ಮೈಸೂರು ಜಿಲ್ಲೆಯ 9,276 ಹೊಸ ಇವಿಎಂ ಕಾರ್ಯಕ್ಷಮತೆ ಖಾತರಿ
ಮೈಸೂರು

ಮೈಸೂರು ಜಿಲ್ಲೆಯ 9,276 ಹೊಸ ಇವಿಎಂ ಕಾರ್ಯಕ್ಷಮತೆ ಖಾತರಿ

December 7, 2022

ಮೈಸೂರು, ಡಿ. 6(ಆರ್‍ಕೆ)-ಮುಂಬರುವ 2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹೈದರಾಬಾದ್‍ನಿಂದ ತಂದಿರುವ ವಿದ್ಯುನ್ಮಾನ ಮತಯಂತ್ರ ಗಳ ಪೈಕಿ 9,276ರ ಕಾರ್ಯಕ್ಷಮತೆ ಖಾತರಿಯಾಗಿದ್ದು, ಉಳಿದ 4 ದೋಷಪೂರಿತವಾಗಿವೆ. ಅವುಗಳನ್ನು ಹೈದರಾಬಾದ್‍ನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‍ಗೆÀ ಕಳಿಸಲಾಗಿದೆ.

ಹೊಸ 9,280 ವಿದ್ಯುನ್ಮಾನ ಮತಯಂತ್ರ (ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್)ಗಳನ್ನು ನೋಡಲ್ ಅಧಿಕಾರಿಯೂ ಆದ ಮುಡಾ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ನೇತೃತ್ವದಲ್ಲಿ ಭಾರೀ ಭದ್ರತೆ ಯೊಂದಿಗೆ ಹೈದರಾಬಾದ್‍ನಿಂದ ಮೈಸೂರಿಗೆ ತರಲಾಗಿತ್ತು. ಮೈಸೂರಿನ ಸಿದ್ಧಾರ್ಥ ಬಡಾವಣೆಯ ಬನ್ನೂರು ರಸ್ತೆಯಲ್ಲಿನ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ನಿರ್ಮಿಸಿರುವ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯಲ್ಲಿ ಈ ಮತಯಂತ್ರಗಳನ್ನು ಶೇಖರಿಸಲಾಗಿದ್ದು, ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
50 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೊಂದಿಗೆ ನೋಡಲ್ ಅಧಿಕಾರಿ ಜಿ.ಟಿ. ದಿನೇಶ್ ಕುಮಾರ್, ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ನಾಲ್ಕು ದಿನಗಳ ಕಾಲ ಪರಿಶೀಲಿಸಿದರು. ಚಲಾಯಿ ಸುವ ಮತಗಳು ಆಯಾಯ ಅಭ್ಯರ್ಥಿಗಳ ಮತ ಲೆಕ್ಕಕ್ಕೆ ಬರುತ್ತಿದೆಯೇ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರೀಕ್ಷಿಸಿದಾಗ 9,280ರಲ್ಲಿ ಕೇವಲ 4 ಇವಿಎಂ ಗಳು ದೋಷಪೂರಿತ ಎಂದು ಕಂಡುಬಂದ ಹಿನ್ನೆಲೆ ಯಲ್ಲಿ ಅವುಗಳನ್ನು ಹೈದರಾಬಾದ್‍ನ ಕಾರ್ಖಾನೆಗೆ ಹಿಂದಿರುಗಿಸಿ, ಸುರಕ್ಷಿತ ಮತಯಂತ್ರ ಕಳುಹಿಸು ವಂತೆ ಕೋರಿ ಪತ್ರ ವ್ಯವಹಾರ ಮಾಡಲಾಗಿದೆ.

ತಪಾಸಣೆ ವೇಳೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳನ್ನೂ ಆಹ್ವಾನಿಸಿದ್ದರಲ್ಲದೇ, ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಇವಿಎಂ ಗಳ ಕಾರ್ಯಕ್ಷಮತೆಯನ್ನು ಸಾಕ್ಷೀಕರಿಸಿಕೊಳ್ಳಲಾ ಗಿದೆ. ಬಟನ್‍ಗಳು, ಲೈಟ್‍ಗಳು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ದೃಢಪಡಿಸಿಕೊಂಡಿರುವ ಅಧಿಕಾರಿಗಳು, ಪ್ರತಿಯೊಂದು ಯಂತ್ರದ ಮೇಲೆ ಸರ್ಟಿಫೈ ಮಾಡಿ ಮುದ್ರೆ ಹಾಕಿದ್ದಾರೆ. ಭದ್ರತಾ ಕೊಠಡಿಯಲ್ಲಿ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಇವಿಎಂಗಳನ್ನು ಗುರುತು ಮಾಡಿ ಸುರಕ್ಷಿತವಾಗಿರಿಸಲಾಗಿದೆ. ಭಾರತ ಚುನಾವಣಾ ಆಯೋಗ (ಇಅI) ಮಾರ್ಗಸೂಚಿಯನ್ವಯ ಮೊದಲ ಹಂತದ ತಪಾಸಣೆ ನಂತರ ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದ್ದು, ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಅಭ್ಯರ್ಥಿಗಳೆದುರು ಇವಿಎಂಗಳ ಮುದ್ರೆ ತೆರೆದು ಮತ್ತೊಮ್ಮೆ ಅವುಗಳ ಕಾರ್ಯವೈಖರಿ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾ ಗುವುದು. ಜನವರಿ 2ನೇ ವಾರ ಹೈದರಾಬಾದ್‍ನ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‍ನಿಂದ 9,280 ವಿವಿ ಪ್ಯಾಟ್ ಯಂತ್ರ ಗಳನ್ನು ತಂದು ಅವುಗಳ ಕಾರ್ಯವಿಧಾನದ ಬಗ್ಗೆಯೂ ತೋರಿಸಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಗೆ ಬೀಗಮುದ್ರೆ ಮಾಡಿದ್ದು, ಆವರಣಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸದ್ಯದಲ್ಲೇ ಒಳ ಹಾಗೂ ಹೊರ ಆವರಣಕ್ಕೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿ, ಅಲ್ಲಿಯೇ ಇರುವ ಎಲೆಕ್ಟ್ರಿಕಲ್ ಕಂಟ್ರೋಲ್ ರೂಂ ನಲ್ಲಿ ಕ್ಯಾಮರಾದಲ್ಲಿ ಸೆರೆಯಾಗುವ ದೃಶ್ಯಾವಳಿ ಯನ್ನು ವೀಕ್ಷಿಸಿ, ನಿಗಾ ವಹಿಸಲಾಗುವುದು. ಪ್ರತೀದಿನ ವ್ಯಾಪ್ತಿಯ ನಜರ್‍ಬಾದ್ ಠಾಣೆ ಇನ್ಸ್‍ಪೆಕ್ಟರ್ ಜೀವನ್ ಹಾಗೂ ಸಬ್ ಇನ್ಸ್‍ಪೆಕ್ಟರ್‍ಗಳು ಭೇಟಿ ನೀಡಿ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ನಡೆಸುವರಲ್ಲದೆ, ಗರುಡ ಮತ್ತು ಪಿಸಿಆರ್ ವಾಹನದ ಸಿಬ್ಬಂದಿಯೂ ಗಸ್ತು ನಡೆಸುತ್ತಿದ್ದಾರೆ.

Translate »