ರಾಮನಾಥಪುರ: ಬುಧವಾರ ರಾತ್ರಿ ರಾಮನಾಥಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಹೋಬಳಿಯ ಹಲವು ಗ್ರಾಮಗಳಲ್ಲಿ ಭಾರೀ ಹಾನಿ ಸಂಭವಿಸಿದೆ.
ಹೋಬಳಿಯ ರಾಮನಕೊಪ್ಪಲು, ಹಂಡ್ರಂಗಿ, ತರಿಗಳಲೆ, ಕೂಡಲೂರು, ಬಿಳಗುಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಧಾರಾಕಾರ ಸುರಿದ ಮಳೆ ಅಪಾರ ಹಾನಿ ಉಂಟು ಮಾಡಿದೆ. ಹೋಬಳಿಯ ಕೆಲವು ಗ್ರಾಮ ಗಳಲ್ಲಿ ಬಿರು ಗಾಳಿಯ ರಭಸಕ್ಕೆ ಹಲವು ಮನೆಗಳ ಶೀಟ್ ಛಾವಣಿ, ಹೆಂಚುಗಳು ಹಾರಿ ಹೋಗಿದ್ದು, ನಿವಾಸಿಗಳು ಪರದಾಡುವಂತಾ ಗಿದೆ. ಬಿರುಗಾಳಿಯಿಂದಾಗಿ ವಿವಿಧೆಡೆ ತೋಟಗಳಲ್ಲಿನ ಬಾಳೆ ಮತ್ತಿತರ ಹಣ್ಣಿನ ಗಿಡಗಳು ನೆಲಕಚ್ಚಿವೆ. ಹಲವೆಡೆ ಹೊಲ ಗದ್ದೆಗಳಲ್ಲಿ ನೀರು ನಿಂತಿದ್ದು, ಇತ್ತೀಚೆಗಷ್ಟೇ ನಾಟಿ ಮಾಡಿದ್ದ ಹೊಗೆಸೊಪ್ಪು ಸಸಿಗಳು ನೀರಿನಲ್ಲಿ ಮುಳುಗಿವೆ.
ಹಲವು ವಾಸದ ಮನೆಗಳ ಹೆಂಚು, ಜಿಂಕ್ ಶೀಟ್ ಛಾವಣಿ ಹಾರಿ ಹೋಗಿವೆ. ಕೂಡಲೂರಿನಲ್ಲಿ 1 ಎಕರೆ ತೋಟದಲ್ಲಿದ್ದ ಬಾಳೆ ಗಿಡಗಳು ಮುರಿದು ಹೋಗಿ ನೆಲಕಚ್ಚಿವೆ. ತಂಬಾಕು ಸಸಿ ಮಡಿಯ ಶೆಡ್‍ಗಳು ಬಿರುಗಾಳಿಗೆ ಮುರಿದು ಧರಾಶಾಯಿ ಯಾಗಿವೆ. ತಂಬಾಕು ಸಸಿಗಳ ಬುಡಕ್ಕೆ ಆಲಿಕಲ್ಲು ಬಿದ್ದು ಸಸಿಗಳು ಕೊಳೆಯುತ್ತವೆ ಎಂಬ ಆತಂಕ ರೈತರದ್ದಾಗಿದೆ.
ಹಂಡ್ರಂಗಿಯಲ್ಲಿ ಬಿರುಗಾಳಿಗೆ ಸಿಲುಕಿ ತೆಂಗಿನ ಮರವೊಂದು ಬುಡಸಮೇತ ಕಿತ್ತುಬಂದು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕೂಡಲೂರು ಮತ್ತು ಶಿರದನಹಳ್ಳಿಯಲ್ಲಿಯೂ ಟ್ರಾನ್ಸ್ ಫಾರ್ಮರ್ ಉರುಳಿಬಿದ್ದ ಪರಿಣಾಮ ವಿದ್ಯುತ್ ಕಡಿತವಾಗಿತ್ತು. ತರಿಗಳಲೆಯಲ್ಲಿ ಹೊಸದಾಗಿ ನಿರ್ಮಿಸುತ್ತಿದ್ದ ಮನೆ ಮೇಲೆ ಅಳವಡಿಸಿದ್ದ ಗಾಜು ಗಾಳಿ-ಆಲಿಕಲ್ಲು ಮಳೆಯ ಹೊಡೆತದಲ್ಲಿ ಪುಡಿಪುಡಿಯಾಗಿದೆ.