕ್ ಸೆಂಟರ್ ವೈದ್ಯಾಧಿಕಾರಿ ಡಾ.ಅರವಿಂದ್, ಕೊರೊನಾ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ತಾಲೂಕಿನ ಯಾವುದೇ ಖಾಸಗಿ ವೈದ್ಯರಿಗೂ ಕೊರೊನಾ ವೈರಸ್ ಅಂಟಿಲ್ಲ. ಆದರೂ ಕಳೆದ 15ದಿನಗಳ ಹಿಂದೆ ಪೂರ್ವಗ್ರಹ ಪೀಡಿತ ಮನಸ್ಸಿನ ವ್ಯಕ್ತಿಯೊಬ್ಬ ಪಟ್ಟಣದ ಖಾಸಗಿ ವೈದ್ಯರೊಬ್ಬರಿಗೆ ಕೊರೊನಾ ಅಂಟಿದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಬ್ಬಿಸಿದರು. ಇದರಿಂದ ರೋಗಿಗಳು ನಮ್ಮಲ್ಲಿಗೆ ಬರಲು ಅಂಜುತ್ತಿದ್ದರು. ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿ ವಿರುದ್ಧ ಪೊಲೀಸರು ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮ ಜರುಗಿಸಲಿಲ್ಲ. ಹಾಗಾಗಿ ಜನರಿಗೆ ನಮ್ಮ ಬಗ್ಗೆ ಅಪನಂಬಿಕೆ ಬರಬಾರದು ಎನ್ನುವ ಕಾರಣದಿಂದ ತಾಲೂಕಿನ ಎಲ್ಲಾ ಖಾಸಗಿ ವೈದ್ಯರು ತಮ್ಮ ತಮ್ಮ ಕ್ಲಿನಿಕ್ ಮುಚ್ಚಿ ಮನೆಯಲ್ಲಿ ಉಳಿದಿದ್ದೇವೆ. ಕೊರೊನಾ ಸಮಸ್ಯೆ ಮುಗಿಯುವವರೆಗೂ ನಮ್ಮಲ್ಲಿಗೆ ಬರುವ ರೋಗಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸರ ಬೇಕು. ಆದರೆ ತಾಲೂಕಿನಲ್ಲಿ ಮಾಸ್ಕ್‍ಗಳ ಅಭಾವವಿರುವುದ ರಿಂದ ರೋಗಿಗಳು ಮಾಸ್ಕ್ ಧರಿಸದೆ ನಮ್ಮ ಕ್ಲಿನಿಕ್‍ಗಳಿಗೆ ಬರುತ್ತಾರೆ. ಮಾಸ್ಕ್ ಧರಿಸಿ ಬರುವಂತೆ ಸೂಚಿಸಿದರೆ ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ. ಕ್ಲಿನಿಕ್ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ. ತಾಲೂಕು ಆಡಳಿತ ನಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಖಾಸಗಿ ಕ್ಲಿನಿಕ್ ವೈದ್ಯರಿಗೆ ಸೂಕ್ತ ಸಹಕಾರ ನೀಡಿದರೆ ನಾವು ಕ್ಲಿಕ್ ತೆರೆದು ಸೇವೆ ಆರಂಭಿಸಲು ಸಿದ್ದರಿದ್ದೇವೆ ಎಂದರು. ಜೊತೆಗೆ ಸರ್ಕಾರಿ ವೈದ್ಯರಿಗೆ ನೀಡಿರುವ ಕೋವಿದ್-19 ಆರೋಗ್ಯ ವಿಮಾ ಸೌಲಭ್ಯವನ್ನು ಖಾಸಗಿ ವೈದ್ಯರು ಮತ್ತು ದಾದಿಯರಿಗೂ ವಿಸ್ತರಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ತಹಸೀಲ್ದಾರ್‍ರನ್ನು ಒತ್ತಾಯಿಸಿದರು.

ತಾಲೂಕಿನಾದ್ಯಂತ ಎಲ್ಲಾ ಖಾಸಗಿ ವೈದ್ಯರು ನಿತ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಕ್ಲಿನಿಕ್ ತೆರೆದು ಎಂದಿನಂತೆ ತಮ್ಮ ಸೇವೆ ಆರಂಭಿಸುವುದು. ಪಟ್ಟಣದಲ್ಲಿ ಕನಿಷ್ಠ ಒಬ್ಬರಾದರೂ ಜನರ ಹಿತದೃಷ್ಠಿ ಯಿಂದ ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಕಡ್ಡಾಯವಾಗಿ ತಮ್ಮ ಕ್ಲಿನಿಕ್ ತೆರೆದು ಸೇವೆ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ಅರವಿಂದ್ ಕ್ಲಿನಿಕ್‍ನ ಡಾ.ಅರವಿಂದ್, ರಾಧಾ ಕ್ಲಿನಿಕ್‍ನ ಡಾ.ದಿವಾಕರ್, ದಿವ್ಯ ಚೇತನ್ ನರ್ಸಿಂಗ್ ಹೋಂನ ಡಾ.ದಿನೇಶ್, ರಾಜೇಶ್ವರಿ ಕ್ಲಿನಿಕ್‍ನ ಡಾ.ರಾಜೇಶ್ವರಿ, ಎ.ಸಿ.ಮಾದೇಗೌಡ ಮೆಮೋರಿಯಲ್ ಆಸ್ಪತ್ರೆಯ ಡಾ.ಲೋಹಿತ್, ಎಲ್.ಎಲ್.ಎನ್.ಗುಪ್ತ ಕ್ಲಿನಿಕ್‍ನ ಡಾ.ಭದ್ರಿನಾಥ್, ತಾಲೂಕು ಆರೋಗ್ಯ ನಿರೀಕ್ಷಕ ಸತೀಶ್, ಉಪತಹಸೀಲ್ದಾರ್ ಲಕ್ಷ್ಮೀಕಾಂತ್ ಮತ್ತಿತರರು ಸಭೆಯಲ್ಲಿದ್ದರು.

Translate »