ಬೆಂಗಳೂರು, ಡಿ. 6(ಕೆಎಂಶಿ)- ಕ್ರೀಡಾಪಟು ಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾ ಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಪದವೀಧರರಾದ ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಪದಕ ವಿಜೇತರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು ಎಂದು ತಿಳಿಸಿ ದರು. ಏಕಲವ್ಯ ಸೇರಿದಂತೆ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಅವರು, ಕ್ರೀಡಾಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಆಯ್ಕೆ ಸಮಿತಿಯ ಮೂಲಕ ಪಟುಗಳನ್ನು ಆಯ್ಕೆ ಮಾಡಿ, ಸರ್ಕಾರಿ ಉದ್ಯೋಗ ಕಲ್ಪಿಸಲಾಗುವುದು. ಪದವೀಧರರಾ ಗಿರುವ ಏಷಿಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಪದಕ ವಿಜೇತರಿಗೆ ಗ್ರೂಪ್ ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟದ ಪದಕವಿಜೇತರಿಗೆ ಗ್ರೂಪ್ `ಸಿ’ ಹಾಗೂ ಗ್ರೂಪ್ `ಡಿ’ ಉದ್ಯೋಗವನ್ನು ನೀಡಲಾಗುವುದು. ಕ್ರೀಡಾ ಪಟುಗಳಿಗೆ ಸರ್ಕಾರದ ಉದ್ಯೋಗ ನೀಡುವ ನೀತಿ ಕರ್ನಾಟಕದ ಹೊರತು ಬೇರೆ ಯಾವುದೇ ರಾಜ್ಯದಲ್ಲಿಲ್ಲ ಎಂದರು. ಕಳೆದ ಆಗಸ್ಟ್ 15 ರಂದು 75 ಕ್ರೀಡಾಪಟುಗಳನ್ನು ದತ್ತುಪಡೆದು, ಮುಂದಿನ ಪ್ಯಾರೀಸ್ ಒಲಂಪಿಕ್ಸ್‍ನಲ್ಲಿ ಭಾಗವಹಿ ಸಲು ತರಬೇತಿ ನೀಡಲಾಗುತ್ತಿದೆ. 4 ವರ್ಷದ ತರಬೇತಿ, ಉತ್ತಮ ತರಬೇತಿದಾರರು, ಶಾಲಾ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಇದಕ್ಕಾಗಿ ತಲಾ 10 ಲಕ್ಷ ವಿನಿಯೋಗಿಸಲಾಗಿದ್ದು, ಅವಶ್ಯಕತೆಗೆ ಅನುಸಾರ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು. ಕಾಮನ್‍ವೆಲ್ತ್, ಏಷಿಯನ್ ಗೇಮ್ಸ್, ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಉತ್ತಮ ಸಾಧನೆಗಳನ್ನು ಮಾಡಬೇಕು ಎಂದರು. ಯುವ ಕ್ರೀಡಾ ಪ್ರತಿಭೆಗಳು ದೇಶದ ಆಸ್ತಿ. ಏಕಾಗ್ರತೆ ಹಾಗೂ ಪರಿಶ್ರಮದಿಂದ ಸಾಧನೆ ಮಾಡಿದರೆ ಯಶಸ್ಸು ಖಂಡಿತ ಲಭಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರೀಡೆಗೆ ಮಹತ್ವವನ್ನು ನೀಡಿದೆ. ಕ್ರೀಡೆ ಹವ್ಯಾಸವಾಗಿ ಪ್ರಾರಂಭವಾಗಿ ರಾಷ್ಟ್ರೀಯ ಸಂಕೇತವಾಗಿ ಇತ್ತೀಚೆಗೆ ಪರಿಗಣಿಸಲಾಗುತ್ತಿದೆ.
ಒಂದು ರಾಷ್ಟ್ರವನ್ನು ಅದರ ಕ್ರೀಡಾ ಸಾಧನೆಯ ಮೇಲೆ ಗುರುತಿಸಲಾಗುತ್ತಿದೆ. ಭಾರತದಂತಹ ರಾಷ್ಟ್ರದಲ್ಲಿ ಕ್ರೀಡೆಯನ್ನು ಮುಖ್ಯವಾಹಿನಿಗೆ ತರಲು ಪ್ರಧಾನಿ ಮೋದಿಯವರು ಯಶಸ್ವಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಎಂಬ ಕಾರ್ಯಕ್ರಮಗಳ ಮೂಲಕ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿದೆ. ಇದರ ಪರಿಣಾಮವಾಗಿ ಹಿಂದಿನ ಒಲಂಪಿಕ್ಸ್‍ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುವಂತಾಯಿತು. ಪ್ಯಾರಾ ಒಲಂಪಿಕ್ಸ್‍ನಲ್ಲಿಯೂ ಭಾರತ ಮಹತ್ತರ ಸಾಧನೆಗಳನ್ನು ಮಾಡಿದೆ. ಇದಕ್ಕಾಗಿ ಎಲ್ಲ ಕ್ರೀಡಾಸಾಧಕರನ್ನು ಅಭಿನಂದಿಸುತ್ತೇನೆ ಎಂದರು.