ಹಾಸನ, ಜೂ.19- ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರ, ಜನಸಾಮಾನ್ಯರ ಶ್ರೇಯೋಭಿವೃದ್ಧಿ ಹಾಗೂ ರಾಜ್ಯದ ಸಮಗ್ರ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ನೂತನ ಹಾಸನ ವಲಯ ಮತ್ತು ಮಾಪಕ ಪರೀಕ್ಷಾ ವಿಭಾಗವನ್ನು ಉದ್ಘಾಟಿಸಿದ ಅವರು, ನಿರಂತರ ವಿದ್ಯುತ್ ಪೂರೈಕೆ ಕೂಡ ಸರ್ಕಾರದ ಆದ್ಯತೆಗಳಲ್ಲೊಂದು ಎಂದರು.
ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯ ಮಿತ ಮುಖ್ಯ ಇಂಜಿನಿಯರಿಂಗ್ ಕಚೇರಿ ಹಾಸನದಲ್ಲಿ ಪ್ರಾರಂಭವಾಗುವುದರಿಂದ ಹೆಚ್ಚಿನ ಆಡಳಿತಾತ್ಮಕ ಅನುಕೂಲಗಳು ಆಗಲಿವೆ. ಈಗಾಗಲೇ ಜಿಲ್ಲೆಯ ಅಗತ್ಯವಿ ರುವ ಅನೇಕ ಕಡೆಗಳಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರಗಳನ್ನು ತೆರೆಯಲಾಗಿದೆ. ಶೀಘ್ರದಲ್ಲಿ ಕೇಂದ್ರಗಳನ್ನು ಪ್ರಾರಂಭಿಸುವ ಮೂಲಕ ಎಲ್ಲಾ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗು ವುದು ಎಂದು ಸಚಿವರು ಭರವಸೆ ನೀಡಿದರು.
ಶಿಕ್ಷಣಕ್ಕೆ ಆದ್ಯತೆ: ಜಿಲ್ಲೆಯು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಬಡವರ ಮಕ್ಕಳಿಗಾಗಿ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಸಂತೆಪೇಟೆ, ಚಿಪ್ಪಿನಕಟ್ಟೆ ಹೌಸಿಂಗ್ ಬೋರ್ಡ್‍ನಲ್ಲಿ ಈ ವರ್ಷದಿಂದ ಪಬ್ಲಿಕ್ ಶಾಲೆಗಳನ್ನು ತೆರೆಯಲು ತೀರ್ಮಾನಿಸ ಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಎಂಡಿ ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಜಿಪಂ ಸಿಇಒ ವಿಜಯ ಪ್ರಕಾಶ್, ಎಸ್‍ಪಿ ಪ್ರಕಾಶ್ ಗೌಡ, ಸೆಸ್ಕ್ ನಿರ್ದೇಶಕ ಆಫ್ತಾಬ್ ಅಹಮದ್, ಮುಖ್ಯ ಅರ್ಥಿಕ ಅಧಿಕಾರಿ ಎ.ಶಿವಣ್ಣ, ಮೈಸೂರು ವಲಯದ ಮುಖ್ಯ ಇಂಜಿನಿಯರ್ ಎಂ.ಟಿ.ಮಂಜುನಾಥ್, ಮುಖ್ಯ ಇಂಜಿ ನಿಯರ್‍ಗಳಾದ ಆರ್.ಎಸ್.ನರೇಂದ್ರ, ಅಧೀಕ್ಷಕ ಇಂಜಿನಿಯರ್ ಸುಚೇತನ, ಕೆಪಿಟಿಸಿಎಲ್‍ನ ಮುಖ್ಯ ಅಭಿಯಂತರ ಕೊಟ್ರೇಶ್ ಮತ್ತಿತರರು ಹಾಜರಿದ್ದರು.
ರುದ್ರಪಟ್ಟಣದಲ್ಲಿ 66/11 ಕೆವಿ ಉಪ ಕೇಂದ್ರ ಉದ್ಘಾಟನೆ
ಗ್ರಾಮೀಣ ಭಾಗದಲ್ಲಿನ ವಿದ್ಯುತ್ ಸಮಸ್ಯೆ ನಿವಾರಿಸಲೆಂದೇ ಜಿಲ್ಲೆಯಲ್ಲಿ 48 ಉಪ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಆ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.
ಸಮೀಪದ ರುದ್ರಪಟ್ಟಣದಲ್ಲಿ 5.27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ 66/11 ಕೆವಿ ವಿದ್ಯುತ್ ಉಪ ಕೇಂದ್ರ ಉದ್ಘಾಟಿಸಿದ ಅವರು, 2006ರಲ್ಲಿ ಈ ಉಪ ಕೇಂದ್ರ ನಿರ್ಮಾಣ ಕೈಗೆತ್ತಿ ಕೊಳ್ಳಲಾಗಿತ್ತು. 12 ವರ್ಷದ ಬಳಿಕ ಉದ್ಘಾಟಿಸುವ ಭಾಗ್ಯ ನನಗೇ ದೊರೆತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ 50 ವರ್ಷಗಳಲ್ಲಿ ಕೇವಲ 450 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ನಾನು ಇಂಧನ ಸಚಿವನಾಗಿ 3 ವರ್ಷಗಳ ಆಡಳಿತಾವÀಧಿಯಲ್ಲಿ 500 ಉಪ ಕೇಂದ್ರಗಳನ್ನು ಸ್ಥಾಪಿಸಿದ್ದೇನೆ. ಜಿಲ್ಲೆಯಲ್ಲಿ ಉಪ ಕೇಂದ್ರಗಳ ಸಂಖ್ಯೆ 22ರಿಂದ 40ಕ್ಕೇರಿದೆ. ಜಿಲ್ಲೆಯ ಕುಂದೂರು ಮಠ, ಗಂಗೂರು ಹಾಗೂ ಬೇಲೂರು ತಾಲೂಕಿನಲ್ಲಿ 4 ಮತ್ತು ಸಂತೆಮರೂರು, ಬೆಳವಾಡಿ, ದೊಡ್ಡಬೆಮ್ಮತ್ತಿಯಲ್ಲಿ ತಲಾ 1 ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದರು.
ರುದ್ರಪಟ್ಟಣದ ವಿದ್ಯುತ್ ಉಪ ಕೇಂದ್ರವು ಹನ್ಯಾಳು, ಆನಂದೂರು, ಗಂಗೂರು, ಸೋಪುರ, ಲಕ್ಕೂರು, ಮಲ್ಲಾಪುರ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲಿದೆ. ಅಲ್ಲದೇ ರಾಮನಾಥಪುರ ಕೇಂದ್ರದ ಹೊರೆಯನ್ನು ಶೇ.75ರಷ್ಟು ಕಡಿಮೆ ಮಾಡಲಿದೆ. 11 ಕೆ.ವಿ. ಮಾರ್ಗದಲ್ಲಾಗುವ ವಿದ್ಯುತ್ ನಷ್ಟವೂ ತಗ್ಗಲಿದೆ. ವೋಲ್ಟೇಜ್ ಏರುಪೇರು ಸಮಸ್ಯೆ ಸಹ ನಿವಾರಣೆ ಯಾಗಲಿದೆ ಎಂದು ವಿವರಿಸಿದರು.
ರುದ್ರಪಟ್ಟಣ ಸೇತುವೆ ನಿರ್ಮಾಣಕ್ಕೆ ನನ್ನ ಅಧಿಕಾರವಧಿ ಯಲ್ಲೇ 5 ಕೋಟಿ ರೂ. ಮಂಜೂರು ಮಾಡಿಸಿದ್ದೆ. ಮಲ್ಲಾಪುರ ದೇವಸ್ಥಾನ ಅಭಿವೃದ್ದಿ ಹಾಗೂ ರಾಮನಾಥಪುರ ರಾಮೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿಯನ್ನು ಶಾಸಕ ರಾಮಸ್ವಾಮಿ ಅವರೇ ಮಾಡಿಸಿಕೊಡಲಿದ್ದಾರೆ ಎಂದರು.
ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿಗೆ ಮತ್ತೊಂದು ಹೆಸರು ರೇವಣ್ಣ, ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಂಜೂರು ಮಾಡಿಸಿದ್ದಾರೆ. ಕೇರಳಾಪುರ ಊರೊಳಿಗೆ ರಸ್ತೆಗಳ ಅಭಿವೃದ್ಧಿಗೆ 5 ಕೋಟಿ ರೂ, ಬಸವಾಪಟ್ಟಣ 1.80 ಕೋಟಿ ರೂ, ಕೊಣನೂರಿಗೆ 4 ಕೋಟಿ ರೂ ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾ ಉಸ್ತುವರಿ ಸಚಿವ ರೇವಣ್ಣ ಅವರು ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂದರು.
ಹಾಸನ ಸೆಸ್ಕ್ ವಿಭಾಗದ ಮುಖ್ಯ ಇಂಜಿನಿಯರ್ ಕೋಟ್ಟೇಶ್ ತಳಸ್ತ, ಅಧೀಕ್ಷಕ ಇಂಜಿನಿಯರಿಂಗ್ ಉಮೇಶ್, ತಹಸೀಲ್ದಾರ್ ಶಿವರಾಜ್, ತಾಪಂ ಇಒ ಯಶ್ವಂತ್, ರಾಮನಾಥಪುರ ಸಹಾ ಯಕ ಕಾರ್ಯಪಾಲಕ ಇಂಜಿನಿಯರ್ ಚಿನ್ನಸ್ವಾಮಿ, ಪ್ರದೀಪ್ ಮುಂತಾದವರು ಹಾಜರಿದ್ದರು.
ಸಂತಸ- ಮೆಚ್ಚುಗೆ: ರುದ್ರಪಟ್ಟಣಕ್ಕೆ ಸಂಗೀತ ವಿದ್ವಾಂಸರು, ಕಲಾವಿದರು ಬಂದು ಹೋಗುತ್ತಿರುತ್ತಾರೆ. ವಾರಗಟ್ಟಲೆ ಸಂಗೀತೋತ್ಸವ ನಡೆಯುವ ವೇಳೆ ನಿರಂತರ ವಿದ್ಯುತ್ ಬಹಳ ಅವಶ್ಯಕ. ಅದರೆ ಇಲ್ಲಿಗೆ ಬೇಕಾದ ವಿದ್ಯುತ್ ಸೌಕರ್ಯ ನೀಡುತ್ತಿಲ್ಲ ಎಂಬ ಅರೋಪ ವಿತ್ತು. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಹಾಗೂ ಶಾಸಕ ಎ.ಟಿ.ರಾಮಸ್ವಾಮಿ ಅವರು ಮುತುವರ್ಜಿ ವಹಿಸಿ ಸಂಗೀತ ಗ್ರಾಮದಲ್ಲಿ ವಿದ್ಯುತ್ ವಿತರಣಾ ಉಪ ಕೇಂದ್ರ ಆರಂಭಿಸಿರುವುದು ಸಂತಸದ ಸಂಗತಿ. ಗ್ರಾಮದ ಬಹುದಿನದ ಆಸೆ ಈಡೇರಿದೆ ಎಂದು ಸಂಗೀತ ವಿದ್ವಾನ್ ಅರ್.ಕೆ.ಪದ್ಮನಾಭ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಸದ ಗೈರು!
ಹಾಸನದಲ್ಲಿ ಸೆಸ್ಕ್ ವಲಯ ಕಚೇರಿ ಮತ್ತು ರುದ್ರಪಟ್ಟಣದಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರೇ ನೆರವೇರಿಸಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ನೂತನ ಸಂಸದ ಪ್ರಜ್ವಲ್ ರೇವಣ್ಣ ಉಪಸ್ಥಿತರಿರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎರಡೂ ಕಾರ್ಯಕ್ರಮಗಳಲ್ಲಿ ಮೂವರ ಗೈರು ಹಾಜರಿ ಎದ್ದು ಕಂಡಿತು.
ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಹೇಮಾವತಿ ಜಲಾಶಯದ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕಿದೆ. ಜಿಲ್ಲೆಯ 8 ತಾಲೂಕುಗಳಲ್ಲಿ ಬರ ಅವರಿಸಿದ್ದು, ಎಲ್ಲ ತಾಲೂಕು ಗಳನ್ನು ಬರ ಪೀಡಿತ ಎಂದು ಘೋಷಿಸುವಂತೆ, ತಾಲೂಕಿಗೆ ತಲಾ 5 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದರಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತಿತರ ಪರಿಹಾರ ಕ್ರಮ ಕೈಗೊಳ್ಳಲು ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ.- ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವರು