ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದ 11 ಡಿ ಗ್ರೂಪ್ ನೌಕರರನ್ನು ವಜಾಗೊಳಿಸಿದ್ದ ಜಿಲ್ಲಾ ಪ್ರಧಾನ ನ್ಯಾಯಾ ಧೀಶರ ಆದೇಶವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ. ವಜಾಗೊಂಡ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ನೌಕರರು 7ನೇ ತರಗತಿಯ ನಕಲಿ ಅಂಕಪಟ್ಟಿ ನೀಡಿ ಕೆಲಸಕ್ಕೆ ಸೇರಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಪಟ್ಟಿ ಪರಿಶೀಲನೆ ವೇಳೆ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಇವರನ್ನು ವಜಾಗೊಳಿಸಲಾಗಿತ್ತು. ಈ 11 ಮಂದಿ 2011ರಲ್ಲಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದರು.
