ಅಮ್ಮನಿಂದ ಬೇರ್ಪಟ್ಟು ತಂತಿ ಬೇಲಿಗೆ ಸಿಲುಕಿದ್ದ 2 ಕರಡಿ ಮರಿಗಳ ರಕ್ಷಣೆ
ಹಾಸನ

ಅಮ್ಮನಿಂದ ಬೇರ್ಪಟ್ಟು ತಂತಿ ಬೇಲಿಗೆ ಸಿಲುಕಿದ್ದ 2 ಕರಡಿ ಮರಿಗಳ ರಕ್ಷಣೆ

June 20, 2019

* ಅರಸೀಕೆರೆ ತಾಲೂಕಿನ ಜಾಜೂರು ಬಳಿ ಘಟನೆ
* ತೋಟದಲ್ಲಿ ಹಂದಿ ಹಿಡಿಯಲು ಅಳವಡಿಸಿದ್ದ ಕುಣಿಕೆ
ಅರಸೀಕೆರೆ, ಜೂ.19- ಅರಸೀಕೆರೆ ತಾಲೂಕಿನ ಜಾಜೂರು ವ್ಯಾಪ್ತಿಯ ತೋಟ ವೊಂದರ ತಂತಿ ಬೇಲಿಯಲ್ಲಿ ಅಳವಡಿಸಿದ್ದ ಹಿಂದೆ ಬೇಟೆ ಕುಣಿಕೆಗೆ ಸಿಲುಕಿದ 2 ಕರಡಿ ಮರಿಗಳು, ಕುಣಿಕೆಯಿಂದ ಬಿಡಿಸಿಕೊಳ್ಳಲಾಗದೇ ಇಡೀ ರಾತ್ರಿ ನರಳಾಡಿವೆ. ಬುಧವಾರ ಬೆಳಿಗ್ಗೆ ವಿಷಯ ತಿಳಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಕರಡಿಗಳನ್ನು ರಕ್ಷಿಸಿ ಅರಣ್ಯಕ್ಕೆ ಸಾಗಿಸಿದ್ದಾರೆ.

ಆಹಾರ ಅರಸುತ್ತಾ ಮಂಗಳವಾರ ರಾತ್ರಿ ಜಾಜೂರು ಕಡೆ ಬಂದ ಎರಡು ಕರಡಿ ಮರಿಗಳು ತಂತಿ ಬೇಲಿ ದಾಟುವ ಯತ್ನದಲ್ಲಿ ಕುಣಿಕೆಗೆ ಸಿಲುಕಿಕೊಂಡಿವೆ. ಬೆಳಿಗ್ಗೆ ಕರಡಿಗಳ ನರಳಾಟ ಕಿರುಚಾಟ ಕೇಳಿಸಿಕೊಂಡ ಜನರು ತೋಟದ ಬಳಿ ಬಂದು ನೋಡಿದಾಗ ಎರಡು ಕರಡಿಗಳು ಕಂಡಿವೆ. ಸಮೀಪಕ್ಕೆ ಹೋಗದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಮತ್ತು ವೈದ್ಯರು ಹಾಗೂ ಸಿಬ್ಬಂದಿ ಎರಡೂ ಕರಡಿ ಮರಿಗಳನ್ನು ರಕ್ಷಿಸಿದ್ದಾರೆ.

ಈ ಸಂದರ್ಭ ಮಾತನಾಡಿದ ಚನ್ನರಾಯಪಟ್ಟಣ ಅರಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್, ಹಂದಿ ಹಿಡಿಯಲು ಹಾಕಿದ್ದ ತಂತಿ ಉರುಳಿಗೆ ಈ ಕರಡಿಗಳು ಸಿಕ್ಕಿಕೊಂಡಿವೆ. ತಂತಿ ಉರುಳು ಅಳವಡಿಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ರಕ್ಷಿಸಿರುವ ಕರಡಿಗಳಿಗೆ ಪುನಃ ಚಿಕಿತ್ಸೆ ನೀಡಿ ಬಳಿಕ ಕಾಡಿಗೆ ಕಳುಹಿಸಲಾಗುವುದು ಎಂದರು.

ಪಶುವೈದ್ಯ ಮುರಳೀಧರ್ ಮಾತನಾಡಿ, ಒಂದೂವರೆ ಎರಡು ವರ್ಷದ ಗಂಡು ಮತ್ತು ಹೆಣ್ಣು ಕರಡಿ ಮರಿಗಳು ಎರಡೂ ಬಹುಶಃ ತಾಯಿಯೊಡನೆ ಬರುವಾಗ ಬೇರ್ಪಟ್ಟಿವೆ. ಅದೃಷ್ಟವಶಾತ್ ಎರಡೂ ಮರಿಗಳಿಗೆ ಯಾವುದೇ ತೀವ್ರ ಪೆಟ್ಟುಗಳು ಆಗಿಲ್ಲ ಎಂದರು.

ಅರಸೀಕೆರೆ ವಲಯ ಅರಣ್ಯಾಧಿಕಾರಿ ದಯಾನಂದ್, ಉಪ ಅರಣ್ಯವಲಯಾ ಧಿಕಾರಿ ರಾಜಪ್ಪ, ಅರಣ್ಯ ರಕ್ಷಕ ಪುನೀತ್, ಉಮೇಶ್, ದಿಲೀಪ್ ಕುಮಾರ್, ಸ್ವಾಮಿನಾಯ್ಕ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.

Translate »