ಭೂ ಮಾಲೀಕರಿಗೆ 50:50 ನಿವೇಶನ ಹಂಚಿಕೆ
ಹಾಸನ

ಭೂ ಮಾಲೀಕರಿಗೆ 50:50 ನಿವೇಶನ ಹಂಚಿಕೆ

June 27, 2019

ರೈತರ ಸಮ್ಮತಿ ಪಡೆದೇ ಬಡಾವಣೆ ಅಭಿವೃದ್ಧಿ: ಸಚಿವ ರೇವಣ್ಣ

ಹಾಸನ,ಜೂ.26- ಯಾವ ರೈತರು ಸ್ವಯಂ ಪ್ರೇರಣೆಯಿಂದ ಜಮೀನನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ನಿವೇಶನಗಳ ಅಭಿವೃದ್ಧಿಗೆ ಬಿಟ್ಟುಕೊಡಲು ಬಯಸುತ್ತಾರೆ ಅವ ರಿಂದಷ್ಟೇ ಭೂಮಿ ಪಡೆದು ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿಯಾದ ಬಡಾವಣೆಯಲ್ಲಿ 50:50ರ ಅನುಪಾತದಲ್ಲಿ ಭೂಮಾಲೀಕರಿಗೆ ನಿವೇ ಶನಗಳನ್ನು ಹಂಚಿಕೆ ಮಾಡಲಾ ಗುವುದು ಎಂದು ಸಚಿವರು ತಿಳಿಸಿದರು.

ಭೂಮಿ ನೀಡಲು ಬಯಸದ ರೈತರಿಗೆ ಒತ್ತಾಯವಿಲ್ಲ. ಅವರು ಆ ಭೂಮಿಯಲ್ಲಿ ಕೃಷಿ ಮುಂದುವರೆಸಬಹುದು. ಆದರೆ 1-2 ಗುಂಟೆ ಲೆಕ್ಕದಲ್ಲಿ ಜಮೀನುಗಳನ್ನು ನಿವೇಶನಗಳನ್ನಾಗಿ ತುಂಡರಿಸಿ ಮಾರು ವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟ ಸೂಚನೆ ನೀಡಿದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿಯಿಂದ ನಗರದ ಹೊರ ವಲಯದಲ್ಲಿ ಉದ್ದೇಶಿತ ನೂತನ ಬಡಾವಣೆಗಳ ಅಭಿವೃದ್ಧಿ ಸಂಬಂಧ ಸಚಿವರು ಬುಧವಾರ ಸುದೀರ್ಘ ಸಭೆ ನಡೆಸಿದರು. ಈ ಸಂದರ್ಭ ತಂಡಗಳಾಗಿ ರೈತರು, ಭೂಮಾಲೀಕರು ಸಭೆಗೆ ಆಗ ಮಿಸಿದರು. ಅವರೆಲ್ಲರ ಅಭಿಪ್ರಾಯ ಗಳನ್ನು ಸಚಿವರು ಆಲಿಸಿದರು.

ರೈತರ ಹಿತರಕ್ಷಣೆಗೇ ಆದ್ಯತೆ. ಹಿಂದೆಯೂ ಇದೇ ಕ್ರಮ ಅನುಸರಿಸಿದ್ದೇವೆ. ಎಲ್ಲರ ಸಹಕಾರದೊಂದಿಗೆ ಬಡಾವಣೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಜಮೀನು ಬಿಟ್ಟುಕೊಟ್ಟವರಿಗೆ ಮೊದಲ ಆದ್ಯತೆ ಮೇರೆಗೆ ಮುಂದಿನ 4 ತಿಂಗಳೊಳ ಗಾಗಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬೇಕು. ನಂತರ ಒಟ್ಟಾರೆ ಬಡಾವಣೆ ನಿರ್ಮಿಸಿ ಅರ್ಜಿ ಸಲ್ಲಿಸಿದ ನಿವೇಶನ ರಹಿತರಿಗೆ ಸೈಟ್‍ಗಳನ್ನು ವಿತರಿಸ ಬೇಕು. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿ ಅಧಿಕಾರಿಗಳು ವಿಶೇಷವಾಗಿ ಗಮನ ಹರಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಬಡಾವಣೆ ಅಭಿವೃದ್ಧಿ ವೇಳೆ ಬರುವ ವಾಣಿಜ್ಯ ಉದ್ದೇಶದ ನಿವೇಶನಗಳಲ್ಲಿ ಕೆಲವನ್ನು ಭೂಮಾಲಿಕರಿಗೆ ಮೀಸಲಿಡ ಬೇಕು. ವಾಣಿಜ್ಯ ನಿವೇಶನಗಳ ಹರಾಜನ್ನು ಪ್ರತ್ಯೇಕವಾಗಿ ನಡೆಸಬೇಕು. ರೈತರ ಹಿತ ಕಾಯುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೆಲಸ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಶಾಸಕರಾದ ಪ್ರೀತಂ ಗೌಡ, ಬಾಲಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ ಮಾತನಾಡಿ, ಭೂಮಾಲಿಕರ ಸಮ್ಮತಿ ಪಡೆದೇ ನಿವೇಶನಗಳನ್ನು ಅಭಿವೃದ್ಧಿ ಪಡಿಸುವುದು ಹೆಚ್ಚು ಸಮಂಜಸ. ಇದು ರಚನಾತ್ಮಾಕ ಪ್ರಯತ್ನವಾಗಲಿದೆ ಎಂದರು.

ಭೂವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಜಮೀನು ಕೊಡಲು ಸಿದ್ದವಿದ್ದು ಸಮ್ಮತಿ ಪತ್ರಕ್ಕೆ ಸಹಿ ಹಾಕಿ ದ್ದಾರೆ. ನೂತನ ಬಡಾವಣೆಯಲ್ಲಿ ದೊಡ್ಡ ದಾದ ರಸ್ತೆಗಳಿಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ವಿಶೇಷ ಭೂಸ್ವಾಧಿನಾಧಿಕಾರಿ ಗಿರೀಶ್ ನಂದನ್, ಶ್ರೀನಿವಾಸಗೌಡ, ನಗರಾಭಿವೃದ್ಧಿ ಆಯುಕ್ತ ರಮೇಶ್ ಹಾಗೂ ಗೃಹ ಮಂಡಳಿ ಇಂಜಿನಿಯರ್‍ಗಳು ಹಾಜರಿದ್ದರು.

ಕಮರ್ಷಿಯಲ್ ಮಾಲ್

ಈ ಬಗ್ಗೆ ಬಡಾವಣೆ ಅಭಿವೃದ್ಧಿ ವೇಳೆ ಗಮನ ಹರಿಸುವುದಾಗಿ ತಿಳಿಸಿದ ಸಚಿವರು, ಒಂದೇ ಜಾಗದಲ್ಲಿ ಎಲ್ಲಾ ವಸ್ತುಗಳು ಸಿಗುವಂತಹ ದೊಡ್ಡ ವಾಣಿಜ್ಯ ಮಾರಾಟ ಮಳಿಗೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಗೃಹ ಮಂಡಳಿ ವತಿಯಿಂದಲೇ ನಿರ್ಮಿಸಿ ಬಾಡಿಗೆಗೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಎಲ್ಲೆಲ್ಲಿ ಬಡಾವಣೆ?

ಭೂವನಹಳ್ಳಿ, ನಿಡೂಡಿ, ದೊಡ್ಡಕುಂದಗೊಳ, ಚಿಟ್ಟನಹಳ್ಳಿ, ರಾಂಪುರ, ದೊಡ್ಡ ಹೊನ್ನೆನಹಳ್ಳಿ ಹಾಗೂ ಯಡಿಯೂರು ಗ್ರಾಮಗಳಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಡುವ ಭೂಮಿಯಲ್ಲಿ ಹೊಸ ಬಡಾವಣೆಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಗೃಹ ಮಂಡಳಿಯಿಂದ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ನಡೆಯಲಿದೆ.

 

Translate »