ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ
ಮೈಸೂರು

ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ

August 10, 2018

ಬೆಂಗಳೂರು: ಸಹಕಾರಿ ಬ್ಯಾಂಕಿನ 10-7-2018ರವರೆ ಗಿನ ರೈತರ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಒಟ್ಟು 10,734 ಕೋಟಿ ಸಾಲದಲ್ಲಿ 9448 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಇದರಿಂದ ಸಹಕಾರಿ ಸಂಘಗಳ ಸದಸ್ಯರಾಗಿ ರುವ 22 ಲಕ್ಷ ರೈತರಲ್ಲಿ 20.38 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಸಾಲ ಮನ್ನಾಕ್ಕೆ ಹಣದ ಕೊರತೆ ಇರುವುದಿಲ್ಲ. ಸಾಲ ನವೀಕರಣ ಸಂದರ್ಭದಲ್ಲಿ ಸಹ ಕಾರ ಇಲಾಖೆ ಪ್ರತಿ ತಿಂಗಳು ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6500 ಕೋಟಿ ರೂ.ಗಳ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಈಗಾಗಲೇ ಅಗತ್ಯ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಬ್ಯಾಂಕರುಗಳ ಜೊತೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಬಹುಶಃ ಸಾಲ ಮನ್ನಾದ ಪ್ರಕ್ರಿಯೆ 4 ವರ್ಷಗಳಿಗೆ ಬದಲಾಗಿ ಮುಂದಿನ ವರ್ಷವೇ ಪೂರ್ಣಗೊಳ್ಳಬಹುದು ಎಂಬ ಆಶಾಭಾವವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು. ಸಾಲಮನ್ನಾ ಕುರಿತ ಮಾರ್ಗಸೂಚಿಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು. ಒಂದು ಕುಟುಂಬಕ್ಕೆ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಎಂಬ ಅಂಶವನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. 2018 ಫೆಬ್ರವರಿಯಲ್ಲಿ ಮಂಡಿಸಲಾದ ಲೇಖಾನುದಾನ ಆಯವ್ಯಯ ದಲ್ಲಿನ ಯೋಜನೆಗಳನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಮೇಕೆದಾಟು ಯೋಜನೆಯ ಜಾರಿ ಕುರಿತಂತೆ ನಿನ್ನೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಂಬಂಧಿಸಿದ ರಾಜ್ಯಗಳ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ. ಈ ಯೋಜನೆಯಿಂದ ತಮಿಳುನಾಡಿನ ರೈತರಿಗೇ ಅನುಕೂಲ ಹೆಚ್ಚು. ಈ ಕುರಿತು ತಮಿಳುನಾಡಿನ ರೈತರ ಮನವೊಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳು: ಸಚಿವ ಸಂಪುಟ ಸಭೆಯ ತೀರ್ಮಾನಗಳ ಕುರಿತು ಮಾಹಿತಿ ನೀಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸನ್ನಡತೆ ಆಧಾರದಲ್ಲಿ 93 ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು. 2018-19ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುತ್ತಿರುವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 10.36 ಕೋಟಿ ರೂ. ವೆಚ್ಚದಲ್ಲಿ ಶೂ, ಸಾಕ್ಸ್, ಟೈ, ಬೆಲ್ಟ್‍ಗಳನ್ನು ಖರೀದಿಸಲು ಅನುಮೋದನೆ ನೀಡಲಾಯಿತು ಎಂದು ತಿಳಿಸಿದರು.

ಹೊಳೆನರಸೀಪುರ ಮತ್ತು ಮಾವಿನಕೆರೆ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಮೇಲುಸೇತುವೆ ಮತ್ತು ಕೂಡು ರಸ್ತೆ ನಿರ್ಮಾಣ ಕಾಮಗಾರಿಗಳನ್ನು 39.93 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಮಾಹಿತಿ ನೀಡಿದರು. ವಿವಿಧ ನ್ಯಾಯಾಲಯ ಗಳಲ್ಲಿ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡಲು ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.

Translate »