ಮನೆ ಮಂಜೂರಿಗೆ ಹಣ ಕೇಳುವ ಅಧಿಕಾರಿಗಳು
ಹಾಸನ

ಮನೆ ಮಂಜೂರಿಗೆ ಹಣ ಕೇಳುವ ಅಧಿಕಾರಿಗಳು

June 13, 2019

ಅರಕಲಗೂಡು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಟಿಆರ್ ಬೇಸರ
ಅರಕಲಗೂಡು: ವಸತಿ ಯೋಜನೆ ಯಡಿ ಮನೆ ಮಂಜೂರು ಮಾಡುವುದಕ್ಕೆ ಫಲಾನು ಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಹೀಗಾದರೆ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಲುಪಿಸುವುದಾದರೂ ಹೇಗೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ ನಾಡಿದ ಅವರು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ಸವಲತ್ತುಗಳನ್ನು ಜನರಿಗೆ ಸೂಕ್ತ ರೀತಿಯಲ್ಲಿ ತಲುಪಿಸಬೇಕು. ಜನಸಾಮಾನ್ಯರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವಂತಾಗಬಾರದು. ಎಲ್ಲ ಇಲಾಖೆಗಳ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಕಳಪೆ ಕಾಮಗಾರಿ: ಎನ್‍ಆರ್‍ಜಿ ಯೋಜನೆ ಯಡಿ ನಡೆಸುತ್ತಿರುವ ರಸ್ತೆ ಕಾಮಗಾರಿಗಳು ಕಳಪೆ ಗುಣಮಟ್ಟದವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕರು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸುವತ್ತಲೂ ಗಮನ ಕೇಂದ್ರೀಕರಿಸಿ ಎಂದು ಬುದ್ಧಿಮಾತು ಹೇಳಿದರು.

ಆಹಾರ ಲೋಪ: ಶಿಶು ಅಭಿವೃದ್ಧಿ ಇಲಾಖೆಯು ಅಂಗನವಾಡಿ ಮಕ್ಕಳಿಗೆ ಒದಗಿಸುವ ಪೂರಕ ಪೌಷ್ಟಿಕ ಆಹಾರದ ಸರಬರಾಜಿನಲ್ಲಿ ಲೋಪಗಳಿದ್ದು, ಕಂಡುಬಂದಿದೆ. ಇದರಿಂದಾಗಿ ಹಣ ಸೋರಿಕೆ ಯಾಗುತ್ತಿತ್ತು. ನಾನು ಶಾಸಕನಾದ ಪ್ರಾರಂಭದಲ್ಲಿ ಘಟಕದ ಗೋದಾಮಿಗೆ ಭೇಟಿ ನೀಡಿದ್ದಾಗ ಈ ಅವ್ಯವಸ್ಥೆ ಕಂಡುಬಂದಿತ್ತು. ಈ ಕುರಿತು ಗಮನಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಮಂಜೂರಾಗಿರುವ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

ತಾಲೂಕಿನಲ್ಲಿ ಸ್ಮಶಾನಕ್ಕೆ ಹಾಗೂ ಸ್ವಂತ ಕಟ್ಟಡ ಇಲ್ಲದ ಶಾಲೆಗಳಿಗೆ ಭೂಮಿ ಗುರುತಿಸುವಂತೆ, ಸಹಕಾರ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸಹಕಾರ ಸಂಘಗಳ ಕರ್ತವ್ಯ ಕುರಿತು ಪರಿಶೀಲನೆ ನಡೆಸಿ ಸಮಸ್ಯೆಗಳಿದ್ದರೆ ಬಗೆಹರಿಸುವಂತೆ ಹೇಳಿದರು. ತಾಲೂಕಿನ ಮಲ್ಲಿಪಟ್ಟಣ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುರಾರ್ಜಿ ವಸತಿ ಶಾಲೆಯಲ್ಲಿ ಶೌಚಗೃಹಗಳು ಹಾಳಾಗಿದ್ದು ಅವುಗಳನ್ನು ದುರಸ್ತಿ ಪಡಿಸಲು ಸೂಚಿಸಿದರೂ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು. ತಹಸೀಲ್ದಾರ್ ಶಿವರಾಜ್, ತಾಪಂ ಇಒ ಡಾ. ಯಶ್ವಂತ್ ಹಾಜರಿದ್ದರು.

ಪೊಲೀಸ್-ಕೆಎಸ್‍ಆರ್‍ಟಿಸಿಗೆ ಕಿವಿಮಾತು
ಕೆಲವು ಠಾಣೆಗಳಲ್ಲಿ ಪೆÇಲೀಸರು ತಮ್ಮ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ ಎಂಬ ಬಗ್ಗೆ ಬಹಳಷ್ಟು ದೂರು ಬಂದಿವೆ. ಅಂತಹ ಅಧಿಕ ಪ್ರಸಂಗಿಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಸಿಪಿಐ ದೀಪಕ್ ತಕ್ಷಣ ಕೈಗೊಳ್ಳಬೇಕು. ಕೆಎಸ್‍ಆರ್‍ಟಿಸಿ ಬಸ್ ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಕೆಲ ಚಾಲಕರು, ನಿರ್ವಾಹಕರು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಬಸ್‍ಗೆ ಹತ್ತಿಸಲು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಡಿಪೆÇೀ ಮ್ಯಾನೇಜರ್ ತಕ್ಷಣವೇ ಕ್ರಮವಹಿಸಬೇಕು.
– ಎ.ಟಿ.ರಾಮಸ್ವಾಮಿ, ಶಾಸಕ

Translate »