ಅಯೋಧ್ಯ ರಾಮ ಜನ್ಮಭೂಮಿಯನ್ನು ಬೌದ್ಧ ಸ್ಮಾರಕವಾಗಿ ಘೋಷಿಸಿ
ಮೈಸೂರು ಗ್ರಾಮಾಂತರ

ಅಯೋಧ್ಯ ರಾಮ ಜನ್ಮಭೂಮಿಯನ್ನು ಬೌದ್ಧ ಸ್ಮಾರಕವಾಗಿ ಘೋಷಿಸಿ

June 11, 2020

ನಂಜನಗೂಡು, ಜೂ.10(ರವಿ)-ಅಯೋಧ್ಯೆ ರಾಮಮಂದಿರ ಭೂಮಿಯನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಿ ಉತ್ಖನನದ ವೇಳೆ ದೊರತಿರುವ ಭೌದ್ಧಾವಶೇಷಗಳನ್ನು ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಜನಸಂಗ್ರಾಮ ಪರಿಷತ್ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಸುಪ್ರೀಂ ಕೋರ್ಟ್‍ನ ತೀರ್ಪಿನಂತೆ ಅಯೋಧ್ಯೆ ನೆಲದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಆ ಸ್ಥಳದ ಉತ್ಖನನದ ವೇಳೆಯಲ್ಲಿ ಬೌದ್ಧಾವಶೇಷಗಳು ಮತ್ತು ಬೌದ್ಧ ಕಲಾಕೃತಿಗಳು ದೊರೆತಿವೆ. ಅಲ್ಲದೆ ಭಾರತ ಸರ್ಕಾರದ ಪುರತತ್ವ ಇಲಾಖೆ ಮೊಟ್ಟ ಮೊದಲ ಸಮೀಕ್ಷೆಯಲ್ಲಿ ಅಯೋಧ್ಯೆ ಬೌದ್ಧ ನೆಲೆಯಾಗಿತ್ತು ಎಂದು ವರದಿಯಲ್ಲಿ ಹೇಳಿದೆ. ಜೊತೆಗೆ ಬೌದ್ಧ ಕಾಲದಲ್ಲಿ ಅಯೋಧ್ಯೆಯನ್ನು ಸಾಕೇತ ಎಂದು ಕರೆಯಲಾಗುತ್ತಿದ್ದು, ಇದು ಬೌದ್ಧರ ಪ್ರಮುಖ ಶ್ರದ್ಧಾ ಕೇಂದ್ರವಾಗಿತ್ತು ಎಂದು ಅನೇಕ ಇತಿಹಾಸ ತಜ್ಞರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬರಿ ಮಸೀದಿಯನ್ನು ಬೌದ್ಧ ವಿಹಾರದ ಮೇಲೆ ನಿರ್ಮಿಸಲಾಗಿತ್ತು. ಹಿಂದೂ ದೇವಾಲಯದ ಮೇಲಲ್ಲ ಎಂದು ತಿಳಿಯಬಹುದು. ಆಗಾಗಿ ರಾಷ್ಟ್ರಪತಿಗಳು ಮಧ್ಯೆಪ್ರವೇಶಿಸಿ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡಿ, ಅಯೋಧ್ಯೆ ರಾಮ ಜನ್ಮ ಭೂಮಿಯನ್ನು ಪ್ರಾಚೀನಾ ಬೌದ್ಧಸ್ಮಾರಕ ಎಂದು ಘೋಷಿಸಿ, ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ತಹಸೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಇದೇ ವೇಳೆಯಲ್ಲಿ ಜನಸಂಗ್ರಾಮ ಪರಿಷತ್‍ನ ನಗರ್ಲೆ ವಿಜಯಕುಮಾರ್, ದಸಂಸ ಸಂಚಾಲಕರಾದ ಕಾರ್ಯ ಬಸವಣ್ಣ, ಸುರೇಶ್, ಬೊಕ್ಕಹಳ್ಳಿ ಲಿಂಗಯ್ಯ, ಪುಟ್ಟಸ್ವಾಮಿ, ಮಂಜು, ಯಶವಂತ್, ಅಭಿಷೇಕ್, ಅಶೋಕ್, ಅಭಿನಾಗಭೂಷಣ್ ಇದ್ದರು.

Translate »