ಸಂಪನ್ಮೂಲವಿದ್ದೂ ಬಡತನ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ; ಹಾಸನ ನಗರಸಭೆ ವಿಶೇಷ
ಹಾಸನ

ಸಂಪನ್ಮೂಲವಿದ್ದೂ ಬಡತನ, ತೆರಿಗೆ ಸಂಗ್ರಹದಲ್ಲಿ ಹಿನ್ನಡೆ; ಹಾಸನ ನಗರಸಭೆ ವಿಶೇಷ

June 10, 2019

ಹಾಸನ: ಹಾಸನ ಎಂದರೆ ಸಾಮಾನ್ಯವಲ್ಲ, ಐತಿಹಾಸಿಕ, ಆಕರ್ಷಕ ಪ್ರವಾಸಿ ತಾಣಗಳಿಂದಾಗಿ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆ.

ಒಂದು ಮೂಲೆಯಲ್ಲಿ ಕಾಫಿ, ಇನ್ನೊಂದು ಮೂಲೆಯಲ್ಲಿ ಮಿಡಿಸೌತೆ, ಇನ್ನೊಂದೆಡೆ ಕೊಬ್ಬರಿ, ಮತ್ತೊಂದೆಡೆ ತಂಬಾಕು, ನಡುವೆ ಆಲೂಗಡ್ಡೆ… ಹಾಗಾಗಿ ಕೃಷಿಯಲ್ಲಿ ಶ್ರೀಮಂತ ಜಿಲ್ಲೆ ಎಂಬ ಹೆಗ್ಗಳಿಕೆ. ಆದರೆ, ಅಭಿವೃದ್ಧಿ ಯಲ್ಲಿ ಸಮಗ್ರತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲೂ ಬಹಳಷ್ಟು ಏರುಪೇರು ಎಂಬ ಆರೋಪ, ಅಸಮಾಧಾನದ ಮಾತುಗಳಿವೆ. ಹಾಸನದ ನಗರಸಭೆಯೂ ಇದಕ್ಕೆ ಹೊರತಾಗಿಲ್ಲ.

ಅದು ಈ ಬಾರಿ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದಿದೆ. ಕಳೆದ ಮಾ.31ಕ್ಕೆ ಕೊನೆಗೊಂಡ 2018-19ನೇ ಹಣಕಾಸು ವರ್ಷದಲ್ಲಿ ಕೇವಲ ಶೇ.45.98ರಷ್ಟು ಸಾಧನೆ ಮಾಡಿ ಕಳಪೆ ಸಾಧನೆ ತೋರಿದೆ.

ನಗರದಲ್ಲಿನ ವಾಣಿಜ್ಯ ಕಟ್ಟಡಗಳು, ಮನೆ, ನಿವೇಶನಗಳು ಮೊದಲಾದವುಗಳಿಂದ 2018ರ ಏ.1ರಿಂದ 2019ರ ಮಾ.31ರವರೆಗೆ ಒಟ್ಟು 8.46 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಬೇಕಿತ್ತು. ಆದರೆ, ಕೇವಲ 3.89 ಕೋಟಿ ರೂ. ಸಂಗ್ರಹಿಸುವುದಕ್ಕಷ್ಟೇ ಅದಕ್ಕೆ ಸಾಧ್ಯವಾಗಿದೆ. ಪರಿಣಾಮ ಒಟ್ಟು 4.57 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಾಗಿದೆ.
ನಗರಸಭೆಯಾಗಿ ಬಹಳ ವರ್ಷಗಳಾಗಿರುವುದರಿಂದ ಇನ್ನೇನು ನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಲಿದೆ ಎಂಬ ನಿರೀಕ್ಷೆ ಇರುವಾಗಲೇ ತೆರಿಗೆ ಸಂಗ್ರಹದಲ್ಲಿ ಕಳಪೆ ಸಾಧನೆ ತೋರಿರುವುದು ಸ್ಥಳೀಯ ಸಂಸ್ಥೆಯ ಪ್ರಗತಿಯ ಹಾದಿಗೆ ತೊಡಕಾಗಿ ಪರಿಣಮಿಸಿದೆ.
ತೆರಿಗೆ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಶ್ರಮಿಸುತ್ತಲೇ ಇದ್ದಾರೆ. ಆದರೆ, ಹಲವು ಪ್ರಭಾವಿಗಳು, ಸಿರಿವಂತರೇ ತೆರಿಗೆ ಪಾವತಿಸಲು ಮುಂದಾ ಗುತ್ತಿಲ್ಲ. ಇದರಿಂದಾಗಿಯೇ ದೊಡ್ಡ ಮೊತ್ತದ ತೆರಿಗೆ ಬಾಕಿಯಾಗುತ್ತಿದೆ ಎಂಬುದು ನಗರಸಭೆ ಅಧಿಕಾರಿಗಳ ಬೇಸರದ ನುಡಿ.

ಆಸ್ತಿ ತೆರಿಗೆ ವಿಚಾರದಲ್ಲಷ್ಟೇ ಅಲ್ಲ, ನೀರಿನ ಕರ ಸಂಗ್ರಹದಲ್ಲೂ ನಗರಸಭೆಯದು ಕಳಪೆ ಸಾಧನೆ. ಪ್ರತಿ ವರ್ಷ ಸರಾಸರಿ 3.50 ಕೋಟಿ ರೂ. ನೀರಿನ ತೆರಿಗೆ ಸಂಗ್ರಹವಾಗಬೇಕಿದೆ. ಆದರೆ, ಕಳೆದ ಹಣಕಾಸು ವರ್ಷದಲ್ಲಿ ಸಂಗ್ರಹವಾಗಿರುವುದು ಕೇವಲ 83.50 ಲಕ್ಷ ರೂ. ಮಾತ್ರ.

ಹಾಸನ ನಗರಸಭೆಗೆ ರಾಜ್ಯ ಸರ್ಕಾರದ ಅನುದಾನ, ಆಸ್ತಿ ತೆರಿಗೆ, ನೀರಿನ ಕರ, ಲೈಸೆನ್ಸ್ ಫೀ, ಪರ್ಮಿಟ್ ಫೀ, ನವೀಕರಣ ಶುಲ್ಕ, ವಿವಿಧ ಸೇವೆಗಳ ಶುಲ್ಕ ಎಂದು ಸಾಕಷ್ಟು ಹಣ ಸಂಗ್ರಹ ವಾಗುತ್ತದೆ. ಅಷ್ಟೇ ಅಲ್ಲದೇ ನಗರಸಭೆಯು ಸಂಪನ್ಮೂಲ ವಿಚಾರದಲ್ಲಿಯೂ ಕಡಿಮೆಯೇನೂ ಇಲ್ಲ. ಅದರ ಒಡೆತನದಲ್ಲಿ ಒಟ್ಟು 529 ವಾಣಿಜ್ಯ ಮಳಿಗೆಗಳಿವೆ. ಇವುಗಳಿಂದ ವರ್ಷಕ್ಕೆ ಕಡಿಮೆ ಎಂದರೂ 1.50 ಕೋಟಿ ರೂ. ಬಾಡಿಗೆ ಬರುತ್ತದೆ. ಆದರೆ, ನಗರಸಭೆ ಅಧಿಕಾರಿಗಳು ಈ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿಗೂ ಮನಸ್ಸು ಮಾಡುತ್ರಿಲ್ಲ. ಪರಿಣಾಮ ಕಳೆದ ವರ್ಷ 25.70 ಲಕ್ಷ ರೂ. ಮಾತ್ರವೇ ಬಾಡಿಗೆ ಸಂಗ್ರಹವಾಗಿದೆ. ಇದು ನಗರಸಭೆಯ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎನ್ನುತ್ತಾರೆ ನಾಗರಿಕರು.

* ಆಸ್ತಿ ತೆರಿಗೆ 8.46 ಕೋಟಿ ರೂ.
* ಸಂಗ್ರಹ 3.89 ಕೋಟಿ ರೂ.
* ತೆರಿಗೆ ಬಾಕಿ 4.57 ಕೋಟಿ ರೂ.
* ವಾಣಿಜ್ಯ ಮಳಿಗೆ ಬಾಡಿಗೆ 1.50 ಕೋಟಿ ರೂ.
* ಕಳೆದ ವರ್ಷ ವಸೂಲಿ 25.70 ಲಕ್ಷ ರೂ.

Translate »