ವಿದ್ಯುತ್ ಗುತ್ತಿಗೆ ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ವಿರೋಧ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್
ಮೈಸೂರು

ವಿದ್ಯುತ್ ಗುತ್ತಿಗೆ ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ವಿರೋಧ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್

May 30, 2020

ಮೈಸೂರು, ಮೇ 29(ಆರ್‍ಕೆಬಿ)- ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕಾಯ್ದೆ 2020ರಡಿ ಉದ್ದೇ ಶಿತ `ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ’ ರಚನೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಭವನ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುತ್ತಿಗೆದಾರರ ಹಿತ ಕಾಪಾಡಲು ಅರೆ ನ್ಯಾಯಾಂಗ ಪ್ರಾಧಿಕಾರ ರಚಿಸಲಾಗುತ್ತಿದೆ. ವಿದ್ಯುತ್ ವಿತರಣ ಜಾಲವನ್ನು ಖಾಸಗೀಕರಣ ಗೊಳಿಸುವುದು, ಸಬ್ಸಿಡಿ ಸಂಪೂರ್ಣ ಸ್ಥಗಿತಗೊಳಿಸಲು ಈ ಕಾಯ್ದೆ ತರಲಾಗುತ್ತಿದೆ. ದೇಶದ ಎಲ್ಲಾ ಇಂಜಿನಿಯರು ಗಳು ಮತ್ತು ಇತರೆ ನೌಕರರು ಖಾಸಗಿ ಸಂಸ್ಥೆಗಳ ವ್ಯಾಪ್ತಿಗೆ ಬರಲಿದ್ದು, ನೌಕರರು ಖಾಸಗಿ ಕಂಪನಿಗಳ ನೀತಿಗಳಿಗೆ ಒಳಪಡುತ್ತಾರೆ. ಕಾಯ್ದೆ ಜಾರಿಯಾದರೆ ರಾಜ್ಯ ಸರ್ಕಾರ ನೀರಾವರಿ ಪಂಪ್‍ಸೆಟ್‍ಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸಂಪರ್ಕಗಳಿಗೆ ನೀಡುತ್ತಿರುವ ಸಹಾಯಧನ ಪೂರ್ಣ ಬಂದ್ ಆಗುತ್ತದೆ. ಸಾಮಾನ್ಯ ಗ್ರಾಹಕರು ಹಾಲಿ ಪ್ರತಿ ಯೂನಿಟ್‍ಗೆ ನೀಡುತ್ತಿರುವ 7 ರೂ. ಮುಂದೆ 15 ರೂ.ಗಳಿಗೆ ಏರಿಕೆಯಾಗಲಿದೆ. ಇಂತಹ ಕಾಯ್ದೆಯಿಂದ ಜನರಿಗೆ ಅನುಕೂಲವಾಗುವ ಬದಲು ಹೆಚ್ಚು ತೊಂದರೆಯಾಗಲಿದೆ ಎಂದು ಹೇಳಿದರು.

ವಿದ್ಯುತ್ ಸರಬರಾಜು ಮಂಡಳಿಗಳು ಇನ್ನು ಮುಂದೆ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿರುವುದಿಲ್ಲ. ಇಂಧನ ಸಚಿವರೂ ಇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅದಾನಿಗೆ ದೇಶಾದ್ಯಂತ ಗುತ್ತಿಗೆ ನೀಡಲು ಹೊರಟಿದ್ದಾರೆ. ಹಾಗಾಗಿ ಖಾಸಗೀಕರಣ ಮಾಡಲು ಹೊರಟಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾ ಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಇನ್ನಿತರರಿದ್ದರು.

Translate »