ಎತ್ತಿನಹೊಳೆ: ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಎತ್ತಿನಹೊಳೆ: ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

May 31, 2019

* ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ ತಡೆದ ರೈತರು
* ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಪ್ರತಿಭಟಿಸಿದ ಎಡೇಹಳ್ಳಿ ಗ್ರಾಮಸ್ಥರು
ಸಕಲೇಶಪುರ: ಸೂಕ್ತ ಪರಿ ಹಾರ ವಿತರಿಸಿದ ನಂತರವಷ್ಟೇ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಿರ್ವಹಿಸ ಬೇಕು ಎಂದು ಆಗ್ರಹಿಸಿ ಸಕಲೇಶಪುರ ಹಾಗೂ ಬೇಲೂರಿನಲ್ಲಿ ರೈತರು, ಮುಖಂಡರು ಪ್ರತಿಭಟನೆ ನಡೆಸಿದರು.

ಸಕಲೇಶಪುರ ತಾಲೂಕಿನ ಬೆಳ ಗೋಡು ಹೋಬಳಿಯ ಹೆಬ್ಬನಹಳ್ಳಿಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮ ಗಾರಿ ಸ್ಥಳದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಸಂಘಟನೆ ನೇತೃತ್ವದಲ್ಲಿ ಸಮಾವೇಶ ಗೊಂಡ ಬೆಳಗೋಡು, ಹೆಬ್ಬನಹಳ್ಳಿ, ಶಿಡಿ ಗಳಲೆ, ಮೂಗಲಿ, ಲಕ್ಕುಂದ, ಕಟ್ಟೆಪುರ, ಕೂಡನಹಳ್ಳಿ, ದೀಣೆಕೆರೆ ಸೇರಿದಂತೆ ವಿವಿಧ ಗ್ರಾಮಗಳ ಜನರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಮೀನಿಗೆ ಸೂಕ್ತ ಪರಿಹಾರ ನೀಡದೆ ಅಕ್ರಮವಾಗಿ ಎತ್ತಿನಹೊಳೆ ಕಾಮಗಾರಿ ನಡೆಸಲಾಗುತ್ತಿದ್ದು, ಕೂಡಲೇ ನಿಲ್ಲಿಸ ಬೇಕು. ಭೂಮಿಯನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಆಕ್ರೋಶ: ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಂಡೆ ಸಿಡಿಸಲು ಸ್ಫೋಟಕ ವಸ್ತುಗಳನ್ನು ಬಳಸುತ್ತಿರುವುದರಿಂದ ಮನೆ ಗಳು ಬಿರುಕು ಬಿಡುತ್ತಿವೆ. ಕಷ್ಟಪಟ್ಟು ಕೂಲಿ ನಾಲಿ ಮಾಡಿ ಕಟ್ಟಿದ ಮನೆಗಳಿಗೆ ಹಾನಿ ಯಾಗುತ್ತಿದೆ. ಹಲವು ಬಾರಿ ಮನವಿ ಮಾಡಿ ಕೊಂಡರೂ ನಮ್ಮ ಗೋಳು ಕೇಳುವರು ಇಲ್ಲದಾಗಿದೆ ಎಂದು ಗ್ರಾಮದ ಮಹಿಳೆ ಯರು ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕಾಮಗಾರಿ ನಿಲ್ಲಿಸಿ ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ವಾಹನ ಹಾಗೂ ಯಂತ್ರಗಳ ತೆರವು: ಪರಿಹಾರ ನೀಡುವವರೆಗೆ ಯಾವುದೇ ಕೆಲಸ ಗಳನ್ನು ಮಾಡಬಾರದು ಎಂದು ಪ್ರತಿಭಟನಾ ಕಾರರು ಸ್ಥಳದಲ್ಲಿದ್ದ ಸಿಬ್ಬಂದಿಗಳಿಗೆ ಎಚ್ಚರಿಸಿ ಕಾಮಗಾರಿಗೆ ಬಳಸುತ್ತಿದ್ದ ವಾಹನಗಳು ಹಾಗೂ ಯಂತ್ರಗಳನ್ನು ತೆರವುಗೊಳಿಸಿದರು. ಈ ವೇಳೆ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿ ಗಳಿಗೆ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಾಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಈಗಾ ಗಲೇ ಗ್ರಾಮದ ಹಲವು ಸಣ್ಣ ರೈತರ ಭೂಮಿಯಲ್ಲಿ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ ಅಲ್ಪ-ಸ್ವಲ್ಪ ಬೆಳೆ ಪರಿಹಾರ ನೀಡಿದರು. ಅದಾದ ಬಳಿಕ ಮತ್ತೆ ನಮಗೆ ಯಾವುದೇ ಹಣ ನೀಡಿಲ್ಲ. ನಮ್ಮ ಹೆಸರಿನ ಭೂ ದಾಖಲೆ ಗಳು ಇವೆ. ನಮ್ಮ ಬಳಿ ಇರುವ ದಾಖಲೆ ಗಳು ತಾಲೂಕು ಕಚೇರಿಯಲ್ಲಿ ಇಲ್ಲದಾ ಗಿದೆ. ಕೇಳಿದರೆ ಸಬೂಬು ಹೇಳುತ್ತಿದ್ದಾರೆ ಎಂದು ಭೂಮಿ ಕಳೆದುಕೊಂಡ ರೈತರು ಅಳಲು ತೋಡಿಕೊಂಡರು.

ಎಚ್ಚರಿಕೆ: ಪ್ರತಿಭಟನೆ ನೇತೃತ್ವ ವಹಿಸಿದ ನಾಗರಾಜು ಹೆತ್ತೂರು ಮಾತನಾಡಿ, ಭೂಮಿ ಕಳೆದಕೊಂಡ ರೈತರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಯೋಜನೆ ವಿರುದ್ಧ ಬೃಹತ್‍ಮಟ್ಟದ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದು ಎಚ್ಚರಿಸಿದರು. ಈಗಾ ಗಲೇ ಹಲವು ಬಡವರು ಭೂಮಿ ಕಳೆದು ಕೊಂಡು ಅತಂತ್ರರಾಗಿದ್ದಾರೆ. ಯೋಜನೆ ಯಿಂದ ಹಲವು ಹಳ್ಳಿಯ ಜನರಿಗೆ ತೊಂದರೆ ಯಾಗಿದೆ. ಎಲ್ಲವನ್ನು ಸರ್ಕಾರ ಮನ ಗಂಡು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪರಿಶಿಷ್ಟರು ಮತ್ತು ಬಡವರಿಗೆ ಸೂಕ್ತ ಪರಿಹಾರ ನೀಡಿದ ಬಳಿಕ ಕಾಮಗಾರಿ ಮುಂದುವರೆಸಲು ಅವಕಾಶ ಮಾಡಿಕೊಡ ಬೇಕೆಂದು ಕಾಮಗಾರಿ ಸ್ಥಳದಲ್ಲಿದ್ದ ಯೋಜನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು, ಬೆಳಗೋಡು ಬಸವರಾಜು, ರೇಣುಕಾ ಹೇರೂರು ರವೀಶ್ ಬೆಳಗೋಡು, ತಿರುಮಲ ಗೋವಿಂದು, ಕುಮಾರ್ ಕೂಡನಹಳ್ಳಿ, ಲೋಕೇಶ್ ಕುಮಾರ್, ಈಶ್ವರಹಳ್ಳಿ, ಈರೇಶ್, ಮಂಜಯ್ಯ, ಸಗನಯ್ಯ, ಲಕ್ಷ್ಮಮ್ಮ, ರಂಗಯ್ಯ, ಸತೀಶ್, ಹುಚ್ಚಯ್ಯ, ಭೈರಮ್ಮ, ರಂಗಸ್ವಾಮಿ ಇದ್ದರು.

ಎಡೇಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಬೇಲೂರು: ಎತ್ತಿನಹೊಳೆ ಕಾಮಗಾರಿಗಾಗಿ ಮದ್ದು ಸಿಡಿಸುತ್ತಿರುವುದರಿಂದ ವಾಸದ ಮನೆಗಳು ಬಿರುಕು ಬಿಡುತ್ತಿದ್ದು, ಜೀವ ಭಯದಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಮಗೆ ಬೇರೆಡೆ ಮನೆ ನಿರ್ಮಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮತ್ತು ಸರ್ಕಾರಿ ಜಾಗದಲ್ಲಿ ಗುಡಿಸಲು ಗಳನ್ನು ನಿರ್ಮಿಸಿ ಎಡೇಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಎಡೇಹಳ್ಳಿ ಗ್ರಾಮದಲ್ಲಿ ಹಿರಿಯರ ಕಾಲದಿಂದಲೂ ವಾಸಿಸುತ್ತಿದ್ದೇವೆ. ಆದರೆ, ಎತ್ತಿನಹೊಳೆ ಕಾಮಗಾರಿಗಾಗಿ ನಮ್ಮ ಫಲವತ್ತಾದ ಭೂಮಿ ಹಾಗೂ ವಾಸದ ಮನೆಗಳನ್ನು ಕಳೆದು ಕೊಳ್ಳುವ ಭೀತಿ ಎದುರಿಸುತ್ತಿದ್ದೇವೆ. ರಾತ್ರಿ ವೇಳೆ ಮದ್ದು ಬಳಸಿ ಬಂಡೆ ಕಲ್ಲುಗಳನ್ನು ಸಿಡಿಸುತ್ತಿರುವುದರಿಂದ ನಮ್ಮ ಮನೆಗಳು ಬಿರುಕು ಬಿಡುತ್ತಿವೆ ಎಂದು ದೂರಿದರು.


ಎತ್ತಿನಹೊಳೆ ನಿರಾಶ್ರಿತರಿಗಾಗಿ ಮನೆ ನಿರ್ಮಿಸಲು ಜಮೀನು ಗುರುತಿಸಿದ್ದರೂ ಅದನ್ನು ಕೆಲ ಬಲಾಢ್ಯರು ಉಳುಮೆ ಮಾಡಿ ಕೊಂಡು ತೊಂದರೆ ಕೊಡುತ್ತಿದ್ದಾರೆ. ನಿರಾಶ್ರಿತರಾದ ನಮಗೆ ಬೇರೆಡೆ ಮನೆ ನಿರ್ಮಿಸಿಕೊಳ್ಳಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಈ ಸ್ಥಳದಿಂದ ತೆರಳುವುದಿಲ್ಲ ಎಂದರು.

ಎಡೇಹಳ್ಳಿ ಗ್ರಾಮದ ಲಲಿತಮ್ಮ ಮಾತನಾಡಿ, ಪೂರ್ವಿಕರು ವಾಸಿಸುತ್ತಿದ್ದ ಜಾಗವನ್ನು ಎತ್ತಿನಹೊಳೆ ಕಾಮಗಾರಿಗಾಗಿ ಬಗೆದು ಹಾಕುತ್ತಿದ್ದಾರೆ. ಯಾವುದೇ ರೀತಿಯ ಪರಿಹಾರ ನೀಡದೆ ದಬ್ಬಾಳಿಕೆ ಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾತ್ರಿ ವೇಳೆ ಮದ್ದು ಸಿಡಿಸುವುದರಿಂದ ಮನೆಗಳು ಅಲುಗಾಡಿ ದಂತಾಗಿ, ವಸ್ತುಗಳು ನೆಲಕ್ಕುರುಳಿ ಬೀಳುತ್ತಿವೆ. ಆ ವೇಳೆ ಮಕ್ಕಳನ್ನು ಮನೆಯಿಂದ ಹೊರಗೆ ಕರೆತಂದು ಕುಳಿತುಕೊಳ್ಳುವ ಸ್ಥಿತಿ ಬಂದೊ ದಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ನಮಗೆ ಬೇರೆಡೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಜಮೀನಿನ ಪರಿಹಾರ ಕೊಡಿಸಬೇಕು. ಇಲ್ಲದಿದ್ದಲ್ಲಿ ಎತ್ತಿನಹೊಳೆ ಕಾಮಗಾರಿ ಹಾದುಹೋಗುವ ಗ್ರಾಮಸ್ಥರೊಂದಿಗೆ ತಾಲೂಕು ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸುನೀಲ್, ಪರಮೇಶ್, ಗಂಗಾ ಧರ್, ರುದ್ರೇಶ್, ಮಂಜುಳಾ, ಶಶಿಕಲಾ, ಗಾಯತ್ರಿ, ಚೆನ್ನಮ್ಮ, ಯಶೋದಾ, ಹೇಮಾವತಿ, ಧರ್ಮಯ್ಯ ಇತರರಿದ್ದರು.

Translate »